ಶಿವಮೊಗ್ಗ: ಬಹುನಿರೀಕ್ಷಿತ ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗದ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವರ ಮಂಜೂರಾತಿ ದೊರೆತರೂ ಕಾರ್ಯಾರಂಭ ಕಗ್ಗಂಟಾಗಿದೆ!
ರೈಲ್ವೆ ಇಲಾಖೆ ನಡೆಸಿದ ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ಸಮೀಕ್ಷೆ ಸಾವಿರಾರು ರೈತರನ್ನು ಬೀದಿಪಾಲು ಮಾಡಲಿದ್ದು, ಈ ಸಮೀಕ್ಷೆಯನ್ನು ಕೈಬಿಡಬೇಕು ಎಂದು ಶಿವಮೊಗ್ಗ ಹೊನ್ನಾಳಿ ತಾಲ್ಲೂಕು ಮಾರ್ಗದ ರೈತರು ಪಟ್ಟುಹಿಡಿದಿದ್ದಾರೆ. ಅಲ್ಲದೇ, ಬದಲಿ ಮಾರ್ಗದಲ್ಲಿ ಸಮೀಕ್ಷೆ ನಡೆಸಿ, ವರದಿಯನ್ನೂ ಸಲ್ಲಿಸಿದೆ. ಇದರಿಂದ ಸರ್ಕಾರಕ್ಕೆ ಈಗ ಎರಡು ಸಮೀಕ್ಷಾ ವರದಿಗಳು ಸಲ್ಲಿಕೆಯಾಗಿದೆ. ಹಾಗಾಗಿ, ಆಯ್ಕೆಯೇ ಕಗ್ಗಂಟಾಗಿದೆ.
ರೈಲ್ವೆ ಇಲಾಖೆ, ಸಮೀಕ್ಷೆಯನ್ನು ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ-ಹೊನ್ನಾಳಿ ಪಕ್ಕದಲ್ಲೇ ಟೋಪೋಶೀಟ್‌ಗಳನ್ನು ಪರಿಗಣಿಸಿ (ಭೂಮೇಲ್ಭಾಗ) ನಡೆಸಿದ್ದು, ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಮುಖಂಡರಿಂದಲೂ ಅಭಿಪ್ರಾಯ ಪಡೆಯದೇ, ತಮ್ಮ ಅನುಕೂಲಕ್ಕೆ ತಕ್ಕಂತೆ ಸಮೀಕ್ಷೆ ಮಾಡಿದೆ. ಇದರಿಂದ ಬೆಲೆಬಾಳುವ 1,170 ಎಕರೆ ಉತ್ಕೃಷ್ಟ ನೀರಾವರಿ ಜಮೀನು ಆಹುತಿಯಾಗಲಿದೆ.
ನೂರಾರು ರೈತ ಕುಟುಂಬಗಳು ಬೀದಿಗೆ ಬರಲಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಸಮೀಕ್ಷೆ ಕೈಗೆತ್ತಿಕೊಳ್ಳಬಾರದು ಎಂಬುದು ಈ ಮಾರ್ಗದ ರೈತರ ಬಿಗಿಪಟ್ಟು. ಆದರೆ, ಈಗಾಗಲೇ ಸಮೀಕ್ಷೆ ಕಾರ್ಯ ಮುಗಿದು, ಭೂಪರಿವರ್ತನೆ ಅಷ್ಟೇ ಆಗಬೇಕಿದೆ. ಹೀಗಾಗಿ ರೈತರು ಮತ್ತು ರೈಲ್ವೆ ಇಲಾಖೆ ನಡುವಿನ ಹಗ್ಗಜಗ್ಗಾಟದಿಂದ ಕಾಮಗಾರಿ ಕಾರ್ಯಾರಂಭ ವಿಳಂಬವಾಗಲಿದೆ.
ಈಗಾಗಲೇ, ಹೊಳಲೂರು-ಹೊನ್ನಾಳಿ ಮಾರ್ಗದಲ್ಲಿ ರಸ್ತೆ ವಿಸ್ತರಣೆ, ಎಡದಂಡೆ ನಾಲೆಗೆ, ತುಂಗಾ ಮೇಲ್ದಂಡೆ ಯೋಜನೆ, ಎರಡು ಹೈಟೆನ್ಷನ್ ಮಾರ್ಗಗಳಿಗಾಗಿ ಸಾಕಷ್ಟು ಜಮೀನು ಕಳೆದುಕೊಂಡಿದ್ದೇವೆ. ಮತ್ತೆ ಇದೇ ಜಾಗದಲ್ಲಿ ಭೂಸ್ವಾಧೀನ ಮಾಡಿಕೊಂಡರೆ ಎಲ್ಲಿಗೆ ಹೋಗಬೇಕು? ಎಂಬ ಪ್ರಶ್ನೆ ರೈತರದ್ದು. ಸಂಪೂರ್ಣ ನೀರಾವರಿ ಪ್ರದೇಶದಲ್ಲೇ ಹಾದುಹೋಗುವ ಉದ್ದೇಶಿತ ರೈಲ್ವೆ ಮಾರ್ಗ 78.65 ಕಿ.ಮೀ. ಇದ್ದು, 44 ಸಣ್ಣ ಮತ್ತು ಎರಡು ದೊಡ್ಡ ಸೇತುವೆಗಳು ಬರುತ್ತವೆ.
ಇವುಗಳ ಅಂದಾಜು ವೆಚ್ಚ 30 ಕೋಟಿ ಆಗುತ್ತದೆ. ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ಸಣ್ಣ ಹಿಡುವಳಿ ರೈತರಿಗೇ ಸಮಸ್ಯೆಯಾಗುತ್ತದೆ. ರೈಲ್ವೆ ಮಾರ್ಗಕ್ಕಾಗಿಯೇ ಎತ್ತರದ ಗೋಡೆಗಳನ್ನು ನಿರ್ಮಿಸಬೇಕು. ಇದರಿಂದ ಭೂಮಿ ತುಂಡಾಗಿ, ಉಪಯೋಗಕ್ಕೂ ಬರುವುದಿಲ್ಲ ಎಂದು ಜನಶಕ್ತಿ- ಜನಪರ ಹೋರಾಟ ವೇದಿಕೆ ಗೌರವಾಧ್ಯಕ್ಷ ಎಚ್.ಸಿ. ಬಸವರಾಜಪ್ಪ ಅನನುಕೂಲಗಳ ಪಟ್ಟಿ ಮುಂದಿಡುತ್ತಾರೆ.
ಪರ್ಯಾಯ ಮಾರ್ಗವಾದ ಶಿವಮೊಗ್ಗ- ಕೋಟೆಗಂಗೂರು- ಗೆಜ್ಜೇನಹಳ್ಳಿ, ಬೀರನಕೆರೆ-ಫಲವನಹಳ್ಳಿ, ಕಂಚುಗಾರನಹಳ್ಳಿ-ನ್ಯಾಮತಿ- ಮಾರಿಕೊಪ್ಪ- ಹೊನ್ನಾಳಿ- ಅರಕೆರೆ ಮೂಲಕ ರೈಲ್ವೆ ಮಾರ್ಗ ಖುಷ್ಕಿ ಜಮೀನಿಂದ ಕೂಡಿದ್ದು, ಇಲ್ಲಿ ರೈಲ್ವೆ ಮಾರ್ಗ ನಿರ್ಮಿಸಿದರೆ ಖರ್ಚೂ ಕಡಿಮೆ, ಪರಿಹಾರದ ಮೊತ್ತವೂ ಅಲ್ಪಸ್ವಲ್ಪ. ಮಾರ್ಗದ ಉದ್ದವೂ ಕಡಿಮೆ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.
ಜಿಲ್ಲಾಧಿಕಾರಿ ನಿರ್ಲಕ್ಷ್ಯ: ಆರೋಪ
ಈ ಸಂಬಂಧ ಮುಖ್ಯಮಂತ್ರಿಗೆ ಈಚೆಗೆ ಮನವರಿಕೆ ಮಾಡಿಕೊಟ್ಟಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಮುತುವರ್ಜಿವಹಿಸುತ್ತಿಲ್ಲ ಎಂದು ಬಸವರಾಜಪ್ಪ ಆರೋಪಿಸಿದ್ದಾರೆ. ಒಂದು ವೇಳೆ ರೈಲ್ವೆ ಇಲಾಖೆ ಸಲ್ಲಿಸಿದ ಸಮೀಕ್ಷೆಯನ್ನೇ ಕೈಗೆತ್ತಿಕೊಂಡಲ್ಲಿ ಬೀದಿಗಿಳಿದು ತೀವ್ರ ಹೋರಾಟ ನಡೆಸಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದರು.
ಇಲಾಖೆಯದ್ದು ತಾಂತ್ರಿಕ ಸಮೀಕ್ಷೆ
ಸಹ್ಯಾದ್ರಿ ಕಾಲೇಜಿನ ಪಾಥವೇಸ್ ವಿದ್ಯಾರ್ಥಿಗಳು 2006ರಲ್ಲೇ ನಡೆಸಿದ ಸಮೀಕ್ಷೆಯೂ ಇದಕ್ಕೆ ಸಾಮ್ಯವಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸಮೀಕ್ಷೆ ನಡೆದಿದೆ. ಇದರಲ್ಲಿ 23 ಹಳ್ಳಿಗಳು ಬರುತ್ತವೆ. ಶೇ. 95ರಷ್ಟು ಜನ ಇದನ್ನು ಸಮ್ಮತಿಸಿದ್ದಾರೆ. 2006ರಲ್ಲೇ 12 ಸಾವಿರ ಜನ ಪ್ರತಿದಿನ ಸಂಚರಿಸುತ್ತಿದ್ದರು. 800 ಬಸ್‌ಗಳು ಓಡಾಡುತ್ತವೆ. ತಲ್ಙಾ 300 ಕೋಟಿಯಷ್ಟು ಕೈಗಾರಿಕೆ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆಯಾಗುತ್ತದೆ. ಆದರೆ, ರೈಲ್ವೆ ಇಲಾಖೆ ನಡೆಸಿರುವುದು ತಾಂತ್ರಿಕ ಸಮೀಕ್ಷೆ ಅಷ್ಟೇ ಎಂದು ಪಾಥವೇಸ್‌ನ ಪದಾಧಿಕಾರಿಯೊಬ್ಬರು ವಿವರಿಸುತ್ತಾರೆ.
4ಸರ್ಕಾರಕ್ಕೆ ಎರಡೆರಡು ಸಮೀಕ್ಷಾ ವರದಿ
4ಕಗ್ಗಂಟಾದ ಕಾಮಗಾರಿ ಕಾರ್ಯಾರಂಭ
4ಪರ್ಯಾಯ ಸಮೀಕ್ಷೆಗೆ ರೈತರ ಬಿಗಿಪಟ್ಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.