ಶಿವಮೊಗ್ಗ: ಹಿಂದೆ ಮೀಸಲಾತಿ ವಿರುದ್ಧ ಹೋರಾಟ ನಡೆಸಿದ್ದ ಪಕ್ಷಗಳೇ ಇಂದು ದಲಿತರಿಗೆ ಅರಮನೆ ಕಟ್ಟಿಕೊಡುವುದಾಗಿ ಹೇಳುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಪರೋಕ್ಷವಾಗಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ
ನಡೆಸಿದರು.
ನಗರದ ಆಲ್ಕೊಳದಲ್ಲಿ ಸೋಮವಾರ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಪ್ರೊ. ಬಿ.ಕೃಷ್ಣಪ್ಪ ವೃತ್ತ ನಾಮಕರಣ ಸಮಾರಂಭದಲ್ಲಿ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
ಮೀಸಲಾತಿ ನೀಡುವುದರ ವಿರುದ್ಧ 1960 ರಿಂದಲೂ ಕೆಲ ಸಂಘಟನೆಗಳು ಹೋರಾಟ ನಡೆಸಿಕೊಂಡು ಬಂದವು. ಆದರೆ, ಈಗ ದಲಿತರನ್ನು ಎದುರು ಹಾಕಿಕೊಂಡರೆ ದೇಶ ಆಳಲು ಸಾಧ್ಯವಿಲ್ಲ ಎಂಬುವುದರ ಅರಿವಾಗಿ ಮೀಸಲಾತಿಯ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಡಿಸೆಂಬರ್ 6ರಂದು ಅಂಬೇಡ್ಕರ್ ಜನ್ಮದಿನವಾಗಿದೆ. ಆದರೆ, ಆ ದಿನದಂದೇ ಬಾಬರಿ ಮಸೀದಿ ಧ್ವಂಸಗೊಳಿಸಲಾಯಿತು. ಇದು ಖಂಡನಾರ್ಹವಾದುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಲ್ಕೋಳ ವೃತ್ತಕ್ಕೆ ಪ್ರೊ.ಬಿ.ಕೃಷ್ಣಪ್ಪ ಹೆಸರಿಟ್ಟಿರುವ ಮಹಾನಗರ ಪಾಲಿಕೆ ಕ್ರಮ ಸ್ವಾಗತಾರ್ಹ. ನಗರೋತ್ಥಾನ ಯೋಜನೆಯಡಿ ಈ ವೃತ್ತದ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು. ತಾವು ನೀಡಿದ್ದ ಭರವಸೆಯಂತೆ ಅಂಬೇಡ್ಕರ್ ಭವನದ ನವೀಕರಣ ಕಾಮಗಾರಿ ಆರಂಭವಾಗಿದೆ. ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಶಾಸಕ ಕೆ.ಬಿ.ಪ್ರಸನ್ನಕುಮಾರ ಮಾತನಾಡಿ, ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕ್ರಮಕೈಗೊಂಡಿದೆ. ಹರಿಹರದಲ್ಲಿ ಪ್ರೊ.ಬಿ. ಕೃಷ್ಣಪ್ಪ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₨1ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿ ಮೀಸಲಿರಿಸಿದ್ದಾರೆ ಎಂದರು.
ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ, ಮಹಾನಗರ ಪಾಲಿಕೆ ಮೇಯರ್ ಖುರ್ಷಿದಾ ಬಾನು, ಉಪ ಮೇಯರ್ ರೇಖಾ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್.ಮಹೇಶ್, ಸದಸ್ಯರಾದ ವಿಶ್ವನಾಥ ಕಾಶಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.