ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಶಿವಮೊಗ್ಗ ತಾಲ್ಲೂಕಿನ ಸಿರಿಗೆರೆ ವಲಯದ ಕಲ್ಕುಚ್ಚಿ ಗ್ರಾಮದಂಚಿನ ದಟ್ಟ ಅರಣ್ಯದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ಕಳೆದ ಹದಿನೈದು ದಿನಗಳ ಹಿಂದೆ ಈ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಈಗ ಅಳಿದುಳಿದ ಅರಣ್ಯದಲ್ಲಿ ಮತ್ತೆ ದುತ್ತನೆ ಎದುರಾಗಿದೆ.
ಕಲ್ಕುಚ್ಚಿಯಿಂದ ಹಣಗೆರೆಯವರೆಗಿನ ಐದಾರು ಕಿ.ಮೀ. ರಸ್ತೆಯ ಎರಡೂ ಬದಿಯಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವುದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ಕಂಡುಬಂತು. ಅಲ್ಲದೇ, ಅರಣ್ಯದ ಮಧ್ಯಭಾಗದಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಅಪಾರ ಅರಣ್ಯ ಸಂಪತ್ತು ನಾಶವಾಗಿರಬಹುದು ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ಅಂದಾಜಿಸಿದ್ದಾರೆ.
ಬೆಲೆ ಬಾಳುವ ತೇಗ, ನಂದಿ, ಬೀಟೆ ಮರಗಳು ಬೆಂಕಿಗೆ ಆಹುತಿಯಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಂಕಿಗೆ ಬಿದಿರಿನ ಮೆಳೆಗಳು ದೊಡ್ಡ ಶಬ್ದದೊಂದಿಗೆ ಸಿಡಿಯುತ್ತ, ಇನ್ನಷ್ಟು ಬೆಂಕಿ ಹಬ್ಬಿಸುತ್ತಿದ್ದವು. ಕಾಡೆಮ್ಮೆಗಳ ಹಿಂಡು ಬೆಂಕಿ ಕಂಡು ದಿಕ್ಕಾಪಾಲಾಗಿ ಓಡುತ್ತಿರುವುದು ಕಂಡು ಬಂತು.
ಬಿಸಿಲು ಝಳ ಏರುತ್ತಿದ್ದಂತೆ ಬೆಂಕಿಯ ಕಾವು ಹೆಚ್ಚಾಗಿ ಆ ರಸ್ತೆಯಲ್ಲಿ ಸಂಚಾರವೇ ಕೆಲಕಾಲ ಕಷ್ಟವಾಯಿತು. ಇಷ್ಟಾದರೂ ಅಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಇರಲಿಲ್ಲ. ರಸ್ತೆಯಲ್ಲಿ ಓಡಾಡುವ ಜನ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಅರಣ್ಯ ಸಂಪತ್ತನ್ನು ನೋಡಿ ಮರುಗಿ ಮುಂದಕ್ಕೆ ಹೋಗುತ್ತಿದ್ದರು.
ಕ್ಷಣಮಾತ್ರದಲ್ಲಿ ಆಳೆತ್ತರದ ಮರಗಳನ್ನು ಆಪೋಶನ ತೆಗೆದುಕೊಳ್ಳುತ್ತಿದ್ದ ಬೆಂಕಿಯ ಆರ್ಭಟದ ಎದುರು ಎಲ್ಲರೂ ಅಸಹಾಯಕರಾಗಿದ್ದರು.
ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್ `ಪ್ರಜಾವಾಣಿ~ ಜತೆ ಮಾತನಾಡಿ, `ಹೊಸದಾಗಿ ಕಾಣಿಸಿಕೊಂಡ ಕಾಳ್ಗಿಚ್ಚಿನ ಬಗ್ಗೆ ಈಗಷ್ಟೇ ಮಾಹಿತಿ ಬಂದಿದ್ದು, ಅಂತಹ ದೊಡ್ಡ ಅನಾಹುತವಾಗಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.