ADVERTISEMENT

ಬೋಧನೆ ಜತೆಗೆ ಸಂಶೋಧನೆಯೂ ಇರಲಿ

​ಪ್ರಜಾವಾಣಿ ವಾರ್ತೆ
Published 2 ಮೇ 2012, 10:05 IST
Last Updated 2 ಮೇ 2012, 10:05 IST

ಶಿವಮೊಗ್ಗ: ಕುವೆಂಪು ವಿಶ್ವ ವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಡಾ.ತಿಪ್ಪೇರುದ್ರಸ್ವಾಮಿ ಸಭಾಂಗಣದಲ್ಲಿ ಸೋಮವಾರ ಕನ್ನಡ ಭಾರತಿ ವಿಭಾಗದ ಸಾಹಿತ್ಯ ಸಂಘ ಮತ್ತು ಗೀತಾಂಜಲಿ ಪುಸ್ತಕ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಮಾಡಲಾಯಿತು.

ಡಾ.ಸಣ್ಣರಾಮ `ಅವರ ಕಾಯುತ್ತಿದ್ದಾರೆ~ (ಕಥಾಸಂಕಲನ), `ಅಳುನುಂಗಿ, ನಗು ಒಮ್ಮೆ~ (ಅನುಭವ ಕಥನ) ಹಾಗೂ ಡಾ.ಕೇಶವಶರ್ಮ ಅವರ `ಒಡೆದ ಕನ್ನಡಿ~ (ಕಾದಂಬರಿ), `ನೀಲನಕ್ಷೆ-ಇಟ್ಟ ಹೆಜ್ಜೆ-ತೊಟ್ಟ ರೂಪ~  (ವಿಮರ್ಶಾ ಸಂಕಲನ)ಗಳನ್ನು ವಿವಿ  ಕುಲಪತಿ ಪ್ರೊ.ಎಸ್.ಎ. ಬಾರಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಅಧ್ಯಾಪಕರು ಬರಿಯ ಬೋಧನೆ ಮಾಡಿದರೆ ಸಾಲದು, ಅದರ ಜತೆಯಲ್ಲಿ ಸಂಶೋಧನೆ ಕೈಗೊಳ್ಳಬೇಕು. ಸಂಶೋಧನೆಯ ಫಲಿತಗಳು ಪ್ರಕಟವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾ.ಡಿಸೋಜ ಮಾತನಾಡಿ, ಕೇಶವಶರ್ಮ ಅವರ `ಒಡೆದ ಕನ್ನಡಿ~ ಕಾದಂಬರಿಗೆ ಓದಿಸಿಕೊಂಡು ಹೋಗುವ ಗುಣವಿದೆ. ಸ್ವತಃ ವಿಮರ್ಶಕರಾದ ಶರ್ಮ ಅವರು ಇಲ್ಲಿ ತಮ್ಮ ಬರವಣಿಗೆ ವಿಧಾನವನ್ನು ಬದಲಾಯಿಸಿಕೊಂಡಿದ್ದಾರೆ. ಅವರ `ನೀಲನಕ್ಷೆ...~ ವಿಮರ್ಶ ಕೃತಿ ಕನ್ನಡ ವಿಮರ್ಶಾ ಪರಂಪರೆಯನ್ನು ಬೆಳೆಸುವ ವಿವೇಕವನ್ನು ಹೊಂದಿದೆ ಎಂದರು.

ಹಾಗೆಯೇ, ಡಾ.ಸಣ್ಣರಾಮ ಅವರ `ಅಳು ನುಂಗಿ, ನಗು ಒಮ್ಮೆ~ ಬರಹವು ಕನ್ನಡದ ಮಟ್ಟಿಗೆ ತುಂಬಾ ವಿಶಿಷ್ಟದ್ದಾಗಿದೆ. ಈ ಕೃತಿಯಲ್ಲಿ ಸಣ್ಣರಾಮ ಅವರು ತಮ್ಮ ಬಾಳಸಂಗಾತಿ ಕುರಿತು ಬರೆದಿದ್ದಾರೆ. ಕೆಲವು ಪ್ರಸಂಗಗಳನ್ನು ಓದಿದಾಗ ಕಣ್ಣುಗಳು ತೇವಗೊಳ್ಳುತ್ತವೆ ಎಂದು ವಿಶ್ಲೇಷಿಸಿದರು.

ಪುಸ್ತಕಗಳ ಕುರಿತು ವಿಮರ್ಶಕಾರದ ಡಾ.ಕುಂಸಿ ಉಮೇಶ್, ಬಿ.ಜಿ. ಹರೀಶ್  ಮಾತನಾಡಿದರು.
ಗೀತಾಂಜಲಿ ಪುಸ್ತಕ ಪ್ರಕಾಶನದ ಮೋಹನ್ ಉಪಸ್ಥಿತರಿದ್ದರು.

 ನಿವೇಶನಕ್ಕೆ ಒತ್ತಾಯ
ನಗರದ ಬಸವನಗುಡಿ ಬಡಾವಣೆಯ 5 ನೇ ತಿರುವಿನಲ್ಲಿರುವ ನಗರಸಭೆ ನಿವೇಶನವನ್ನು ಹರಾಜು ಮಾಡದೆ ಗ್ರಂಥಾಲಯ ಉದ್ದೇಶಕ್ಕಾಗಿ ಕಾಯ್ದಿರಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಘಟಕದ  ಪ್ರಧಾನ ಕಾರ್ಯದರ್ಶಿ ಬಿ.ಎ. ರಮೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.

ಸದರಿ ನಿವೇಶನವನ್ನು ಮೇ 16 ರಂದು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲಾಗುವುದೆಂದು ಕಳೆದ 20 ರಂದು  ನಗರಸಭೆ ಹರಾಜು ಪ್ರಕಟಣೆ ಹೊರಡಿಸಿದೆ. ಈ ಮೂಲಕ ನಗರಸಭೆ ನಾಗರಿಕ ವಿರೋಧಿ ನೀತಿ ಅನುಸರಿಸುತ್ತಿದೆ. ನಗರಸಭೆ ಈ ಕೂಡಲೇ ಹರಾಜು ಪ್ರಕ್ರಿಯೆಯನ್ನು ಕೈಬಿಟ್ಟು, ಗ್ರಂಥಾಲಯ ನಿರ್ಮಾಣಕ್ಕೆಂದು ಕಾಯ್ದಿರಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸಲಾಗುವುದೆಂದು  ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.