ADVERTISEMENT

ಬಿಜೆಪಿ ಅಧಿಕಾರ ದುರ್ಬಳಕೆ ಮಾಡುತ್ತಿದೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 5:55 IST
Last Updated 9 ಜೂನ್ 2012, 5:55 IST

ಶಿವಮೊಗ್ಗ: ಬಿಜೆಪಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ ಪ್ರಚಾರಕ್ಕೆ ಬಿಇಒ ಅಧಿಕಾರಿಗಳ ಮೂಲಕ ಶಿಕ್ಷಕರುಗಳಿಗೆ ಒತ್ತಡ ಹೇರಿ, ಶಿಕ್ಷಕರುಗಳನ್ನು ಪ್ರಚಾರದಲ್ಲಿ  ತೊಡಗಿಸಿಕೊಳ್ಳುವ ಮೂಲಕ ಅಧಿಕಾರ ದುರ್ಬಳಕೆಯಲ್ಲಿ ತೊಡಗಿದೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸೂರ್ಯನಾರಾಯಣ ಭಟ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಡಿ.ಎಚ್. ಶಂಕರಮೂರ್ತಿ ಹಾಗೂ ಗಣೇಶ್ ಕಾರ್ಣಿಕ್ ಅವರಿಗೆ ಶಿಕ್ಷಕರ ಕ್ಷೇತ್ರದಲ್ಲಿ ಯಾವುದೇ ಬೆಂಬಲ ದೊರಕುತ್ತಿಲ್ಲ. ಹಾಗಾಗಿ ಹತಾಶರಾಗಿ, ಶಿಕ್ಷಕರನ್ನು ಓಲೈಸುವುದಕ್ಕಾಗಿ ಇಂದು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.

ಚನ್ನಗಿರಿ, ತರೀಕೆರೆ ಮತ್ತು ಕಡೂರುಗಳಲ್ಲಿ ಶಿಕ್ಷಕರುಗಳಿಗೆ ಸಭೆ ಏರ್ಪಡಿಸಿ ಬಾಡೂಟ, ಪಾನೀಯ ವ್ಯವಸ್ಥೆಗಳನ್ನು ಮಾಡುವ, ಸ್ನೇಹಮಿಲನದಂತಹ ಕಾರ್ಯಕ್ರಮಗಳ ಮೂಲಕ ಶಿಕ್ಷಕರುಗಳಿಗೆ ವಿವಿಧ ಆಸೆ, ಆಮಿಷಗಳನ್ನು ಒಡ್ಡುವಂತಹ, ಸಹಕರಿಸದವರನ್ನು ಬೆದರಿಸುವಂತಹ ಕೀಳುಮಟ್ಟಕ್ಕೆ ಬಿಜೆಪಿ ಇಳಿದಿದೆ. ಅನುದಾನರಹಿತ ಶಿಕ್ಷಕರ ಪರಿಸ್ಥಿತಿ ಹೇಳತೀರದಾಗಿದೆ ಎಂದು ಆರೋಪಿಸಿದರು.

ನಾನು ಚುನಾವಣೆಗೆ ನಿಂತಿದ್ದಕ್ಕೆ ಚಿಕ್ಕಮಗಳೂರಿನ ಶಾಸಕ ಸಿ.ಟಿ. ರವಿ, ನಿಮಗೆ ನಮ್ಮ ಸಹಕಾರ ಬೇಡವಾ ಎನ್ನುವ ರೀತಿಯಲ್ಲಿ ಬೆದರಿಕೆ ಹಾಕಿದರು. ಶಿವಮೊಗ್ಗ ಶಿಕ್ಷಕರ ಸಂಘದ ಕೆಲ ಮುಖಂಡರ ಮೂಲಕ ಸಾಕಷ್ಟು ಒತ್ತಡವನ್ನುಂಟುಮಾಡಲು ಯತ್ನಿಸಿದರು ಎಂದ ಅವರು, ಶಿಕ್ಷಕ ಬಂಧುಗಳು ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಶಿಕ್ಷಕ ಪರಶುರಾಮ್, ಸಹ ಶಿಕ್ಷಕ ಸುರೇಶ್, ದೈಹಿಕ ಶಿಕ್ಷಕ ಮುರುಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.