ADVERTISEMENT

ಮುಖ್ಯಮಂತ್ರಿ ಕೆಳಗಿಳಿಸಲು ಜನಾಂದೋಲನ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 6:25 IST
Last Updated 8 ಫೆಬ್ರುವರಿ 2011, 6:25 IST

ಶಿವಮೊಗ್ಗ: ಈಜಿಪ್ಟ್‌ನಲ್ಲಿ ಅಧ್ಯಕ್ಷ ಮುಬಾರಕ್ ಕೆಳಗಿಳಿಸಲು ನಡೆಯುತ್ತಿರುವ ಜನಾಂದೋಲನ ಮಾದರಿಯಲ್ಲೇ ರಾಜ್ಯದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೋರಾಟ ಆರಂಭವಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಹೇಳಿದರು.

ಕರ್ನಾಟಕ ಉಳಿಸಿ ಹೋರಾಟ ವೇದಿಕೆ, ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ‘ಸಂವಿಧಾನದ ಉಳಿವಿಗಾಗಿ ನಮ್ಮ ದನಿ’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ಯಡಿಯೂರಪ್ಪ ಅವರೇ ಮೂಲಕಾರಣ. ಅವರನ್ನು ಬಿಕ್ಕಟ್ಟಿನಿಂದ ಪಾರು ಮಾಡಬೇಕಾದವರು ಈ ವ್ಯವಸ್ಥೆಯ ಯಾಜಮಾನರಾದ ಜನರು. ಹಾಗಾಗಿ, ಜನರು ಯಡಿಯೂರಪ್ಪ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದೇ ಪ್ರಸ್ತುತ ಬಿಕ್ಕಟ್ಟಿನಿಂದ ಪಾರಾಗುವ ಬಗೆ ಎಂದು ಅರ್ಥೈಸಿದರು.ಇದು ಯಾವುದೇ ಪಕ್ಷದ ಪ್ರಶ್ನೆ ಅಲ್ಲ. ಪ್ರಜಾಪ್ರಭುತ್ವದ ಪ್ರಶ್ನೆ; ಪ್ರತಿ ಮತದಾರನ ಪ್ರಶ್ನೆ. ಹಾಗಾಗಿ, ಹೋರಾಟ ಅನಿವಾರ್ಯ ಎಂದರು.

ಆತ್ಮಸಾಕ್ಷಿ, ಸದಾಚಾರ ಇದ್ದರೆ ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಇಂದು ಅವರಿಗೆ ಪ್ರಾಣ ಭಯವಿದೆಯಂತೆ. ಆದರೂ ಅವರು ಯಾರಿಗೂ ಜಗ್ಗುವುದಿಲ್ಲವಂತೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ನರಬಲಿ ಸಂಸ್ಕೃತಿ ವ್ಯಾಪಕ ಹರಡುತ್ತಿರುವುದಕ್ಕೆ ಮುಖ್ಯಮಂತ್ರಿಗಳೇ ಪರೋಕ್ಷ ಕಾರಣರಾಗಿದ್ದು, ಅವರು ವಾಮಾಚಾರ ನಂಬುವುದಷ್ಟೇ ಅಲ್ಲ, ಕುರಿ ಬಲಿ ಕೊಡುವುದರಲ್ಲಿ ಪ್ರಸಿದ್ಧರಾಗಿದ್ದಾರೆ ಎಂದು ಅಣಕವಾಡಿದರು.

ಭ್ರಷ್ಟರನ್ನು ಯಾವ ಜಾತಿಯವರೂ ಬೆಂಬಲಿಸಬಾರದು. ತಮ್ಮ ಮಕ್ಕಳಿಗೆ ವೈದಿಕ ಪರಂಪರೆಯ ಹೆಸರನ್ನು ಇಡುವ, ಬಸವಣ್ಣ ತೀವ್ರವಾಗಿ ವಿರೋಧಿಸುತ್ತಿದ್ದ ವೈದಿಕಶಾಹಿಯನ್ನು ಎತ್ತಿ ಹಿಡಿಯುವವರನ್ನು ಲಿಂಗಾಯುತರು ಎಂದು ಕರೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮೂರ್ತಿಗೆ ಹಿಂದುತ್ವ ಡಾಕ್ಟರೇಟ್: ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ತಡೆ ಹಾಕಿದ್ದ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಿಕೊಂಡ ಸುಬ್ಬಯ್ಯ, ಚಿದಾನಂದಮೂರ್ತಿ ಸಾಹಿತಿಯಾಗಿ ಕೆಲಸ ಮಾಡಿರಬಹುದು. ಆದರೆ, ಅವರಿಗೆ ‘ಡಾಕ್ಟರೇಟ್ ಆಫ್ ಹಿಂದುತ್ವ’ ನೀಡಿದ್ದರೆ ಸರಿಹೋಗುತ್ತಿತ್ತು ಎಂದು ವ್ಯಂಗ್ಯವಾಡಿದರು.

ಬಹಿರಂಗವಾಗಿ ಸಂಘ ಪರಿವಾರದ ರಹಸ್ಯ ಕಾರ್ಯಸೂಚಿಯ ವಕ್ತಾರನಂತೆ ಕೆಲಸ ಮಾಡಿ, ಕನ್ನಡ ಸಂಸ್ಕೃತಿಯನ್ನು ಕೋಮುವಾದಿಗೊಳಿಸುತ್ತಿರುವ ಚಿದಾನಂದಮೂರ್ತಿಗೆ ಗೌರವ ಡಾಕ್ಟರೇಟ್ ಕೊಡಬೇಕೇ? ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ನಿರ್ಣಯ ತೆಗೆದುಕೊಂಡಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಯವಸ್ಥಿತ ತಂತ್ರ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ಮಾತನಾಡಿ, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಂವಿಧಾನದ ಎಲ್ಲಾ ಆಶಯಗಳನ್ನು ಗಾಳಿಗೆ ತೂರಲಾಯಿತು. ಹಿಂದುಳಿದ ವರ್ಗಗಳನ್ನು ವ್ಯವಸ್ಥಿತವಾಗಿ ಮುಗಿಸುವ ತಂತ್ರವನ್ನೂ ಮಾಡಿತು’ ಎಂದು ಆರೋಪಿಸಿದರು.

ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ವಕೀಲರಾದ ಸಿರಾಜಿನ್ ಭಾಷಾ, ಕೆ.ಎನ್. ಬಾಲರಾಜ್ ಮಾತನಾಡಿದರು.
ವಿಚಾರಸಂಕಿರಣದ ಅಧ್ಯಕ್ಷತೆಯನ್ನು ಬಹುಮತ ಸಂಘಟನೆಯ ಅಧ್ಯಕ್ಷ ಎಚ್. ಹಾಲಪ್ಪ ವಹಿಸಿದ್ದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷಎಂ. ಶ್ರೀಕಾಂತ್, ಕಾಂಗ್ರೆಸ್ ಮುಖಂಡ ಶಾಂತವೀರಪ್ಪಗೌಡ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ, ಪಾಣಿ ಪಟೇಲ್ ಉಪಸ್ಥಿತರಿದ್ದರು. ಡಿಎಸ್‌ಎಸ್‌ನ ಎಂ. ಗುರುಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಜೆಡಿಯು ಅಧ್ಯಕ್ಷ ಎಂ.ಪಿ. ಮನೋಹರಗೌಡ ಸ್ವಾಗತಿಸಿದರು. ನಮ್ಮ ಹಕ್ಕು ವೇದಿಕೆಯ ಕೆ.ಪಿ. ಶ್ರೀಪಾಲ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.