ADVERTISEMENT

ಮಾನಸಿಕ ಅಸ್ವಸ್ಥರ ಬಾಳು ಬೆಳಗುವ ಶಶಿ

ಅನಿಲ್ ಸಾಗರ್
Published 25 ನವೆಂಬರ್ 2017, 9:34 IST
Last Updated 25 ನವೆಂಬರ್ 2017, 9:34 IST
ಎಂ.ಎಸ್‌.ಶಶಿಕಾಂತ್‌.
ಎಂ.ಎಸ್‌.ಶಶಿಕಾಂತ್‌.   

ಶಿವಮೊಗ್ಗ : ಹೆತ್ತವರನ್ನೇ ಬೀದಿಗೆ ತಳ್ಳುವ ಇಂದಿನ ದಿನಗಳಲ್ಲಿ ಇಲ್ಲೊಬ್ಬರು ರಸ್ತೆಯಲ್ಲಿರುವ ಮಾನಸಿಕ ಅಸ್ವಸ್ಥರನ್ನು ಮಗುವಿನಂತೆ ಆರೈಕೆ ಮಾಡಿ,  ಸಮಾಜದ ಮುಖ್ಯವಾಹಿನಿಗೆ ಕರೆತರುವ ಕಾಯಕದಲ್ಲಿ ತೊಡಗಿದ್ದಾರೆ.

ವೃತ್ತಿಯಲ್ಲಿ ಪೇಂಟರ್ ಆಗಿರುವ ಸಾಗರ ಸಮೀಪ ಗಾಂಧಿನಗರದ ಕಂಬಳಕೇರಿಯ ನಿವಾಸಿ ಎಂ.ಎಸ್‌.ಶಶಿಕಾಂತ್‌ ಕೇವಲ ತನ್ನ ಮನೆ, ತನ್ನ ಕೆಲಸ ಎನ್ನದೆ ತಾನು ಸಮಾಜಕ್ಕೆ ಉಪಯೋಗವಾಗಬೇಕು ಎನ್ನುವ ಕಾರಣಕ್ಕೆ ಛಲತೊಟ್ಟು ಅನಾಥ ಮಾನಸಿಕ ಮುಕ್ತ ಕರ್ನಾಟಕ ಎಂಬ ಧ್ಯೇಯದ ಅಡಿಯಲ್ಲಿ ಜನ ಜೀವನ್ ಜಾಗೃತ್‌ ವೇದಿಕೆ ಪ್ರಾರಂಭಿಸಿದ್ದಾರೆ. ಈ ಮೂಲಕ  ಮೂರು ವರ್ಷಗಳಿಂದ ಮಾನಸಿಕ ಅಸ್ವಸ್ಥರ ಪಾಲಿನ ಸಂಜೀವಿನಿಯಾಗಿದ್ದಾರೆ. ಈವರೆಗೆ ಯಾವ ಸೇವಾ ಶುಲ್ಕವನ್ನು ಪಡೆಯದೆ ಹತ್ತಾರು ಮಾನಸಿಕ ಅಸ್ವಸ್ಥರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

2014ರಲ್ಲಿ ತನ್ನ ಮಡದಿಯೊಂದಿಗೆ ಸಾಗರದ ರಾಘವೇಂದ್ರ ಮಠಕ್ಕೆ ಹೋಗಿದ್ದ ಸಂದರ್ಭದಲ್ಲಿ ಅರೆನಗ್ನರಾಗಿ ನಿಂತಿದ್ದ ಅಸ್ವಸ್ಥ ಮಹಿಳೆಯನ್ನು ಕಂಡ ಶಶಿಕಾಂತ್‌ ಕನಿಕರ ಪಟ್ಟು ಆಕೆಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿ ಸ್ನೇಹಿತರ ಸಹಾಯದಿಂದ ಶಿವಮೊಗ್ಗದ ರಾಜ್ಯ ಮಹಿಳಾ ನಿಲಯಕ್ಕೆ ತಂದು ಸೇರಿಸಿದರು. ಅಂದಿನಿಂದ ಆರಂಭವಾದ ಇವರ ಸೇವೆ ಇಂದಿಗೂ ಮುಂದುವರಿದಿದೆ. ಎಷ್ಟೋ ಬಾರಿ ರಾತ್ರಿ 1 ಗಂಟೆಗೂ ಹೋಗಿ ಅಸ್ವಸ್ಥರ ಪೋಷಣೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಮಡದಿ ಹಾಗೂ ಪುತ್ರ ಮತ್ತಷ್ಟು ಸ್ಫೂರ್ತಿ ತುಂಬುತ್ತಿದ್ದಾರೆ.

ADVERTISEMENT

ಅನೇಕರು ಗುಣಮುಖ: ದೂರದ ಪಂಜಾಬ್, ಹೊಸಪೇಟೆ, ದಾವಣಗೆರೆ, ಹೊನ್ನಾವರ, ಬೀರೂರು, ಮಂಗಳೂರು, ನಿಸರಾಣಿ, ಅನಂದಪುರ, ಹಾವೇರಿ, ಸಾಗರ, ಬಳ್ಳಾರಿ ಮತ್ತಿತರೆ ಪ್ರದೇಶಗಳಿಂದ ಬಂದು ತಮ್ಮ ಮನೆ, ಊರು, ಪೋಷಕರ ಅರಿವಿಲ್ಲದೆ ತಿರುಗಾಡುವ ನಿರ್ಗತಿಕರು, ಮಾನಸಿಕ ಅಸ್ವಸ್ಥರನ್ನು ಶಿವಮೊಗ್ಗದ ರಾಜ್ಯ ಮಹಿಳಾ ನಿಲಯಕ್ಕೆ ಹಾಗೂ ಧಾರವಾಡದ ಮಾನಸಿಕ ಕೇಂದ್ರಕ್ಕೆ ಸೇರಿಸುವ ಕಾರ್ಯವನ್ನು ಶಶಿಕಾಂತ್‌ ಮಾಡುತ್ತಿದ್ದಾರೆ. ಈಗಾಗಲೇ ಅನೇಕರು ಸಂಪೂರ್ಣ ಗುಣಮುಖರಾಗಿದ್ದಾರೆ. ಮತ್ತೆ ಕೆಲವರು ಗುಣವಾಗುವ ಹಂತದಲ್ಲಿದ್ದಾರೆ.

ಸವಾಲಿನ ಕೆಲಸ : ‘ಮಾನಸಿಕ ಅಸ್ವಸ್ಥರನ್ನು ಮುಟ್ಟುವಾಗ ಸಾಕಷ್ಟು ಕಾನೂನುಗಳು ಅಡ್ಡಿ ಬರುತ್ತವೆ. ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಸೂಕ್ತ ಚಿಕಿತ್ಸೆ ನೀಡಬೇಕು. ರಾತ್ರಿಯಾದರೆ ಅವರನ್ನು ಪೊಲೀಸ್ ಭದ್ರತೆಯಲ್ಲಿಡಬೇಕು. ಹಗಲಿನಲ್ಲಿ ಸ್ವಚ್ಛ ಮಾಡಿ ಕೋರ್ಟ್‌ಗೆ ಕರೆತಂದು ಜಡ್ಜ್‌ ಮುಂದೆ ನಿಲ್ಲಿಸಬೇಕು. ನಂತರ ಯೂರಿನ್, ರಕ್ತ ಪರೀಕ್ಷೆ ಮಾಡಿಸಬೇಕು. ಅಲ್ಲಿಂದ ಅಂಬುಲೆನ್ಸ್‌ ನಲ್ಲಿ, ಪುರುಷರಾದರೆ ದೂರದ ಧಾರವಾಡಕ್ಕೆ, ಮಹಿಳೆಯರಾದರೆ ಶಿವಮೊಗ್ಗದ ರಾಜ್ಯ ಮಹಿಳಾ ನಿಲಯಕ್ಕೆ ಒಪ್ಪಿಸಬೇಕು. ಅಲ್ಲದೆ ಕರೆದುಕೊಂಡು ಹೋಗಿ ಬಿಡುವವರು ಮರಣ ಹೊಂದಿದಾಗ ಶವ ಪರೀಕ್ಷೆಗೆ ಸಹಿ ಹಾಕಬೇಕು. ನಂತರ ಸಂಬಂಧಪಟ್ಟ ನಿಲಯದ ಜತೆಗೂಡಿ ತಾವೇ ಮಣ್ಣುಮಾಡಬೇಕು. ಇಷ್ಟೆಲ್ಲಾ ಕೆಲಸಗಳನ್ನು ಮಾಡುವುದು ಸವಾಲಿನ ಕೆಲಸ. ಜತೆಗೆ ಸಾಕಷ್ಟು ಹಣ ವ್ಯಯವಾಗುತ್ತದೆ. ಎಷ್ಟೋ ಬಾರಿ ತಮ್ಮೊಡನೆ ಕೆಲಸ ಮಾಡುವವರನ್ನು ತಾವೆ ಹಣ ನೀಡಿ ಕರೆಸಿ ಕೆಲಸ ಮಾಡಿದ್ದೇವೆ. ಆದರೂ ಈ ಸೇವೆ ಮಾಡುವುದರಲ್ಲಿ ಸಾಕಷ್ಟು ಸಂತೋಷವಿದೆ’ ಎನ್ನುತ್ತಾರೆ ಶಶಿಕಾಂತ್‌.

ಕಣ್ಣಿದ್ದು ಕುರುಡು: ಮಾನಸಿಕ ಅಸ್ವಸ್ಥರನ್ನು ರಕ್ಷಿಸಲು ಸರ್ಕಾರ ಸಾಕಷ್ಟು ಹಣ ವ್ಯಯ ಮಾಡುತ್ತಿದೆ. ಇದಕ್ಕಾಗಿಯೇ ಅನೇಕ ನಿಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ಇವರ ಬಗ್ಗೆ ಕೆಲವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ , ತಾಲ್ಲೂಕು ಪಂಚಾಯ್ತಿ, ನಗರಸಭೆ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ರಕ್ಷಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡುತ್ತಿಲ್ಲ. ಕೆಲವರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಪರಿಣಾಮ ಅನೇಕರು ಗುಣಮುಖರಾಗುವ ಹಂತದಲ್ಲಿದ್ದರೂ ಸೂಕ್ತ ಚಿಕಿತ್ಸೆ ಸಿಗದೇ ನರಳುವಂತಾಗಿದೆ.

ಕೆಲವರು ಸಮಾಜದಿಂದ ಲೈಂಗಿಕ ದೌರ್ಜನ್ಯ, ಹಲ್ಲೆ, ಕಿರುಕುಳ ಅನುಭವಿಸುವಂತಾಗಿದೆ. ಅಧಿಕಾರಿಗಳತ್ತ ಕಡೆಗೆ ಬೊಟ್ಟು ಮಾಡುತ್ತಾ ಕುಳಿತರೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತು ತಾವೇ ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದೇವೆ. ಈ ಕಾರ್ಯಕ್ಕೆ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ಕುಮಾರ್‌, ಸಾಗರ ನಗರಸಭೆ ಸದಸ್ಯೆ ಪರಿಮಳಾ, ನಾಗರಾಜ್, ಪ್ರಸಾದ್, ಜಗದೀಶ್  ಒಳಗೊಂಡಂತೆ ಕೆಲ ವೈದ್ಯರು ಕೈ ಜೋಡಿಸುತ್ತಿದ್ದಾರೆ.

ಮಾನಸಿಕ ಅಸ್ವಸ್ಥರು ಕೂಡ ನಮ್ಮಂತೆ ಮನುಷ್ಯರು. ಅವರಿಗೂ ಒಂದು ಬದುಕು ಕಟ್ಟಿಕೊಡಬೇಕು ಎನ್ನುವ ಕಾರಣಕ್ಕೆ ಈ ಕಾರ್ಯದಲ್ಲಿ ತೊಡಗಿದ್ದೇನೆ. ತಮ್ಮ ಈ ಕಾರ್ಯಕ್ಕೆ ಮನೆಯವರು, ಸ್ನೇಹಿತರು ಸಹಕರಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಮಾನಸಿಕ ಅಸ್ವಸ್ಥರ ಬಗ್ಗೆ ಕಾಳಜಿ ವಹಿಸಿದರೆ ಜಿಲ್ಲೆಯನ್ನು ಆದಷ್ಟು ಬೇಗನೆ ಮಾನಸಿಕ ಅಸ್ವಸ್ಥ ಮುಕ್ತವನ್ನಾಗಿ ಮಾಡಬಹುದು.
ಎಂ.ಎಸ್‌.ಶಶಿಕಾಂತ್‌.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.