ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಗುರುವಾರ ನಡೆದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನೆನಪಿಸಿಕೊಳ್ಳದಿರುವ ಬಗ್ಗೆ ಅವರ ಅಭಿಮಾನಿಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಭಾಷಣ ಮಾಡುತ್ತಿದ್ದಾಗ ಕುವೆಂಪು ರಂಗಮಂದಿರದ ಹೊರಭಾಗದಲ್ಲಿ ಯಡಿಯೂರಪ್ಪ ಅಭಿಮಾನಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭಾಗ್ಯಲಕ್ಷ್ಮೀ ಯೋಜನೆ ಯಡಿಯೂರಪ್ಪ ಅವರ ಕನಸಿನ ಕೂಸು. ವೇದಿಕೆಯಲ್ಲಿ ಅವರ ಭಾವಚಿತ್ರ ಹಾಕದೆ ಅವರಿಗೆ ಅಗೌರವ ಮಾಡಲಾಗಿದೆ. ಇದು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೋ ಎಂಬುದನ್ನು ತಿಳಿದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳಾದ ಬಳ್ಳೇಕೆರೆ ಸಂತೋಷ್, ವಿ. ಪೂಜಾರಿ, ರಾಜೇಶ್ ಕಾಮತ್, ಗಿರಿರಾಜ್ ಮತ್ತಿತರರು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದರು.
ತಕ್ಷಣ ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು.
ನಗರವ್ಯಾಪ್ತಿ ಕಾರಣ, ಕರೆದಿಲ್ಲ: ಇದು ನಗರವ್ಯಾಪ್ತಿಯ ಕಾರ್ಯಕ್ರಮ. ಹಾಗಾಗಿ, ಯಡಿಯೂರಪ್ಪ ಅವರನ್ನು ಕರೆಯುವ ಪ್ರಮೇಯ ಉದ್ಭವಿಸುವುದಿಲ್ಲ. ಆ ಕಾರಣಕ್ಕಾಗಿಯೇ ಜಿಲ್ಲೆಯ ಯಾವ ಶಾಸಕರನ್ನೂ ಕರೆದಿಲ್ಲ ಎಂದು ಕಾರ್ಯಕ್ರಮ ನಂತರದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ತಮ್ಮ ಭಾಷಣದಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಒಮ್ಮೆ ಪ್ರಸ್ತಾಪಿಸಿದರು. ಆದರೆ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಭಾಷಣದ ಉದ್ದಕ್ಕೂ ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸಿ, ಅಪ್ಪನ ಗುಣಗಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.