ಭದ್ರಾವತಿ: ತಿಂಗಳ ಹಿಂದೆ ಅರಳಿಕೊಪ್ಪ ಗ್ರಾಮದ ಮನೆಯಲ್ಲಿ ಉಂಟಾದ ಅಡುಗೆ ಅನಿಲ ಸೋರಿಕೆ ಅವಘಡದಲ್ಲಿ ಗಾಯಗೊಂಡಿದ್ದ 10 ಮಂದಿಯಲ್ಲಿ ಮೂವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ತೀವ್ರ ಗಾಯಗೊಂಡಿದ್ದ ಸಿಂಧು (7), ಪ್ರಜ್ವಲ್ (9) ಹಾಗೂ ಶಾಂತಮ್ಮ (30) ಬದುಕಿಗಾಗಿ ತೀವ್ರ ಹೋರಾಟ ನಡೆಸಿ ಅಂತಿಮವಾಗಿ ಸಾವನ್ನಪ್ಪಿದ್ದಾರೆ. ಈ ಕಹಿ ಘಟನೆಯಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಘಟನೆಯಿಂದ ನೊಂದ ಇನ್ನು ನಾಲ್ವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮೂವರು ಚಿಕಿತ್ಸೆ ಫಲಪ್ರದವಾಗಿ ಮನೆಗೆ ಹಿಂದಿ ರುಗಿದ್ದಾರೆ. ಜೀವ ಬಿಟ್ಟ ಮುಗ್ಧ ಮಕ್ಕಳ ಪೋಷಕರು ಮಾತ್ರ ದಿಕ್ಕು ತೋಚದ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದಾರೆ.
ಘಟನೆ ಹಿನ್ನೆಲೆ: ತಿಂಗಳ ಹಿಂದೆ ಗ್ರಾಮದ ಕುಮಾರ್ ಎಂಬುವರ ಮನೆಯ ಅಡುಗೆ ಅನಿಲ ಸೋರಿಕೆ ವಾಸನೆ ಹರಡಿತ್ತು. ಇದರ ಸುಳಿವರಿತ ಮನೆ ಮಂದಿ ಅನಿಲ ವಿತರಣೆ ಮಾಡಲು ಬಂದಿದ್ದ ಏಜೆನ್ಸಿ ಸಿಬ್ಬಂದಿಯನ್ನು ಕರೆಸಿ ದುರಸ್ತಿ ಮಾಡಿಸಿದರು. ಇದನ್ನು ನೋಡಲು ಸೇರಿದ್ದ ಸುತ್ತಲಿನ ಜನರಲ್ಲಿ, ಮಕ್ಕಳು ನೆರೆದಿದ್ದರು. ಆಗ ಇದ್ದಕ್ಕಿದ್ದಂತೆ ಬೆಂಕಿ ಆವರಿಸಿತು.
ಮನೆಯಲ್ಲಿ ಪಸರಿಸಿದ್ದ ಅನಿಲ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಅಲ್ಲಿ ನೆರೆದಿದ್ದ ಜನರ ಮುಖ, ಕೈ ಕಾಲು, ದೇಹದ ಭಾಗವನ್ನು ಸುಟ್ಟು ಕರಕಲಾಗಿಸಿತ್ತು. ಈ ನೋವಿನ ಚೀತ್ಕಾರದ ಆಕ್ರಂದನ ಕಂಡ ಗ್ರಾಮಸ್ಥರು ಕೂಡಲೇ 10 ಮಂದಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗ ಮೆಗ್ಗಾನ್ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾ ಲಾಗಿತ್ತು.
ಚಿಕಿತ್ಸೆಗೆ ಸೀಮಿತ: ನೊಂದ ಕುಟುಂಬಳಿಗೆ ಏಜೆನ್ಸಿ ವಿಮಾ ಮೂಲಕ ಚಿಕಿತ್ಸೆ ವೆಚ್ಚ ಭರಿಸಲಾಗಿದೆ. ಆದರೆ ಸಾವ ನ್ನಪ್ಪಿದ ಮೂವರ ಕುಟುಂಬದವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. 10 ಮಂದಿಯ ಚಿಕಿತ್ಸೆ ಬಾಬ್ತು ಆಸ್ಪತ್ರೆಗೆ ನೇರವಾಗಿ ಸಂದಾಯವಾಗಿದೆ.
ಆದರೆ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಗಾಯಾಳು ಕುಟುಂಬ ಸದಸ್ಯರ ವಸತಿ, ಊಟ, ದೈನಂದಿನ ಖರ್ಚು ವೆಚ್ಚದ ಬಾಬ್ತು ಮಾತ್ರ ಗಾಯಾಳುಗಳ ಕಡೆಯವರೇ ಭರಿಸಿದ್ದಾರೆ.
ಗ್ರಾಮದ ಮುರಿಗೆಪ್ಪ ಹಾಗೂ ಇತರರು ಸಾವನ್ನಪ್ಪಿದ ಕುಟುಂಬಗಳಿಗೆ ಒಂದಿಷ್ಟು ನೆರವಿನ ಹಸ್ತ ನೀಡಿದ್ದಾರೆ. ಆದರೆ, ಸಂಪೂರ್ಣವಾಗಿ ಆರ್ಥಿಕ ನೆರವು ದೊರೆತಿಲ್ಲ ಎಂಬುದು ಗ್ರಾಮಸ್ಥರ ಕೊರಗು.
ಈ ಅನಿರೀಕ್ಷಿತ ಅವಘಡಕ್ಕೆ ಬಲಿಯಾದ ಮೂವರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ನೆರವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಲ್ಲೂಕು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬಡ ಕುಟುಂಬಗಳಿಗೆ ಸಹಾಯ ಮಾಡ ಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.