ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾವು ನಡೆದು ಬಂದ ದಾರಿಯನ್ನು ಮರೆತಿದ್ದು, ಜತೆಗೆ ಬಗರ್‌ಹುಕುಂ ರೈತರನ್ನು ಸಹ ಮರೆತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗೇಗೌಡ ಆರೋಪಿಸಿದರು.
ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸರ್ಕಾರ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಮತ್ತು ನಿವೇಶನರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಮತ್ತು ಸಿಐಟಿಯು ತಾಲ್ಲೂಕು ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ವೇಳೆ ಅವರು ಮಾತನಾಡಿದರು.
ಅಭಿವೃದ್ಧಿ ಎಂದರೆ ಬರೀ ನಗರದ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣ ಮಾಡುವುದಲ್ಲ. ಅದರ ಜತೆ ಬಡವರ, ದೀನ ದಲಿತರ ಹಿತಾಸಕ್ತಿಗಳ ಬಗ್ಗೆ ಗಮನ ಹರಿಸುವುದಾಗಿದೆ. ಗಣಿಧಣಿಗಳು ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದು, ಸರ್ಕಾರ ಬಡವರ ಬಗ್ಗೆ ಕಾಳಜಿ ಹೊಂದಿಲ್ಲ. ಹಲವಾರು ವರ್ಷಗಳಿಂದ ಬಗರ್‌ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡಿ ಕೊಂಡು ಬಂದಿರುವ ಬಡ ರೈತರನ್ನು ಸರ್ಕಾರ ಒಕ್ಕಲೆಬ್ಬಿಸಬಾರದು. ರೈತರು ಬಗರ್‌ಹುಕುಂ ಸಾಗುವಳಿಯ ಸಕ್ರಮಕ್ಕಾಗಿ ಸಲ್ಲಿಸಿ, ತಿರಸ್ಕರಿಸಲ್ಪಟ್ಟ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಬಾಕಿ ಉಳಿದ ಆರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಸಕ್ರಮ ಗೊಳಿಸಬೇಕು ಹಾಗೂ ಸಾಗುವಳಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಬೇಕು. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಆದಿವಾಸಿಗಳ, ಬಡ ರೈತ, ಕೂಲಿಕಾರರ ಭೂಮಿಯನ್ನು ಸಕ್ರಮಗೊಳಿಸಬೇಕು. ಯಾರನ್ನೂ ಒಕ್ಕಲೆಬ್ಬಿಸಬಾರದು.
ಆದಿವಾಸಿಗಳಿಗೆ ಅರಣ್ಯ ಉತ್ಪನ್ನಗಳ ಹಕ್ಕು ನೀಡಬೇಕು. ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿ ಆದಿವಾಸಿಗಳಲ್ಲದ ಬಡ ರೈತರಿಗೂ ಹಕ್ಕುಪತ್ರ ನೀಡಬೇಕು. ರೈತರ ಭೂಮಿಯನ್ನು ಬಲವಂತವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಟ್ಟು, ಸ್ವಾಧೀನ ಪಡಿಸಿಕೊಂಡ ಭೂಮಿಗೆ ಗರಿಷ್ಠ ಪರಿಹಾರ ನೀಡಬೇಕು ಎಂದು ಎಚ್ಚರಿಸಿದರು.
ಸಿಐಟಿಯು ತಾಲ್ಲೂಕು ಸಂಚಾಲಕರಾದ ಜಿ.ಜಿ. ಅಕ್ಕಮ್ಮ ಮಾತನಾಡಿ, ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಅದಕ್ಕಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದರು.
ಸಿಐಟಿಯು ಭದ್ರಾವತಿ ತಾಲ್ಲೂಕು ಘಟಕದ ಅಧ್ಯಕ್ಷ ನರಸಿಂಹಪ್ಪ, ಪದಾಧಿಕಾರಿಗಳಾದ ಶಾರದಮ್ಮ, ಮಂಜಮ್ಮ, ಜಯಮ್ಮ, ಮಂಜುಳಮ್ಮ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.