ADVERTISEMENT

ಮನುಷ್ಯನ ಆಧುನಿಕ ಬದುಕಿನಿಂದ ಕಾಯಿಲೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 5:50 IST
Last Updated 13 ಜುಲೈ 2012, 5:50 IST

ಭದ್ರಾವತಿ: `ಆಧುನಿಕ ಯಾಂತ್ರಿಕ ಬದುಕು ಹಾಗೂ ಶ್ರಮರಹಿತ ಜೀವನ ಪದ್ಧತಿ ಕಾರಣ ಹಲವರಲ್ಲಿ ಕಾಯಿಲೆಗಳ ಪ್ರಮಾಣ ಹೆಚ್ಚಾಗಿದೆ~ ಎಂದು ಡಾ.ಕವಿತಾ ಭಟ್ ಹೇಳಿದರು.

ಇಲ್ಲಿನ ಶಾಶ್ವತಿ ಮಹಿಳಾ ಸಮಾಜ ಈಚೆಗೆ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಆರೋಗ್ಯ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಸಾಮಾಜಿಕ ಪರಿಸರ, ಚಿಂತೆ ಹಾಗೂ ಮಾನಸಿಕ ಖಿನ್ನತೆ ಬಹಳಷ್ಟು ಕಾಯಿಲೆಗಳ ಆರಂಭಕ್ಕೆ ಮೂಲ ಕಾರಣ. ಮಹಿಳೆಯರು ಮನೆ ಜವಾಬ್ದಾರಿ ಜತೆ ಗಂಡ, ಮಕ್ಕಳ ಕಡೆಗೆ ಹೆಚ್ಚು ಆದ್ಯತೆ ನೀಡುವುದು ಸಹ ಅನಾರೋಗ್ಯ ಹೆಚ್ಚಳಕ್ಕೆ ಕಾರಣ ಎಂದರು.

ಬಹಳಷ್ಟು ಕಾಯಿಲೆಗೆ ಔಷಧಿ ಸೇವನೆ ಪರಿಹಾರವಲ್ಲ. ಅದಕ್ಕೆ ಬದಲಾಗಿ ಮಾನಸಿಕ ಚಿಕಿತ್ಸೆ, ಯೋಗ, ಧ್ಯಾನ, ವ್ಯಾಯಾಮ, ಬೆಳಗಿನ ನಡಿಗೆ, ಸಂಘ-ಸಂಸ್ಥೆಗಳ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗುವುದನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ನಂತರ ನಡೆದ ಸಂವಾದದಲ್ಲಿ ಜನ ಸಾಮಾನ್ಯರು ಹಾಗೂ ಮಹಿಳೆಯರಲ್ಲಿ ಕಂಡುಬರುವ ರಕ್ತ ಹೀನತೆ, ಅಧಿಕ ರಕ್ತದ ಒತ್ತಡ, ಮೂಳೆಸವೆತ ಸೇರಿದಂತೆ ಇನ್ನಿತರ ತೊಂದರೆಗಳ ಕುರಿತು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಸಮಾಜದ ಅಧ್ಯಕ್ಷೆ ಯಶೋದಾ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ನಂಜೇಗೌಡ ಪ್ರಾರ್ಥಿಸಿದರು. ವಸುಂಧರಾ ಸ್ವಾಗತಿಸಿದರು. ನಾಗರತ್ನಾ ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ನಂದಿನಿ ಮಲ್ಲಿಕಾರ್ಜುನ ವರದಿ ವಾಚಿಸಿದರು. ಬಿ.ಎಸ್. ರೂಪಾರಾವ್ ವಂದಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.