ಶಿವಮೊಗ್ಗ: ಅಲ್ಲಿ ಪಟಾಕಿ ಸದ್ದು ಮುಗಿಲೆತ್ತರಕ್ಕೆ ಮೊಳಗಿತು, ಜೈಕಾರಗಳು ಪ್ರತಿಧ್ವನಿಸಿದವು. ಜನಜಂಗುಳಿ ಕಂಡುಬಂತು. ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಸಂಜೆ ನವೀಕೃತ ಗಾಂಧಿ ಪಾರ್ಕ್‌ಗೆ ಭೇಟಿ ನೀಡಿದ ಸಂದರ್ಭದ ಚಿತ್ರಣ.
ಯಡಿಯೂರಪ್ಪ ಸಾಲು, ಸಾಲು ಕಾರುಗಳಿಂದ ಇಳಿದು ಗಾಂಧಿಪಾರ್ಕ್‌ನ ಹಿಂಭಾಗದ ಗೇಟಿನಿಂದ ಬರುತ್ತಿದ್ದಂತೆ ಪಾರ್ಕ್ ಎದುರು ಪಟಾಕಿಗಳು ನಿಮಿಷಗಳ ಕಾಲ ಸಿಡಿದವು. ಯಡಿಯೂರಪ್ಪಗೆ ಜಯವಾಗಲಿ ಎಂದು ಜೈಕಾರ, ಜಿಂದಾಬಾಂದ್‌ಗಳು ಕೇಳಿಬಂದವು. ನಡುವೆ ಈಶ್ವರಪ್ಪ ಅವರಿಗೆ ಧಿಕ್ಕಾರದ ಮಾತುಗಳೂ ನುಸುಳಿದವು.
ಯಡಿಯೂರಪ್ಪ ಇಲ್ಲಿಯೂ ವಿಜಯ ಚಿಹ್ನೆಯ ಕೈ ಬೆರಳನ್ನು ಜನರತ್ತ ತೋರಿಸಿ, ನಗುನಕ್ಕರು. ತಮ್ಮನ್ನು ಸುತ್ತುವರಿದ, ಮುಟ್ಟಲು ಬಂದವರನ್ನು ನೋಡಿ ಸ್ವಲ್ಪ ಸಿಡುಕಿದರು. ತದನಂತರ, ಎತ್ತರದ ಕಟ್ಟೆಯ ಏರಿ ಜನರತ್ತ ನೋಡಿ, ವೇದಿಕೆಗೆ ಹೋಗಿ ಅಲ್ಲಿ ತಮ್ಮನ್ನು ಉದ್ದೇಶಿಸಿ ಮಾತನಾಡುವುದಾಗಿ ಕೈ ತೋರಿಸಿದರು. ಆದರೂ ಅವರನ್ನು ಸುತ್ತುವರಿದ ಜನರಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದರಲ್ಲೇ ಪೊಲೀಸರ ಸಹಾಯದಿಂದ ನುಸುಳಿಕೊಂಡು ಹೋದ ಯಡಿಯೂರಪ್ಪ, ಗಾಂಧಿಪ್ರತಿಮೆಗೆ ನಮಸ್ಕರಿಸಿದರು. ಅಲ್ಲಿಯೇ ಇದ್ದ ಗಾಂಧಿಭಾವಚಿತ್ರಕ್ಕೆ ಹಾರ ಹಾಕಿದರು.
ಶಿವಮೊಗ್ಗ ನಗರದಿಂದಲೇ ಸ್ಪರ್ಧಿಸಿ
ಇದೇ ಸಂದರ್ಭದಲ್ಲಿ ಅವರ ಬೆಂಬಲಿಗರು, ಇಂದು ಗಾಂಧಿಪಾರ್ಕ್ ಅಧಿಕೃತ ಉದ್ಘಾಟನೆಯಾಯಿತು ಎಂದು ಘೋಷಣೆ ಕೂಗಿದರು. ಮತ್ತೆ ಕೆಲವರು, ಶಿವಮೊಗ್ಗ ನಗರದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಆಹ್ವಾನ ನೀಡಿದರು. ಈ ಕುರಿತಂತೆ ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ದುಂಬಾಲು ಬಿದ್ದರು.
ಜೋರಾಗಿ ಕೂಗಲಾರಂಭಿಸಿದರು. ಇದರಿಂದ ಯಡಿಯೂರಪ್ಪ ಕೆಲ ಸಮಯ ಗೊಂದಲಕ್ಕೀಡಾದರು. ~ಈ ಕುರಿತಂತೆ ಇಷ್ಟರಲ್ಲಿಯೇ ತಮ್ಮ ತೀರ್ಮಾನ ಪ್ರಕಟಿಸುವುದಾಗಿ~ ಹೇಳಿ ಬೆಂಬಲಿಗರನ್ನು ಸಮಾಧಾನಪಡಿಸಿದರು. ತದನಂತರ ಕೆಲ ನಿಮಿಷ ಮ್ಯೂಸಿಕಲ್ ಫೌಂಟೇನ್ ಹತ್ತಿರ ಹೋಗಿ, ಅಲ್ಲಿ ಜನರೊಂದಿಗೆ ಮಾತನಾಡಿ, ಹಿಂತಿರುಗಿದರು.
ಪಾರ್ಕಿನಲ್ಲಿ ವೇದಿಕೆ ಕಲ್ಪಿಸಿದರೂ ಅಲ್ಲಿಗೆ ಬಾರದೆ ಯಡಿಯೂರಪ್ಪ ಗಡಿಬಿಡಿಯಲ್ಲಿ ವಾಪಸಾದರು. ಅವರನ್ನು ಎದುರು ನೋಡುತ್ತಿದ್ದ ನೂರಾರು ಸಾರ್ವಜನಿಕರು ನಿರಾಶೆಯಿಂದ ಹಿಂತಿರುಗಿದರು. ಆಗ ಅಲ್ಲಿಗೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಅನಿವಾರ್ಯವಾಗಿ ಯಡಿಯೂರಪ್ಪ ಹಿಂತಿರುಗಿದರು; ಕ್ಷಮಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಯಡಿಯೂರಪ್ಪ ಅವರೊಂದಿಗೆ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಜಾಗೃತಿ ಸಮಿತಿ ಸದಸ್ಯ ಗುರುಮೂರ್ತಿ, ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ತಲ್ಕಿನ್ ಅಹಮದ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯತ್ರಿ ಷಣ್ಮುಖಪ್ಪ ಮತ್ತಿತರರು ಆಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.