ADVERTISEMENT

ಮೂಕ ವೇದನೆ; ತಾಳಲಾರೆ ಯಾತನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 10:10 IST
Last Updated 5 ಫೆಬ್ರುವರಿ 2011, 10:10 IST

ಶಿವಮೊಗ್ಗ: ‘ಅಬ್ಬಾ ಅಸಾಧ್ಯ ನೋವು, ತಾಳಲಾರೆ. ಕುಳಿತಕೊಳ್ಳಲು ಆಗುತ್ತಿಲ್ಲ, ನಿಲ್ಲಲು ಆಗುತ್ತಿಲ್ಲ, ನಾನೇನು ಮಾಡ್ಲಿ?’
‘ನಾನ್ಯಾರು ಗೊತ್ತೆ? ನನ್ನ ಹೆಸರು ‘ಕಾವೇರಿ’. ಸಕ್ರೆಬೈಲು ಆನೆ ಬಿಡಾರದ ಹಿರಿಯರಲ್ಲಿ ನಾನೂ ಒಬ್ಬಳು. ನನಗೀಗ 75 ವರ್ಷ. ಇಲ್ಲಿಗೆ ಬಂದಿದ್ದು, ಸರಿಯಾಗಿ ನೆನಪಿಲ್ಲ. ಆದರೆ, 1968ರಲ್ಲಿ ನಾನು ಕಾಕನಕೋಟೆಯಲ್ಲಿ ಮನುಷ್ಯರ ಕೈಗೆ ಸಿಕ್ಕಿಬಿದ್ದೆ. ಅಂದಿನಿಂದ ದುಬಾರೆ ಅರಣ್ಯಕ್ಕೆ ಹೋಗಿ, ನಂತರ ಸಕ್ರೆಬೈಲಿಗೆ ಬಂದಿದ್ದೇನೆ’. ‘ಈಗ ನನಗಾದ ಗಾಯದ ಬಗ್ಗೆ ಹೇಳುತ್ತೇನೆ’

‘ಎಂದಿನಂತೆ ಬುಧವಾರವೂ ಮಾವುತರು ನಮ್ಮನ್ನು ಮೇಯಲು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಿಟ್ಟು ಹೋದರು. ಹಗಲೆಲ್ಲಾ ಮೇಯ್ದು ರಾತ್ರಿಯಾಗಿತ್ತು. ಒಬ್ಬಳೇ  ಬಳ್ಳಾರಿ ಕೆರೆ ಬಳಿ ನಿಂತಿದ್ದೆ. ಅಲ್ಲಿದ್ದ ಪುಂಡ (ಅವನೂ ಗೊತ್ತಿದ್ದವನೆ) ನನ್ನೊಂದಿಗೆ ಸ್ನೇಹಕ್ಕೆ ಹಾತೊರೆದ. ವಯಸ್ಸಾಗಿದೆ; ನನ್ನನ್ನು ಬಿಟ್ಟುಬಿಡಪ್ಪ ಎಂದರೂ ಬಿಡಲಿಲ್ಲ. ಮೈಮೇಲೆ ಎರಗಿದ. ನಾನು ಆಯತಪ್ಪಿ ಕೆಳಗೆ ಬಿದ್ದೆ. ಬಿದ್ದವನ ಮೇಲೆ ಆ ಪುಂಡ ದಂತದಿಂದ ಮೈಮೇಲೆ ಚುಚ್ಚಿದ. ಪ್ರತಿಭಟಿಸಿದೆ; ನಂತರ, ಕುತ್ತಿಗೆಗೆ ಬಲವಾಗಿ ಗುದ್ದಿದ. ನನಗೆ ಜೀವಹೋದ ಹಾಗಾಯಿತು. ಅಲ್ಲೇ ಬಿದ್ದೆ. ಅವನು, ಅಲ್ಲಿಂದ ಕಾಲ್ಕಿತ್ತ’.
‘ಬೆಳಿಗ್ಗೆವರೆಗೂ ನೋವಿನಲ್ಲೇ ಒದ್ದಾಡಿದೆ. ಗುರುವಾರ ಮುಂಜಾನೆ ಮಾವುತರು  ನಮ್ಮನ್ನೆಲ್ಲಾ ಕರೆಯಲು ಬಂದರು. ನನಗೆ ಒಂದು ಹೆಜ್ಜೆ ಇಡುವುದಕ್ಕೂ ಆಗಲಿಲ್ಲ. ಹತ್ತಿರ ಬಂದ ಮಾವುತರು ಮೈಮೇಲಿನ ಗಾಯಗಳನ್ನು ಕಂಡು ಬೆಚ್ಚಿಬಿದ್ದರು; ಪ್ರೀತಿಯಿಂದ ಮೈದಡಿವಿದರು. ನಿಧಾನಕ್ಕೆ ಸ್ವಲ್ಪ ದೂರಕ್ಕೆ ಹಾಗೇ ಕರೆದು ತಂದರು’.

ಅಷ್ಟು ಹೊತ್ತಿಗೆ ಮೇಲಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು ಅಂತ ಕಾಣುತ್ತೆ, ಡಾಕ್ಟರ್ ಜತೆ ಅವರೂ ಬಂದರು. ನಮ್ಮ ಮಾಮೂಲಿ ಡಾಕ್ಟರ್ ಕಾಣಲಿಲ್ಲ; ಬೇರೆ ಯಾರೋ ಇಂಜೆಕ್ಷನ್ ಚುಚ್ಚಿದರು. ಬೆಳಿಗ್ಗೆ ಅನ್ನುವಷ್ಟರಲ್ಲಿ ನನ್ನ ಇಡೀ ಮೈ ಊದಿಕೊಂಡಿತ್ತು. ಮಾವುತರಿಗೇ ಗುರುತು ಸಿಗದಷ್ಟು ಬದಲಾಗಿದ್ದೆ. ಕಣ್ಣುಮುಚ್ಚಿ ಹೋಗಿದ್ದವು. ವಿಪರೀತ ನೋವು; ಆಯಾಸ. ಔಷಧಿ ಹಚ್ಚುತ್ತಿದ್ದಂತೆ ಸ್ವಲ್ಪ ಆರಾಮ ಅನಿಸಿತು. ಅನ್ನ ಹಾಕಿ ಕೊಟ್ಟರು, ಸ್ವಲ್ಪ ತಿಂದೆ. ಮಧ್ಯೆ, ಮಧ್ಯೆ ಮಾವುತರು ಔಷಧಿ ಹಚ್ಚುತ್ತಿದ್ದರು. ಇಡೀ ರಾತ್ರಿ ನಿಂತೇ ಕಾಲ ಕಳೆದೆ. ಶುಕ್ರವಾರ ಊದಿಕೊಂಡಿದ್ದ ಮೈ, ಸ್ವಲ್ಪವೇ ಸ್ವಲ್ಪ ಇಳಿದಿತ್ತು. ಆದರೆ, ಗಾಯ ಆದ ಕಡೆಯಲೆಲ್ಲ ಅಸಾಧ್ಯದ ಉರಿ. ನೋವು ತಡೆದುಕೊಳ್ಳಲಾರದೆ ಡಾಕ್ಟರ್ ಬರುವ ತನಕ ಗಾಯದ ಮೇಲೆ ಮಣ್ಣು ಎರಚಿಕೊಳ್ಳುತ್ತಲೇ ಇದ್ದೆ. ಮಾವುತರು ಬಾಳೆ ದಿಂಡು, ಅನ್ನ ತಂದುಕೊಟ್ಟರು, ಹಸಿವು ಆಗಿತ್ತು.
 
ಸ್ವಲ್ಪ ತಿಂದೆ. ಬೆಳಿಗ್ಗೆನೇ ಮಾಧ್ಯಮದ ಗುಂಪೇ ನೆರೆದಿತ್ತು. ಹಲವರು ತಮಗೆ ತೋಚಿದಂತೆ ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ನನಗೆ ನೋವಿನಲ್ಲೂ ನಗು ಬರುತ್ತಿತ್ತು. ಕೆಲವರು ನನ್ನ ಸುತ್ತಸುಮಾರು ಒಂದು ಗಂಟೆ ಕ್ಯಾಮೆರಾಇಟ್ಟು ಪದೇ ಪದೇ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಅಧಿಕಾರಿಗಳು, ಡಾಕ್ಟರ್ ಬಂದರು. ಡಾಕ್ಟರ್, ಔಷಧಿ ಹಚ್ಚಿ, ಇಂಜೆಕ್ಷನ್ ನೀಡಿದರು. ತಕ್ಷಣಕ್ಕೆ ಸ್ವಲ್ಪ ಆರಾಮ ಅನಿಸಿತು. ಆದರೆ, ನೋವು ಇದೆ. ಉಸಿರಾಟ ಕಷ್ಟವಾಗುತ್ತಿದೆ. ನನ್ನ ಮುಂದೆ ನಿಂತ ಡಾಕ್ಟರ್, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು. ನನ್ನ ಕಣ್ಣು ಮಂಜಾಯಿತು.

ಸಕ್ರೆಬೈಲು ಸಾಕಾನೆ ಮೇಲೆ ಕಾಡಾನೆ ದಾಳಿ
ಶಿವಮೊಗ್ಗ: ಸಕ್ರೆಬೈಲು ಬಿಡಾರದ ಆನೆಯ ಮೇಲೆ ಕಾಡಾನೆಯೊಂದು ಬುಧವಾರ ರಾತ್ರಿ ತೀವ್ರವಾಗಿ ದಾಳಿ ಮಾಡಿದ್ದು, ಸಾಕಾನೆಯ ಸ್ಥಿತಿ ಚಿಂತಾಜನಕವಾಗಿದೆ. ಸಕ್ರೆಬೈಲು ಬಿಡಾರದ 75 ವರ್ಷದ ಕಾವೇರಿ ಕಾಡಾನೆ ದಾಳಿಗೆ ಒಳಗಾಗಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿರುವ ಗಂಡಾನೆ ತನ್ನ ದಂತದಿಂದ ದಾಳಿ ನಡೆಸಿದೆ. ಪ್ರತಿ ನಿತ್ಯದಂತೆ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಸಕ್ರೆಬೈಲಿನ ಆನೆಗಳನ್ನು ಮೇಯಲು ಬಿಟ್ಟಾಗ ಅಲ್ಲಿಗೆ ಬಂದ ಕಾಡಾನೆ, ಕಾವೇರಿ ಮೇಲೆ ಎರಗಿ ತೀವ್ರತರವಾದ ಗಾಯಗಳನ್ನು ಮಾಡಿದೆ. ಈ ವಿಷಯ ಮರುದಿನ ಮಾವುತರಿಗೆ ಆನೆಗಳನ್ನು ಹಿಂದಕ್ಕೆ ತರುವ ವೇಳೆ ತಿಳಿದಿದ್ದು, ಕಾವೇರಿಗೆ ಈಗ ಹಗಲು-ರಾತ್ರಿ ಕಾಡಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

‘ಮೇಯಲು ಬಿಟ್ಟಾಗ ಕಾಡಾನೆ ಜತೆ ಹೊಂದಾಣಿಕೆ ಬರದಿದ್ದಾಗ ಈ ದಾಳಿ ನಡೆದಿರಬಹುದು. ಕಾವೇರಿಗೆ ಕುತ್ತಿಗೆ ಬಳಿ ಬಲವಾದ ಗಾಯವಾಗಿದ್ದು, ಉಸಿರಾಟಕ್ಕೆ ತೊಂದರೆಯಾಗಿದೆ. ಈ ಹಿಂದೆ ಕೂಡ ಸಕ್ರೆಬೈಲು ಆನೆಗಳ ಮೇಲೆ ಸಣ್ಣಪುಟ್ಟ ದಾಳಿಗಳು ನಡೆದಿದ್ದವು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಟಿ.ಜೆ. ರವಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.‘ನೋವಿನಿಂದ ಆನೆಗೆ ಬಾವು ಬಂದಿದೆ. ಉಸಿರಾಟದ ನಾಳಕ್ಕೆ ತೀವ್ರ ಏಟು ಬಿದ್ದಿರುವುದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆ ನೀಡಿದ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆದರೂ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಆನೆಗೆ ಚಿಕಿತ್ಸೆ ನೀಡಿದ ಪಶುವೈದ್ಯಕೀಯ ಕಾಲೇಜಿನ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಸುದರ್ಶನ್, ವಲಯ ಅರಣ್ಯಾಧಿಕಾರಿ ಹರೀಶ್, ಇಲಾಖೆ ವೈದ್ಯ ಸಂಕದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.