ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ವೋಟು ಬ್ಯಾಂಕ್ ರಾಜಕಾರಣ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 11:04 IST
Last Updated 27 ಮಾರ್ಚ್ 2018, 11:04 IST
‘ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ವೋಟು ಬ್ಯಾಂಕ್ ರಾಜಕಾರಣ’
‘ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ವೋಟು ಬ್ಯಾಂಕ್ ರಾಜಕಾರಣ’   

ಶಿಕಾರಿಪುರ: ‘ಸರ್ಕಾರದ ಖಜಾನೆ ಲೂಟಿ ಮಾಡಿ, ವೋಟು ಬ್ಯಾಂಕ್‌ ರಾಜಕಾರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಪಟ್ಟಣದ ಮಂಗಳ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ಬೂತ್‌ ಕಮಿಟಿ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಭ್ರಷ್ಟಾಚಾರ ನಿತ್ಯ ನಡೆಯುತ್ತಿದ್ದು, ಜನಹಿತವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಮರೆತಿದೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕಿ, ಸ್ವಚ್ಛ ದಕ್ಷ ಪ್ರಾಮಾಣಿಕ ಆಳ್ವಿಕೆ ಕೊಡುವಂತಹ ವ್ಯವಸ್ಥೆ ಮಾಡಬೇಕಾಗಿದೆ. ಸಮಾಜವನ್ನು ಒಡೆದು ಆಳುವ ನೀತಿ ಬೇಡ. ಕೂಡಿ ಬಾಳುವ ಆಳ್ವಿಕೆ ಬೇಕು’ ಎಂದರು.

ADVERTISEMENT

ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಸಿಗಂದೂರು ದೇವಸ್ಥಾನ ತೆರಳುವ ಸೇತುವೆ ನಿರ್ಮಾಣದ ಬಗ್ಗೆ ಯಾವುದೇ ಗೊಂದಲ ಬೇಡ,ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭವಾಗುತ್ತದೆ ಎಂದರು.

ರೈಲ್ವೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಮಾತನಾಡಿ, ‘ದೇಶದ ಎಲ್ಲಾ ವರ್ಗದ ಜನರ ಏಳಿಗೆಗೆ ಪೂರಕವಾದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ರಾಜ್ಯದಲ್ಲಿ ಕೂಡ ಉತ್ತಮ ಆಡಳಿತ ನಡೆಸಲು ಬಿಜೆಪಿ ಅಧಿಕಾರಕ್ಕೆ ತರಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲುವು ಕರ್ನಾಟಕದಿಂದ ಆರಂಭವಾಗಬೇಕು’ ಎಂದು ಹೇಳಿದರು.

ಶಾಸಕ ಬಿ.ವೈ. ರಾಘವೇಂದ್ರ, ಮುಖಂಡರಾದ ಆರ್.ಕೆ. ಸಿದ್ರಾಮಣ್ಣ, ಆಯನೂರು ಮಂಜುನಾಥ್‌, ಭಾರತಿ ಶೆಟ್ಟಿ, ಕೆ. ಶೇಖರಪ್ಪ, ಪದ್ಮನಾಭ್‌ ಭಟ್‌, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ರುದ್ರೇಗೌಡ್ರು, ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಗುರುಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.