ADVERTISEMENT

ಭಯಮುಕ್ತ ಚುನಾವಣೆಗೆ ಸಿದ್ಧತೆ

ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 9:23 IST
Last Updated 16 ಮಾರ್ಚ್ 2018, 9:23 IST

ಶಿವಮೊಗ್ಗ: ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವುದನ್ನು ಖಾತ್ರಿಪಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಗುರುವಾರ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಭಯಮುಕ್ತ ವಾತಾವರಣದಲ್ಲಿ ನಿಷ್ಪಕ್ಷಪಾತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಆದರೆ, ಚುನಾವಣೆಯಲ್ಲಿ ಆಮಿಷ, ಒತ್ತಡಕ್ಕೆ ಒಳಗಾಗಬಹುದಾದ ದುರ್ಬಲ ವರ್ಗಗಳನ್ನು ಗುರುತಿಸುವ ಕಾರ್ಯವನ್ನು ಈಗಿಂದಲೇ ಆರಂಭಿಸಿ ವರದಿಯನ್ನು ನೀಡಲು ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ADVERTISEMENT

ಕೆಲವು ವರ್ಗಗಳ ದುರ್ಬಲ ಜನರನ್ನು ಭಯಪಡಿಸಿ ಅಥವಾ ಆಮಿಷಗಳನ್ನು ಒಡ್ಡಿ ಮತಗಟ್ಟೆಗಳಿಂದ ದೂರವಿರಿಸುವ ಪರಿಪಾಠವಿದೆ. ಅಂತಹ ಶಕ್ತಿಗಳನ್ನು ಹಾಗೂ ದುರ್ಬಲ ವರ್ಗಗಳನ್ನು ಸೆಕ್ಟರ್ ಅಧಿಕಾರಿಗಳು ಪೊಲೀಸ್ ಸೆಕ್ಟರ್ ಅಧಿಕಾರಿಗಳ ಸಹಾಯವನ್ನು ಪಡೆದು ತಮ್ಮ ಕಾರ್ಯ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಗುರುತಿಸುವ ಕಾರ್ಯವನ್ನು ಆರಂಭಿಸಿ ಮಾರ್ಚ್‌ 25ರ ಒಳಗಾಗಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಇದಕ್ಕಾಗಿ ಮತಗಟ್ಟೆ ವ್ಯಾಪ್ತಿಯಲ್ಲಿ ಸಭೆಗಳನ್ನು ಆಯೋಜಿಸಬೇಕು. ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಮಾತನಾಡಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಈ ಹಿಂದಿನ ಘಟನೆಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.  ಕೂಲಿಕಾರ್ಮಿಕರಿಗೆ ಮತದಾನದ ದಿನ ಹೆಚ್ಚಿನ ಕೂಲಿ ನೀಡಿ ಮತದಾನ ಮಾಡದಂತೆ ತಡೆಹಿಡಿಯುವುದು, ಹಣದ ಆಮಿಷ ಒಡ್ಡುವುದು ಅಥವಾ ಪರೋಕ್ಷವಾಗಿ ಬೆದರಿಕೆ ಹಾಕುವುದು ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದು ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುವಂತಹ ವಾತಾವರಣವನ್ನು ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.