ADVERTISEMENT

ಮಂಗನ ಕಾಯಿಲೆ: ಉಪ ಆರೋಗ್ಯ ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:05 IST
Last Updated 8 ಫೆಬ್ರುವರಿ 2012, 8:05 IST

ರಿಪ್ಪನ್‌ಪೇಟೆ: ಮಂಗನ ಕಾಯಿಲೆ ಭೀತಿಯಲ್ಲಿರುವ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಾಟೆಸರ, ಹೆಬ್ಬಳ್ಳಿ, ಮಸ್ಕಾನಿ, ಯೋಗಿಮಳಲಿ, ದೋಬೈಲ್, ಚಿಟ್ಟೆಗುಂಡಿ, ಕಂತಿ, ಹಗುರ, ಗೆಂಟ್ಯಾಳ್‌ಸರ ಹಾಗೂ ಬುಕ್ಕಿವರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ಉಪ ಆರೋಗ್ಯ ಕೇಂದ್ರ ಹಾಗೂ ಸಂಚಾರಿ ವಾಹನ ವ್ಯವಸ್ಥೆಯನ್ನು ಮಂಗಳವಾರದಿಂದ ಕಲ್ಪಿಸಲಾಗಿದೆ. 

1989ರಲ್ಲಿ ಈ ಭಾಗದಲ್ಲಿ ಈ ಕಾಯಿಲೆಯಿಂದ ನರಳಿ ಸಾವು -ನೋವುಗಳಾಗಿದ್ದು, ಇದೀಗ ಮತ್ತೆ ಮರುಕಳಿಸಿರುವುದು ಜನತೆಗೆ ಭಯ ಹುಟ್ಟಿಸಿದೆ. ಸುವ್ಯವಸ್ಥಿತ ಸಾರಿಗೆ ಸಂಪರ್ಕವಿಲ್ಲದ ಹಾಗೂ ದೂರವಾಣಿ ಸೌಕರ್ಯವೂ ಇಲ್ಲದ ಈ ಸ್ಥಳಕ್ಕೆ ತುರ್ತು ವಾಹನ ವ್ಯವಸ್ಥೆ ಜತೆಯಲ್ಲಿ  ಆರೋಗ್ಯ ಸಿಬ್ಬಂದಿ ನೇಮಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಕೇಂದ್ರವು ಬುಕ್ಕಿವರೆಯಲ್ಲಿ  ಆರೋಗ್ಯ ತುರ್ತು ಚಿಕಿತ್ಸಾ ಘಟಕವನ್ನು ತೆರೆದು ಅಗತ್ಯ ಔಷಧಿಗಳನ್ನು ಪೊರೈಕೆ ಮಾಡಿದೆ.

ಭೇಟಿ: ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಸದಸ್ಯ ಕಲಗೋಡು ರತ್ನಾಕರ, ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಗೀತಾ ನಿಂಗಪ್ಪ, ಸಹಕಾರಿ ಸಂಘದ ಅಧ್ಯಕ್ಷ ಕೆ.ಜಿ ಬಸಪ್ಪ, ತಾಲ್ಲೂಕು ವೈದ್ಯಾಧಿಕಾರಿ ನಾಗರಾಜ, ವೈದ್ಯಾಧಿಕಾರಿ ವಿಜಯಕುಮಾರ, ಡಾ. ಶೋಭಾ, ಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಅವಡೆ ಶಿವಪ್ಪ, ಸದಸ್ಯರಾದ ರವಿ ಹಾಗೂ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.  ಈ ಸಂಧರ್ಭದಲ್ಲಿ ಗ್ರಾಮಸ್ಥರಿಗೆ ಔಷಧಿಗಳ ಕೊರತೆಯಾಗದಂತೆ  ಹಾಗೂ ಅಗತ್ಯ ಚಿಕಿತ್ಸೆಗೆ ಸ್ಪಂದಿಸುವಂತೆ ವೈದ್ಯಾಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷೆ ಸೂಚಿಸಿದ್ದಾರೆ.

ಈ ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಿಲೆ ಕುರಿತು ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ. ದಿವ್ಯಾ ಎಂಬ ಬಾಲಕಿಯಲ್ಲಿ  ಕಾಣಿಸಿಕೊಂಡ ಜ್ವರವೂ ರೋಗ ಲಕ್ಷಣದ ಸೂಚನೆಗಳಿರುವ ಸಾದ್ಯತೆ ಇದ್ದು, ರಕ್ತ ಪರೀಕ್ಷೆಗೆ ಕಳಹಿಸಿಕೊಡಲಾಗಿದೆ ಎಂದು ಕೆಎಫ್‌ಡಿ ಹಿರಿಯ ಅರೋಗ್ಯ ಸಹಾಯಕ ವೀರಭದ್ರಪ್ಪ ತಿಳಿಸಿದರು.  

ಆರೋಗ್ಯ ಇಲಾಖೆ ವತಿಯಿಂದ ಈಗಾಗಲೇ ಮುಂಜಾಗ್ರತೆ ಕ್ರಮ ಕೈಗೊಂಡಿದ್ದು ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ, ಜ್ವರ ಕಾಣಿಸಿಕೊಂಡರೆ ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರಿಂದ ಉಚಿತ ಚಿಕಿತ್ಸೆ ಹಾಗೂ ಸಲಹೆ ಪಡೆಯುವಂತೆ ಮನವಿ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ.ವಿಜಯ ಕುಮಾರ್ ತಿಳಿಸಿದ್ದಾರೆ.

ಕೇಂದ್ರದಲ್ಲಿ ರಕ್ತ ಪರೀಕ್ಷೆ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದ್ದು ಈ ವಿಶೇಷ ಘಟಕದಲ್ಲಿ 15ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 43 ಜನ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು ಮೂರು ಜನರ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಆಧಿಕಾರಿಗಳು ತಿಳಿಸಿದ್ದಾರೆ.

ಕಳೆದ 4-5ದಿನದಿಂದ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ರಿಪ್ಪನ್‌ಪೇಟೆ ಆರೋಗ್ಯದ ಸಿಬ್ಬಂದಿ ಭೇಟಿ ನೀಡಿ ಮನೆ ಮನೆಗೆ ತೆರಳಿ ಈ ಕಾಯಿಲೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿದ್ದಾರೆ.

ಚೆಕ್ ವಿತರಣಾ ಸಮಾರಂಭ 
 ಶಿವಮೊಗ್ಗ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಫೆ.10ರಂದು ಸಂಜೆ 5ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ನಿಗಮದ ವಿವಿಧ ಸಾಲದ ಯೋಜನೆಗಳಡಿಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.