ADVERTISEMENT

ಭಾಷಾಂತರ ಸತ್ವದ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:15 IST
Last Updated 3 ಅಕ್ಟೋಬರ್ 2011, 6:15 IST

ಸಾಗರ: ಭಾಷಾಂತರ ಎಂಬುದು ನಿಜವಾದ ಅರ್ಥದಲ್ಲಿ ಸತ್ವದ ಹುಡುಕಾಟವಾಗಿದೆ ಎಂದು ಕವಯತ್ರಿ ಜ.ನಾ. ತೇಜಶ್ರೀ  ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ `ನೀನಾಸಂ~ ಸಂಸ್ಕೃತಿ ಶಿಬಿರದಲ್ಲಿ ಭಾನುವಾರ  ನಡೆದ `ಭಾಷಾಂತರ~ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷಾಂತರ ಎಂಬುದು ನಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಲೇ ಅಧೀನಕ್ಕೆ ಒಳಗಾಗುವ ಪ್ರಕ್ರಿಯೆ ಎಂದರು.

ನಮ್ಮನ್ನು ಅನುವುಗೊಳಿಸುವ, ಕೊಡುಕೊಳ್ಳುವಿಕೆಯ ವಿದ್ಯಮಾನ ಆಗಿರುವ ಭಾಷಾಂತರ ಸದ್ದು, ಮಾತು ಹಾಗೂ ಮೌನಗಳ ನಡುವೆ ನಡೆಯುವ ಅನುಸಂಧಾನದ ಕ್ರಿಯೆ ಎಂದು ಹೇಳಿದರು.

ಭಾಷಾಂತರವೆಂಬ ಸೃಜನಶೀಲ ಸಂದರ್ಭದಲ್ಲಿ ಸಮತೋಲನ ಹಾಗೂ ಸಮದೂರ ಎರಡನ್ನೂ ಕಾಯ್ದುಕೊಳ್ಳುವುದು ಮುಖ್ಯ. ಕಲಾವಿದ ಶಿಲ್ಪವನ್ನು ಕೆತ್ತುವಾಗ ಹತ್ತಿರವಿದ್ದು, ದೂರ ನಿಂತು ನೋಡಿದರೆ ಶಿಲ್ಪ ಹೇಗೆ ಕಾಣುತ್ತದೆ ಎಂದು  ಕಲ್ಪಿಸಿಕೊಂಡು ಕಲಾಕೃತಿ ರಚಿಸುವ ಹಾಗೆ ಭಾಷಾಂತರಕಾರ ಇರಬೇಕು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಲೇಖಕ ಸುಂದರ್ ಸಾರುಕ್ಕೈ, ಸಂಸ್ಕೃತಿಯ ಸೂಕ್ಷ್ಮಗಳನ್ನು ಒಳಗೊಂಡಿರುವ ಭಾಷೆ ಅವಸಾನಗೊಂಡರೆ ಅದು ಕೇವಲ ಸಂಸ್ಕೃತಿಯ ಅವಸಾನ ಮಾತ್ರವಾಗದೆ ಒಂದು ಆಲೋಚನಾ ಕ್ರಮದ ಅವಸಾನವಾಗುತ್ತದೆ ಎಂದು ವಿಶ್ಲೇಷಿಸಿದರು.

ಭಾಷೆ ನಮ್ಮ ಯೋಚನೆಗಳನ್ನು ನಿಯಂತ್ರಿಸುತ್ತದೆ. ಯೋಚನೆಗಳ ಮಿತಿ ಭಾಷೆಯ ಮಿತಿ ಕೂಡ ಹೌದು. ಭಾಷಾಂತರ ಕೇವಲ ಪದಗಳ ಅರ್ಥೈಸುವಿಕೆ ಮಾತ್ರವಲ್ಲ, ಅದೊಂದು ಒಂದು ಸಂಸ್ಕೃತಿಯು ಮತ್ತೊಂದು ಸಂಸ್ಕೃತಿಯ ಜತೆಗೆ ನಡೆಸುವ ಸಂವಾದ ಕೂಡ ಆಗಿರುತ್ತದೆ. ಆದ್ದರಿಂದ, ಭಾಷೆಯ  ಸಂಸ್ಕೃತಿಯನ್ನು ಹಿಡಿಯದಿದ್ದರೆ  ಭಾಷಾಂತರ ಸಾಧ್ಯವಿಲ್ಲ ಎಂದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ವಿಮರ್ಶಕ ಗಿರಡ್ಡಿ ಗೋವಿಂದರಾಜು ಮಾತನಾಡಿ, ಯಾವುದೇ ಒಂದು ಭಾಷೆಯಲ್ಲಿ ನಿರ್ದಿಷ್ಟವಾದ ಒಂದು ಪದ ಇಲ್ಲ ಅಂದ ಮಾತ್ರಕ್ಕೆ ಆ ಪದಕ್ಕೆ ಸಂಬಂಧಪಟ್ಟ ಭಾವನೆ ಅಥವಾ ಕಲ್ಪನೆಯೇ ಇಲ್ಲ ಎಂದು ಹೇಳಲಾಗದು. ವಸ್ತುಗಳ ಬಗ್ಗೆ ಈ ಮಾತು ನಿಜವಾದರೂ ಹಲವು ಪದಗಳಿಗೆ ಸಂಬಂಧಿಸಿದಂತೆ ಪರಿಕಲ್ಪನೆಗಳು ಅಸ್ಪಷ್ಟವಾಗಿಯಾದರೂ ಭಾಷೆಯೊಳಗೆ ಇದ್ದೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ `ನೀನಾಸಂ~ ಸಂಸ್ಥೆ ಕುರಿತು ಫಿಲಂ ಡಿವಿಷನ್ ನಿರ್ಮಿಸಿರುವ ಕಿರು ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.