ADVERTISEMENT

ಮತ ಕ್ರೋಡೀಕರಣಕ್ಕೆ ಜಾತಿ ಓಲೈಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:34 IST
Last Updated 13 ಏಪ್ರಿಲ್ 2013, 5:34 IST

ಶಿವಮೊಗ್ಗ: ಜಾತಿ ಓಲೈಸಿ; ನಿಂದಿಸಿ ಮತದಾರರನ್ನು ಸೆಳೆಯುವ ತಂತ್ರ, ರಾಜಕಾರಣದ ತಂತ್ರಗಾರಿಕೆಯ ಪ್ರಮುಖ ಅಸ್ತ್ರಗಳಲ್ಲೊಂದು. ಸಂದರ್ಭ ಸಿಕ್ಕಾಗಲೆಲ್ಲ ಬತ್ತಳಿಕೆಯಲ್ಲಿರುವ ಈ ಅಸ್ತ್ರ ಬಳಸುವುದರಲ್ಲಿ ರಾಜಕಾರಣಿಗಳು ನಿಷ್ಣಾತರು.

ಅದು ಸ್ಥಳೀಯ ಸಂಸ್ಥೆ ಚುನಾವಣೆಯೇ ಆಗಿರಲಿ, ಲೋಕಸಭಾ ಚುನಾವಣೆಯೇ ಇರಲಿ, ರಾಜಕೀಯ ರಂಗದಲ್ಲಿ ಮೊಟ್ಟಮೊದಲು ಗಣನೆಗೆ ಬರುವುದು ಜಾತಿ ಬಲಾಬಲದ ಲೆಕ್ಕಾಚಾರ. 

ಯಾವ ಜಾತಿಯ ಜನ ಎಲ್ಲಿ, ಎಷ್ಟು ಸಂಖ್ಯೆಯಲ್ಲಿ ಇದ್ದಾರೆ. ಕ್ಷೇತ್ರದ ಪ್ರಬಲ ನಾಯಕ ಯಾರು. ಆತ ಯಾವ ಜನಾಂಗಕ್ಕೆ ಸೇರಿದ್ದಾನೆ. ಯಾವ ಜನಾಂಗದ ನಾಯಕನ ಸ್ಪರ್ಧೆ ಪಕ್ಷಕ್ಕೆ ಲಾಭ ತರಲಿದೆ ಎಂಬುದು ರಾಜಕೀಯ ಪಕ್ಷಗಳ ತಂತ್ರಗಾರಿಕೆ ಆಗಿದ್ದರೆ, ಯಾವ ಮುಖಂಡನಿಗೆ ಬೆಂಬಲ ನೀಡಬೇಕು, ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು. ಬೆಂಬಲ ನೀಡಿದರೆ ತಮ್ಮ ಜನಾಂಗಕ್ಕೆ ಮನ್ನಣೆ ದೊರೆಯಲಿದೆಯೇ ಎಂಬುದು ಆಯಾ ಜಾತಿ ಮುಖಂಡರ, ಮಠಾಧೀಶರ ಗುಣಾಕಾರ- ಭಾಗಾಕಾರ.
ಇತ್ತ ಚುನಾವಣೆ ಆರಂಭ ಆಗುತ್ತಿದ್ದಂತೆ ಅತ್ತ ನಾಯಕರಲ್ಲಿ ಕೆಲ ಜಾತಿಗಳ ಮೇಲೆ ಅಗಾಧ ಪ್ರೀತಿ; ಇನ್ನು ಕೆಲ ಜಾತಿ ಮೇಲೆ ಸಹಿಸಲಾರದಷ್ಟು ಅಸಮಾಧಾನ  ಇದ್ದಕಿದ್ದಂತೆ ಉದ್ಭವವಾಗುತ್ತದೆ.

ಅವರು ಜಾತಿ ವಿಷ ಬೀಜ ಬಿತ್ತುತ್ತಾರೆ. ಅವರು ಸೌಹಾರ್ದ ಹಾಳುಗೆಡುವುತ್ತಾರೆ ಎಂದು ಆಪಾದಿಸುತ್ತ, ತಾವು ಜಾತ್ಯತೀತರು, ತಮ್ಮದು ಸರ್ವರಿಗೂ-ಸಮಬಾಳು ತತ್ವಾದರ್ಶ ಎಂದು ತಮ್ಮ ಬೆನ್ನು ತಟ್ಟಿಕೊಳ್ಳುತ್ತಲೇ ಚುನಾವಣಾ ಸಂದರ್ಭದಲ್ಲಿ ಜಾತಿ ಓಲೈಕೆ ರಾಜಕಾರಣದ ಕೆಂಭೂತ ತನ್ನ ಗರಿಗೆದರುತ್ತದೆ.    

2010ರ ಲೋಕಸಭಾ ಚುನಾವಣೆಯಲ್ಲಿ ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ರಾಮಚಂದ್ರಪುರ ಮಠದ ರಾಘವೇಶ್ವರ ಸ್ವಾಮೀಜಿ ಮೇಲೆ ಪದೇ -ಪದೇ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿಯೇತರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದರು. ಇಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಪ್ರಮತಗಳನ್ನು ಬಿಜೆಪಿಯತ್ತ ಓಲೈಸಿಕೊಳ್ಳಲು ಸರಣಿ ವಿವಾದಾತ್ಮಕ ಭಾಷಣಗಳನ್ನು ಮಾಡುತ್ತಿದ್ದಾರೆ.

ಬಂಗಾರಪ್ಪ ತಮ್ಮ ಭಾಷಣದಲ್ಲಿ ರಾಮಚಂದ್ರಾಪುರ ಮಠ; ಬಿಜೆಪಿ ಮಠ. ರಾಘವೇಶ್ವರ ಭಾರತಿ ಸ್ವಾಮೀಜಿ; ಬಿಜೆಪಿ ಸ್ವಾಮೀಜಿ. ಅವರು ಏನು ಸಾಧನೆ ಮಾಡಿದ್ದಾರೆ? ಮಠದ ಸಾಧನೆ ಏನು? ಗೋವುಗಳನ್ನು ಕಟ್ಟಿಕೊಂಡರೆ ಅದು ಸಾಧನೆಯೇ ಎಂದು ಮೇಲಿಂದ ಮೇಲೆ ವಾಗ್ದಾಳಿ ನಡೆಸಿ, ಆರ್.ಎಸ್.ಎಸ್. ತತ್ವಗಳ ಮೇಲೆ ದಾಳಿ ನಡೆಸುತ್ತ ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿದ್ದರು.

ಈ ವಾಗ್ದಾಳಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿ, ಚರ್ಚೆಗೆ ಗ್ರಾಸವಾಗಿದ್ದರು ಸಹ ಅವರ, ಎಚ್ಚರಿಕೆಯ ಮಾತುಗಳು, ಬಳಸಿದ ಭಾಷೆ ಆಯೋಗದ ಕೆಂಗಣ್ಣಿಗೆ ಗುರಿಯಾಗಲಿಲ್ಲ. ಆದರೆ, ಅವರ ಜಾತಿ ಓಲೈಕೆ ಪ್ರಯತ್ನ ಫಲಿಸಲೂ ಇಲ್ಲ. ಗೆಲುವನ್ನೂ ತಂದು ಕೊಡಲಿಲ್ಲ.

ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಈಗ ಓಲೈಕೆಯಲ್ಲಿ ನಿರತರು. ಶಿವಮೊಗ್ಗ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ವಿಪ್ರ ಅಭ್ಯರ್ಥಿ ಹೆಸರು ಘೋಷಣೆ ಆದ ಮಾರನೇ ದಿನವೇ ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣರು ಬಿಜೆಪಿ ಕೈ ಬಿಡುವುದಿಲ್ಲ; ಶಿವಮೊಗ್ಗದಲ್ಲಿ ಜಾತಿ ಆಧಾರದಲ್ಲಿ ಮತಚಲಾವಣೆ ಆಗುವುದಿಲ್ಲ ಎಂದು ಹೇಳಿ ವಿಪ್ರರ ಓಲೈಕೆಗೆ ಚಾಲನೆ ನೀಡಿದರು. ನಂತರದ ಕಾರ್ಯತಂತ್ರವಾಗಿ ವಿಪ್ರ ಮುಖಂಡರೊಂದಿಗೆ ಆಂತರಿಕ ಸಭೆಗಳನ್ನೂ ನಡೆಸಿದರು.

ಮಂಗಳವಾರ ನಡೆದ ವಿಪ್ರ ವೇದಿಕೆಯ ಕೃತಜ್ಞತಾ ಅರ್ಪಣೆ ಸಮಾರಂಭದಲ್ಲಿ ನೀತಿ ಸಂಹಿತೆ ಲೆಕ್ಕಿಸದೆ ಸಮುದಾಯಕ್ಕೆ 25 ಎಕರೆ ಜಮೀನು ಮಂಜೂರು ಮಾಡುವುದಾಗಿ ಘೋಷಣೆ ಮಾಡಿದರು. ಜಿಹಾದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರು. ಬೇಕಾದರೆ ದಾಖಲೆಗಳನ್ನು ನೀಡುತ್ತೇನೆ ಎಂದೂ ಹೇಳಿದರು. ಈ ಕುರಿತು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕ 2ನೇ ಜೆಎಂಎಫ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ಚುನಾವಣಾ ಆಯೋಗ ಸಹ ಕೋಟೆ ಪೊಲೀಸ್ ಠಾಣೆಯಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದೆ.

ಕೆಜೆಪಿಯಿಂದ ಲಿಂಗಾಯತ ಮತಗಳನ್ನು ಬಿಜೆಪಿ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಸಂಖ್ಯೆಯಲ್ಲಿ ಪ್ರಬಲವಾಗಿರುವ ಬ್ರಾಹ್ಮಣ ಮತಗಳು ಕಾಂಗ್ರೆಸ್‌ನತ್ತ ಹೋಗದಂತೆ ತಡೆಯಲು ಕೆ.ಎಸ್. ಈಶ್ವರಪ್ಪ ಮಾಡುತ್ತಿರುವ ಓಲೈಕೆ ರಾಜಕಾರಣ ಫಲ ನೀಡುವುದೇ ಎಂಬ ಪ್ರಶ್ನೆಗೆ ಮೇ 5ರಂದು ಸಿಗಲಿದೆ ಮತದಾರನ ಉತ್ತರ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.