ADVERTISEMENT

ಮೇ 15ರ ವೇಳೆಗೆ ಗೇಜ್ ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2011, 6:05 IST
Last Updated 9 ಏಪ್ರಿಲ್ 2011, 6:05 IST
ಮೇ 15ರ ವೇಳೆಗೆ ಗೇಜ್ ಪರಿವರ್ತನೆ
ಮೇ 15ರ ವೇಳೆಗೆ ಗೇಜ್ ಪರಿವರ್ತನೆ   

ಸಾಗರ: ಆನಂದಪುರಂನಿಂದ ತಾಳಗುಪ್ಪದವರೆಗಿನ ಬ್ರಾಡ್‌ಗೇಜ್ ರೈಲ್ವೆ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಮೇ 15ರ ಹೊತ್ತಿಗೆ ಈ ಮಾರ್ಗದಲ್ಲಿ ರೈಲಿನ ಸಂಚಾರ ಆರಂಭಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಮೈಸೂರು ವಿಭಾಗದ ವಿಭಾಗೀಯ ಪ್ರಬಂಧಕ ಬಿ.ಬಿ. ವರ್ಮ ತಿಳಿಸಿದರು.ರೈಲ್ವೆ ಮಾರ್ಗದ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡ ಇಲ್ಲಿಗೆ ಗುರುವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆನಂದಪುರಂನಿಂದ ತಾಳಗುಪ್ಪದವರೆಗೆ ಸುರಕ್ಷತೆಗೆ ಸಂಬಂಧಪಟ್ಟಂತೆ ಪರಿಶೀಲನೆ ಸಂದರ್ಭದಲ್ಲಿ ಯಾವುದೇ ಪ್ರಮುಖ ಲೋಪ ಕಂಡು ಬಂದಿಲ್ಲ. ಕೆಲಸಗಾರರು ಹೆಚ್ಚಿನ ಶ್ರಮ ವಹಿಸಿ ಕಾರ್ಯ ನಿರ್ವಹಿಸಿದ್ದಾರೆ. ತಾಂತ್ರಿಕ ವಿಧಿ-ವಿಧಾನಗಳು ಪೂರ್ಣಗೊಳ್ಳಲು ಕೆಲವು ದಿನಗಳ ಬೇಕಾಗಿರುವುದರಿಂದ ಮುಂದಿನ ತಿಂಗಳು ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಹೇಳಿದರು.

ರೈಲ್ವೆ ಇಲಾಖೆಯ ಭದ್ರತಾ ವಿಭಾಗದ ಆಯುಕ್ತ ಕೆ.ಜೆ.ಎಸ್. ನಾಯ್ಡು, ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಎಸ್.ಎಸ್. ನಾರಾಯಣನ್, ಸೂಚನಾ ವಿಭಾಗದ ಮುಖ್ಯ ಎಂಜಿನಿಯರ್ ಮೂರ್ತಿ, ಸೇತುವೆ ವಿಭಾಗದ ಮುಖ್ಯ ಎಂಜಿನಿಯರ್ ಗರ್ಗ್, ಭದ್ರತಾ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ರವಿಕುಮಾರ್, ಆರ್.ಪಿ. ವ್ಯಾಸ್ ಹಾಗೂ ಮೈಸೂರು ವಿಭಾಗದ ಅಧಿಕಾರಿಗಳು ಪರಿಶೀಲನಾ ತಂಡದಲ್ಲಿ ಹಾಜರಿದ್ದರು.

ರೈಲ್ವೆ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹಾಗೂ ಸಾಹಿತಿ ಡಾ.ನಾ. ಡಿಸೋಜಾ, ಅಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ, ಸಿ. ಗೋಪಾಲಕೃಷ್ಣರಾವ್, ವಿಲಿಯಂ, ಗಣಪತಿ ಸುಳಗೋಡು, ಮಹೇಶ್ ಹಿರೇಮಠ್, ಕುಮಾರ್, ಕೆ.ಎನ್. ಶರ್ಮ ಇನ್ನಿತರ ಪ್ರಮುಖರು ಹಾಜರಿದ್ದು ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳಿಗೆ ಸ್ವಾಗತ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.