ADVERTISEMENT

ಬಸವನಹೊಳೆ: ಹೂಳೆತ್ತಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:19 IST
Last Updated 5 ಏಪ್ರಿಲ್ 2013, 9:19 IST

ಸಾಗರ: ನಗರಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಂನ ಹೂಳೆತ್ತುವಂತೆ ಒತ್ತಾಯಿಸಿ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ವರ್ಷ ಕಳೆದಂತೆ ಬಸವನಹೊಳೆ ಡ್ಯಾಂನಲ್ಲಿ ಹೂಳಿನ ಪ್ರಮಾಣ ಅಧಿಕಗೊಳ್ಳುತ್ತಿದೆ. ಇದರಿಂದಾಗಿ ಡ್ಯಾಂನಲ್ಲಿ ಸಂಗ್ರಹವಾಗುತ್ತಿರುವ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ನಗರದ ಬಡಾವಣೆಗಳು ಬೆಳೆಯುತ್ತಿದ್ದು ನೀರಿಗೆ ಹೆಚ್ಚಿನ ಬೇಡಿಕೆ ಇರುವ ಈ ಸಂದರ್ಭದಲ್ಲಿ ಡ್ಯಾಂನಲ್ಲಿ ತುಂಬುತ್ತಿರುವ ಹೂಳನ್ನು ತೆಗೆಯುವ ಬಗ್ಗೆ ನಗರಸಭೆ ಯೋಚಿಸದೆ ಇರುವುದು ಆಶ್ಚರ್ಯಕರ ಸಂಗತಿ ಎಂದು ದೂರಿದರು.

ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದನ್ನು ನಿವಾರಿಸಲು ನಗರಸಭೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದೆ. ಆದರೆ, ಈ ಸೌಲಭ್ಯ ಕೆಲವೇ ಬಡಾವಣೆಗಳಿಗೆ ಮಾತ್ರ ದೊರಕುತ್ತಿದೆ. ಹೆಚ್ಚುವರಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವಿ.ಕೆ. ವಿಜಯ ಕುಮಾರ್, ಗೌರವಾಧ್ಯಕ್ಷ ಪುರುಷೋತ್ತಮ, ಕಾರ್ಯಾಧ್ಯಕ್ಷ ಎಚ್.ಎಸ್. ಸಾಧಿಕ್, ಪ್ರಧಾನ ಕಾರ್ಯದರ್ಶಿ ತನ್ವೀರ್, ಲಿಂಗರಾಜ್ ಆರೋಡಿ, ಬಿ.ಎಂ. ದಿನೇಶ್, ಪದ್ಮನಾಭ, ಸಾವಿತ್ರಿ, ಪಾರ್ವತಮ್ಮ, ಶ್ಯಾಮಲಾ, ಶಾಹೀನಾ, ರೇಷ್ಮಾ, ರೇಣುಕಾ, ಆಶಾ, ಮೈಮುನ್ನಿಸಾ, ಅನುಸೂಯಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.