ADVERTISEMENT

ಭೂಸ್ವಾಧೀನ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:26 IST
Last Updated 3 ಮಾರ್ಚ್ 2014, 10:26 IST

ಸಾಗರ: ತಾಲ್ಲೂಕಿನ ಆನಂದಪುರಂ ಹೋಬಳಿಯ ಇರುವಕ್ಕಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಭೂಸ್ವಾಧೀನ ಮಾಡುವುದನ್ನು ವಿರೋಧಿಸಿ ಶನಿವಾರ ಇರುವಕ್ಕಿ ಗ್ರಾಮಸ್ಥರು ಉಪವಿಭಾಗಾಧಿಕಾರಿ  ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಇರುವಕ್ಕಿ ಗ್ರಾಮಸ್ಥರು 500ಎಕರೆ ಭೂ ಪ್ರದೇಶವನ್ನು ಕೃಷಿ ವಿ.ವಿ.ಗಾಗಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಪ್ರದೇಶದಲ್ಲಿ ಅರಣ್ಯ ಭೂಮಿ, ಗೋಮಾಳದ ಜತೆಗೆ ಸಾಗುವಳಿ ಭೂಮಿ ಹಾಗೂ ಬಗರ್‌ಹುಕುಂ ಸಾಗುವಳಿ ಭೂಮಿ ಇದೆ. ಈ ಭಾಗದಲ್ಲಿ ಶರಾವತಿ ಜಲವಿದ್ಯುತ್ ಯೋಜನೆಯಿಂದ ನಿರಾಶ್ರಿತ ರಾಗಿರುವ ಕುಟುಂಬಗಳು ಇದ್ದು ಭೂಸ್ವಾಧೀನ ಪ್ರಕ್ರಿಯೆ ನಡೆದಲ್ಲಿ ಅವರು ಮತ್ತೊಮ್ಮೆ ನಿಗರ್ತಿಕರಾಗುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇರುವಕ್ಕಿ ಗ್ರಾಮದ ಸುತ್ತಮುತ್ತಲಿನ ಪ್ರದೇಶ ಗ್ರೀನ್‌ಬೆಲ್ಟ್‌ಗೆ ಸೇರುವುದರಿಂದ ಕೃಷಿ ವಿ.ವಿ. ಸ್ಥಾಪನೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಾಮಾಜಿಕ ಚಿಂತನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಗಣಪತಿ ಇರುವಕ್ಕಿ, ಬಿಜೆಪಿ ಮುಖಂಡ ಕೆ.ವಿ.ಪ್ರವೀಣ್‌ ಕುಮಾರ್‌, ನಮೋ ಬ್ರಿಗ್ರೇಡ್‌ನ ಕೆ.ಎಲ್. ಭೋಜರಾಜ್‌, ಗ್ರಾಮಸ್ಥರಾದ ಮಂಜಪ್ಪ, ರಮೇಶ್‌, ತಿಮ್ಮಪ್ಪ, ನಾಗರಾಜ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.