ADVERTISEMENT

ಮತದಾರರಿಗೆ ಪ್ರೇರಣೆ ನೀಡುವ ಗೋಡೆ ಬರಹಗಳು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:29 IST
Last Updated 26 ಏಪ್ರಿಲ್ 2018, 13:29 IST
ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಅಂಡರ್‌ಪಾಸ್‌ ಮುಖ್ಯ ದ್ವಾರದಲ್ಲಿ ಜಿಲ್ಲಾ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರಮ ಅಂಗವಾಗಿ ಬುಧವಾರ ಜಿಲ್ಲಾ ಚುನಾವಣಾ ಶಾಖೆ ಚಿತ್ರಿಸಲಾಗಿದ್ದ ಗೋಡೆ ಬರಹಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್‌ ಕುಮಾರ್ ಚಾಲನೆ ನೀಡಿದರು.
ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಅಂಡರ್‌ಪಾಸ್‌ ಮುಖ್ಯ ದ್ವಾರದಲ್ಲಿ ಜಿಲ್ಲಾ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರಮ ಅಂಗವಾಗಿ ಬುಧವಾರ ಜಿಲ್ಲಾ ಚುನಾವಣಾ ಶಾಖೆ ಚಿತ್ರಿಸಲಾಗಿದ್ದ ಗೋಡೆ ಬರಹಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್‌ ಕುಮಾರ್ ಚಾಲನೆ ನೀಡಿದರು.   

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಈಗಾಗಲೇ ಚುನಾವಣಾ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್‌ ಕುಮಾರ್ ಹೇಳಿದರು.

ಶಿವಪ್ಪನಾಯಕ ವೃತ್ತದ ಅಂಡರ್‌ಪಾಸ್‌ ಮುಖ್ಯ ದ್ವಾರದಲ್ಲಿ ಜಿಲ್ಲಾ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರಮ ಅಂಗವಾಗಿ ಬುಧವಾರ ಜಿಲ್ಲಾ ಚುನಾವಣಾ ಶಾಖೆ ಚಿತ್ರಿಸಲಾಗಿದ್ದ ಗೋಡೆ ಬರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ರೀತಿಯ ಚಿತ್ರ ಬರಹಗಳು ಜನರಿಗೆ ನೇರವಾಗಿ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ತಲುಪಿಸುತ್ತವೆ. ಅಲ್ಲದೆ ಅದರ ಮಹತ್ವವನ್ನು ತಿಳಿಸಲಿವೆ. ಗೋಡೆ ಬರಹಗಳು ದಿನನಿತ್ಯ ಕಣ್ಣಿಗೆ ಕಾಣುವುದರಿಂದ ಮತದಾರರಿಗೆ ಮತದಾನದ ದಿನಾಂಕವನ್ನು ಮತ್ತೆ ಮತ್ತೆ ನೆನಪಿಸಲಿವೆ. ಈ ಗೋಡೆ ಬರಹಗಳಿಂದ ನಗರದ ಸೌಂದರ್ಯ ವೃದ್ಧಿಯಾಗಲಿದೆ ಎಂದರು.

ADVERTISEMENT

ಈ ಗೋಡೆ ಬರಹಗಳು ಮತದಾರರಿಗೆ ಆಮಿಷಗಳನ್ನು ನಿರಾಕರಿಸಿ, ತಮ್ಮಿಷ್ಟದಂತೆ ಹಕ್ಕು ಚಲಾಯಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವಲ್ಲಿ ಹಾಗೂ ಮತದಾರನೊಬ್ಬ ಚಲಾಯಿಸುವ ಮತವು ಕೇವಲ ಒಂದು ಮತವಲ್ಲ ಬದಲಾಗಿ ಅದು ಪ್ರಜಾಪ್ರಭುತ್ವದ ಮೌಲ್ಯ ಎಂಬುದನ್ನು ತಿಳಿಸಲು ಸಹಕಾರಿಯಾಗಲಿವೆ ಎಂದರು.

ಪಾಲಿಕೆ ಆಯುಕ್ತ(ಪ್ರಭಾರ) ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣಾಧಿಕಾರಿ ಮಹಾದೇವ ಎ.ಮುರಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚಾದೊ, ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಶಿವಯೋಗಿ ಎಲಿ ಉಪಸ್ಥಿತರಿದ್ದರು.

ಮತದಾರರ ವಾಲಿಬಾಲ್ ಕಪ್ ಕ್ರೀಡಾಕೂಟಕ್ಕೆ ಚಾಲನೆ

ಶಿವಮೊಗ್ಗ: ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾಲಿಬಾಲ್ ಟೂರ್ನಮೆಂಟ್ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ರಾಕೇಶ್ ಕುಮಾರ್ ಹೇಳಿದರು.

ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ  ‘ವೋಟರ್ಸ್ ವಾಲಿಬಾಲ್ ಕಪ್’ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನ ಬಳಿ ಚುನಾವಣಾ ಗುರುತಿನ ಚೀಟಿ ಇರುವುದು ಕಡ್ಡಾಯವಾಗಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಪ್ರಜಾಪ್ರಭುತ್ವ ನೀಡಿರುವ ಅಮೂಲ್ಯವಾದ ಹಕ್ಕನ್ನು ಚಲಾಯಿಸಿ ಎಂಬ ಧ್ಯೇಯದೊಂದಿಗೆ ವೋಟರ್ಸ್ ಕಪ್ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲು ಸಹ ಉದ್ದೇಶಿಸಲಾಗಿದೆ ಎಂದರು.

ಆರೋಗ್ಯ ತಪಾಸಣಾ ಶಿಬಿರ: ಇದೇ ಸಂದರ್ಭದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಆರೊಗ್ಯ ಉಚಿತ ತಪಾಸಣಾ ಶಿಬಿರವನ್ನು ನಡೆಸಲಾಯಿತು.

ತಾಲ್ಲೂಕು ಪಂಚಾಯ್ತಿ ಇಒ ಅತೀಕ್ ಬಾಷಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.