ADVERTISEMENT

ಬೆಳೆಹಾನಿ ಪರಿಹಾರ ವಿಳಂಬ; ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 5:07 IST
Last Updated 12 ಸೆಪ್ಟೆಂಬರ್ 2013, 5:07 IST

ಶಿವಮೊಗ್ಗ: ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ರಾಜ್ಯಸಭೆ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆಯನೂರು ಮಂಜುನಾಥ್‌ ಆರೋಪಿಸಿದರು.

  ರಾಜ್ಯದ ಸಂಸತ್‌ ಸದಸ್ಯರ ನಿಯೋಗ ಈಚೆಗೆ ಕೃಷಿ ಸಚಿವ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿ, ಬೆಳೆಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳೆಹಾನಿ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಬಂದ ಒಂದೇ ವಾರದ ಒಳಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಬೆಳೆಹಾನಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇದುವರೆಗೂ ವರದಿ ಸಲ್ಲಿಸಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಸಂಸತ್‌ ಸದಸ್ಯರ, ವಿಧಾನಸಭೆ ಮತ್ತು ವಿಧಾನ ಪರಿಷತ್ತು ಸದಸ್ಯರ ತಂಡವನ್ನು ದೆಹಲಿಗೆ ಕರೆದುಕೊಂಡು ಹೋಗಲಿ. ಇದಕ್ಕೆ ಅವರೇ ಮುಂದಾಳತ್ವ ವಹಿಸಿ, ರೈತರಿಗೆ ಪರಿಹಾರ ಒದಗಿಸಲು ದಿಟ್ಟ ನಿರ್ಧಾರ ತೆಗೆದುಕೊಳ್ಳಲಿ ಎಂದು ಅವರು ಸಲಹೆ ನೀಡಿದರು.

  ರಾಜ್ಯದ ತೋಟಗಾರಿಕಾ ಸಚಿವರು ಪಕ್ಕದ ಜಿಲ್ಲೆಯಲ್ಲೇ ಇದ್ದರೂ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದಿಲ್ಲ ಎಂದು ದೂರಿದ ಅವರು, ಬೆಳೆ ಹಾನಿ ರೈತರಿಗೆ ಈ ಹಿಂದೆ ಯಾವುದೋ ಮಾನ ದಂಡದಲ್ಲಿ ನೀಡುತ್ತಿದ್ದ ಪರಿಹಾರವನ್ನು ಇಂದಿಗೂ ನೀಡುವುದು ಬೇಡ. ಇಂದಿನ ಉತ್ಪಾದನಾ ವೆಚ್ಚಕ್ಕೆ ತಕ್ಕಷ್ಟು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಎಸ್‌.ದತ್ತಾತ್ರಿ, ಎಸ್‌.ಜ್ಞಾನೇಶ್ವರ್‌, ಎಸ್‌.ಎನ್‌.ಚನ್ನಬಸಪ್ಪ, ಎಸ್‌.ರಾಮು, ಮಧುಸೂದನ್‌ ಉಪಸ್ಥಿತರಿದ್ದರು.

ನಗರಸಭೆ; ಹೊಂದಾಣಿಕೆ ಪ್ರಯತ್ನ ನಡೆದಿದೆ
ನಗರಸಭೆ ಗದ್ದುಗೆ ಅನ್ಯ ಪಕ್ಷಗಳ ಜತೆ ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿ ಯಶಸ್ವಿಯೂ ಆಗುತ್ತದೆ. ಕಾಂಗ್ರೆಸ್‌ ಹೊರತು ಪಡಿಸಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪಕ್ಷ ಸಿದ್ಧವಿದೆ ಎಂದು ಆಯನೂರು ಮಂಜುನಾಥ ಹೇಳಿದರು.

  ನಗರಸಭೆ ಅಧಿಕಾರ ಬಿಜೆಪಿಗೇ ಸಿಗಲಿದೆ. ಈ ಬಗ್ಗೆ ನಗರಸಭೆಯ ಕೆಜೆಪಿ, ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರೊಂದಿಗೆ ಮಾತುಕತೆಯೂ ನಡೆದಿದೆ ಎಂದರು.

ಯಡಿಯೂರಪ್ಪ ಸೇರ್ಪಡೆ ಬಗ್ಗೆ ಚರ್ಚೆ ಆಗಿಲ್ಲ
ಕೆಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ವಿಧಾನಪರಿಷತ್ತು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರ ನಿವಾಸದಲ್ಲಿ ಕಳೆದ ಭಾನುವಾರ ನಡೆಸಿದ ಸಭೆಯಲ್ಲಿ ನಗರಸಭೆ ಹೊಂದಾಣಿಕೆ ಹಾಗೂ ನೆಹರೂ ಕ್ರೀಡಾಂಗಣದ ಸಿಂಥೆಟಿಕ್‌ ಟಾ್ರ್ಯಕ್‌ ವಿಚಾರದ ಬಗ್ಗೆ ಮಾತ್ರ ಚರ್ಚೆ ನಡೆಯಿತು. ಯಡಿಯೂರಪ್ಪ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಆಯನೂರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.