ADVERTISEMENT

ಮದ್ಯದ ಅಂಗಡಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:16 IST
Last Updated 5 ಏಪ್ರಿಲ್ 2013, 9:16 IST

ಶಿವಮೊಗ್ಗ: ಸಾರ್ವಜನಿಕ ವಸತಿ ಪ್ರದೇಶದಲ್ಲಿ ಮದ್ಯದ ಅಂಗಡಿ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನಿವಾಸಿಗಳು ಗುರುವಾರ ಗಾಂಧಿನಗರ ನಿವಾಸಿಗಳ ಸಂಘದ ನೇತೃತ್ವದಲ್ಲಿ ಅಬಕಾರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಠಾಣೆಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಗಾಂಧಿನಗರ 1ನೇ ತಿರುವಿನಲ್ಲಿ ಹೊಸದಾಗಿ ಬೇರೆ ಕಡೆಯಿಂದ ಮದ್ಯದ ಅಂಗಡಿಯನ್ನು ವರ್ಗಾವಣೆ ಮಾಡಿಸಿ ಆರಂಭಿಸುವ ಬಗ್ಗೆ ಅಬಕಾರಿ ಇಲಾಖೆ ವತಿಯಿಂದ ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ಉದ್ದೇಶಿತ ಮದ್ಯದ ಅಂಗಡಿಯ ಅಕ್ಕಪಕ್ಕದಲ್ಲಿ ಆಸ್ಪತ್ರೆಗಳು, ಕಂಪ್ಯೂಟರ್ ತರಬೇತಿ ಕೇಂದ್ರ, ಮಹಿಳೆಯರ ವಸತಿನಿಲಯ ಮತ್ತಿತರ ಸಾರ್ವಜನಿಕ ಸೌಲಭ್ಯ ಕೇಂದ್ರಗಳಿದ್ದು, ಮದ್ಯದ ಅಂಗಡಿ ಆರಂಭವಾದಲ್ಲಿ ಸಾರ್ವಜನಿಕ ನೆಮ್ಮದಿ ಹಾಗೂ ಶಾಂತಿಯುತ ಬದುಕಿಗೆ, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗಲಿದೆ ಎಂದು ದೂರಿದರು.

ನಗರದ ಬೇರೆಡೆಯಿಂದ ಮದ್ಯದಂಗಡಿ ವರ್ಗಾಯಿಸುವುದಾಗಲಿ ಅಥವಾ ಹೊಸದಾಗಿ ಮದ್ಯದಂಗಡಿ ಆರಂಭಿಸಲು ಪರವಾನಗಿ ನೀಡಿದರೆ ತೀವ್ರ ಹೋರಾಟ ಅನಿವಾರ್ಯ. ಹಾಗೆಯೇ, ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಂಘ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮೊದಲು ಅಬಕಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಂತರ ಜಯನಗರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಡಿ.ಆರ್. ಭರತ್‌ಕುಮಾರ್ ಅವರಿಗೆ ಸಂಘದ ಅಧ್ಯಕ್ಷ ಎಚ್.ಎಂ. ಕೊಟ್ರಯ್ಯ, ಕಾರ್ಯದರ್ಶಿ ಎಸ್.ಎಸ್. ಶಿವಪ್ರಕಾಶ್, ನಗರಸಭಾ ಸದಸ್ಯ ಎಸ್.ಎಸ್. ಸತೀಶ್, ಬೆಲಗೂರು ಮಂಜುನಾಥ್, ಉಮೇಶ್, ರಾಜೇಶ್ ಕಾಮತ್ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.