ADVERTISEMENT

ಮತ್ತೆ ಕೇಳಿದ ರೈಲಿನ ಚುಕುಬುಕು ಸದ್ದು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:35 IST
Last Updated 1 ಫೆಬ್ರುವರಿ 2011, 6:35 IST

ಸಾಗರ: ಇಲ್ಲಿನ ರೈಲ್ವೆ ಹೋರಾಟ ಸಮಿತಿಯ ಆರು ವರ್ಷಗಳ ಚಳವಳಿಗೆ ಫಲ ದಕ್ಕುವ ಕಾಲ ಸನ್ನಿಹಿತವಾಗಿದೆ. ರೈಲ್ವೆ ಬ್ರಾಡ್‌ಗೇಜ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಸೋಮವಾರ ಪರೀಕ್ಷಾರ್ಥವಾಗಿ  ಆನಂದಪುರಂನಿಂದ ತಾಳಗುಪ್ಪದವರೆಗೆ ರೈಲ್ವೆ ಎಂಜಿನ್ ಸಂಚರಿಸಿ ಮಾರ್ಗದ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿತು.

ಪರೀಕ್ಷಾರ್ಥವಾಗಿ ಮಧ್ಯಾಹ್ನ 1.30ಕ್ಕೆ ಇಲ್ಲಿನ ರೈಲ್ವೆನಿಲ್ದಾಣಕ್ಕೆ ಚುಕುಬುಕು ಸದ್ದಿನೊಂದಿಗೆ ರೈಲ್ವೆ ಎಂಜಿನ್ ಆಗಮಿಸಿದಾಗ ಅದನ್ನು ಸ್ವಾಗತಿಸಲು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಎಂಜಿನ್ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ಕೇಕೆ ಹಾಕಿ ಕುಣಿದರು. ಕ್ರಿಕೆಟ್ ಪಂದ್ಯದಲ್ಲಿ ಎದುರಾಳಿ ತಂಡದ ವಿಕೆಟ್ ಬಿದ್ದಾಗ ಫೀಲ್ಡಿಂಗ್ ತಂಡ ಕುಣಿದು ಕುಪ್ಪಳಿಸುವಂತೆ ಮಕ್ಕಳು ಕೈಯಿಗೆ ಕೈ ಹೊಡೆದು ಸಂತಸಪಟ್ಟರು.

ಶಿವಮೊಗ್ಗ-ತಾಳಗುಪ್ಪ ಬ್ರಾಡ್‌ಗೇಜ್ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು, ನಗರಸಭಾ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ರಾಜಕೀಯ ಪಕ್ಷಗಳ ಮುಖಂಡರು ಸ್ಥಳದಲ್ಲಿ ಹಾಜರಿದ್ದು, ರೈಲಿನ ಸಂಚಾರ ಆರಂಭವಾಯಿತು ಎನ್ನುವಂತೆಯೇ ಹರ್ಷ ವ್ಯಕ್ತಪಡಿಸಿದರು.

ರೈಲ್ವೆ ಅಧಿಕಾರಿಗಳ ಮೂಲದ ಪ್ರಕಾರ ಬರುವ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ತಾಳಗುಪ್ಪದವರೆಗೆ ರೈಲು ಸಂಚಾರ ಆರಂಭವಾಗುವುದು ಖಚಿತ ಎನ್ನಲಾಗಿದೆ. 

 ಆರು ವರ್ಷಗಳ ಹಿಂದೆ ಊರು ಅಭಿವೃದ್ಧಿಯಾಗಬೇಕು ಎಂಬ ಆರೋಗ್ಯಕರ ಮನಸ್ಸು ಹೊಂದಿದ ಹತ್ತಾರು ಮಂದಿ ಸೇರಿ ರೈಲ್ವೆ ಹೋರಾಟ ಸಮಿತಿ ರಚಿಸಿದ್ದರು. ಈ ಸಮಿತಿ ಎಡೆಬಿಡದೇ ಎಲ್ಲಾ ಪಕ್ಷಗಳ ಪ್ರತಿನಿಧಿಗಳನ್ನು ಬೆನ್ನು ಹತ್ತಿದ್ದರ ಪರಿಣಾಮ ಅಂತೂ ಈ ಭಾಗಕ್ಕೆ ಮತ್ತೆರೈಲು ಸಂಚಾರದ ಭಾಗ್ಯ ದೊರಕುವ ಕಾಲ ಹತ್ತಿರವಾದಂತಾಗಿದೆ.

ರೈಲ್ವೆ ಹೋರಾಟ ಸಮಿತಿ ಯಾವತ್ತೂ ರೈಲುತಡೆ, ರಸ್ತೆತಡೆ, ಧರಣಿ ಸತ್ಯಾಗ್ರಹ, ಬಂದ್‌ನಂತಹ ಮಾರ್ಗ ಹಿಡಿಯದೇ ಇಂತಹ ಪಕ್ಷ, ಇಂತಹ ರಾಜಕಾರಣಿಗಳು ಎಂದು ಮುಖ ನೋಡದೇ ಊರಿಗೆ ಬಂದವರಿಗೆಲ್ಲಾ ಮನವಿ ಕೊಟ್ಟು ಕೆಲಸ ಮಾಡಿಸಿಕೊಂಡಿದ್ದು, ವಿಶೇಷ. ಹೀಗಾಗಿ, ಒಂದರ್ಥದಲ್ಲಿ ಸಮಿತಿಯ ‘ಗಾಂಧಿಗಿರಿ’ ಮಾದರಿಯ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ರೈಲು ಬರುವುದೇನೋ ಖಚಿತ. ಆದರೆ, ರೈಲಿನ ವೇಳಾಪಟ್ಟಿ ಸಾರ್ವಜನಿಕರಿಗೆ ಅನುಕೂಲಕರವಾಗಿರಬೇಕು ಎಂಬ ನಿರೀಕ್ಷೆಯೂ ಅಪಾರವಾಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಮೈಸೂರಿಗೆ ಚಲಿಸುವ ರೈಲಿನ ಸಂಚಾರವನ್ನು ತಾಳಗುಪ್ಪದಿಂದಲೇ ಆರಂಭಿಸಬೇಕು ಎಂದು ಈಗಾಗಲೇ ಹೋರಾಟ ಸಮಿತಿಯವರು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ನೀಡಿದ್ದಾರೆ. ಈ ಬೇಡಿಕೆ ಈಡೇರಿದರೆ ಸಮಿತಿಯ ಹೋರಾಟಕ್ಕೆ ಸಂಪೂರ್ಣ ಸಾರ್ಥಕತೆ ಸಿಕ್ಕಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.