ADVERTISEMENT

ಯುವಕರ ತುಡಿತ ದಾಖಲಿಸುವ ಕಾರ್ಯ ಆಗಲಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 6:13 IST
Last Updated 8 ಡಿಸೆಂಬರ್ 2017, 6:13 IST
ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಗುರುವಾರ ಏರ್ಪಡಿಸಿದ್ದ ಸಮಕಾಲೀನ ಸಾಹಿತ್ಯದಲ್ಲಿ ರೂಪುಗೊಳ್ಳುವ ಹೊಸ ಸಂಗತಿಗಳು ವಿಷಯದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್ ಮಾತನಾಡಿದರು
ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಗುರುವಾರ ಏರ್ಪಡಿಸಿದ್ದ ಸಮಕಾಲೀನ ಸಾಹಿತ್ಯದಲ್ಲಿ ರೂಪುಗೊಳ್ಳುವ ಹೊಸ ಸಂಗತಿಗಳು ವಿಷಯದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್ ಮಾತನಾಡಿದರು   

ಶಿವಮೊಗ್ಗ: ಉತ್ತಮ ಸಾಹಿತ್ಯ ಇತಿಹಾಸ ವಾಗಬಲ್ಲದು ಮತ್ತು ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪ್ರತಿಕ್ರಿಯಿಸಬಲ್ಲದು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕಾಲೇಜು ಇಂಗ್ಲಿಷ್ ಅಧ್ಯಾಪಕರ ವೇದಿಕೆಯಿಂದ ಗುರುವಾರ ಏರ್ಪಡಿಸಿದ್ದ ‘ಸಮಕಾಲೀನ ಸಾಹಿತ್ಯದಲ್ಲಿ ರೂಪುಗೊಳ್ಳುವ ಹೊಸ ಸಂಗತಿಗಳು’ ವಿಷಯದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಪರಂಪರೆಯಲ್ಲಿ ನೂರಾರು ವಿಷಯಗಳನ್ನು ಬಂದು ಹೋಗುತ್ತವೆ. ಆದರೆ ಜನರಿಗೆ ಮುಟ್ಟುವಂತಹ ಉತ್ತಮ ಸಾಹಿತ್ಯ ಮಾತ್ರ ಶಾಶ್ವತವಾಗಿ ನೆಲೆಯೂರುತ್ತದೆ. ವಿಲಿಯಂ ವರ್ಡ್ಸ್‌ವರ್ಥ್ ಸೇರಿದಂತೆ ಅನೇಕ ಇಂಗ್ಲಿಷ್‌ ಸಾಹಿತಿಗಳು ಪ್ರಸ್ತಾಪಿಸಿರುವ ಅನೇಕ ವಿಷಯಗಳು ಇಂದಿಗೂ ಪ್ರಚಲಿತದಲ್ಲಿವೆ. ಇವರು ಕೈಗಾರೀಕರಣ, ಜಾಗತೀಕ ಯುದ್ಧ ಮತ್ತಿತರೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.

ADVERTISEMENT

ಜಾರ್ಜ್ ಹಾರ್ವೆಲ್ ಎಂಬಾತ ಭಾರತೀಯ ಸಾಮಾಜಿಕ ಇತಿಹಾಸದ ಬಗ್ಗೆ ಮೊದಲೇ ಇತಿಹಾಸ ನುಡಿದಿದ್ದ. ಅಲ್ಲದೇ 20ನೇ ಶತಮಾನದಲ್ಲಿ ಆಗುವಂತಹ ಘಟನೆಗಳನ್ನು ನಿರೀಕ್ಷಿಸಿದ್ದ ಅದು ನಿಜವಾಗುತ್ತಿದೆ. ಭಾರತವು ಸೇರಿದಂತೆ ಬಹಳಷ್ಟು ಮುಂದುವರಿದ ರಾಷ್ಟ್ರಗಳಿಗೆ ಜಾಗತೀಕರಣದ ಬಿಸಿ ತಟ್ಟಿದೆ. ಜಾಗತೀಕರಣದಂತಹ ಸಮಸ್ಯೆಗಳು ಇಂದಿನ ಜನತೆಗೆ ಸವಾಲುಗಳನ್ನು ಒಡ್ಡುತ್ತಿವೆ ಎಂದು ಹೇಳಿದರು.

ನಮ್ಮಲ್ಲಿರುವ ನಂಬಿಕೆಗಳು ಹಾಗೂ ಮೌಢ್ಯಗಳು ಪ್ರಸ್ತುತ ದಿನಗಳಲ್ಲಿ ಅಲುಗಾಡಲು ಶುರುಮಾಡಿವೆ. ಇಂತಹ ಸಂದರ್ಭದಲ್ಲಿ ಈಗಿನ ಯುವಜನತೆ ಹೊಸ ಮೌಲ್ಯಗಳು ಮತ್ತು ನಂಬಿಕೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯುವಜನತೆಯಲ್ಲಿ ಉಂಟಾಗುತ್ತಿರುವ ತಳಮಳ ಹಾಗೂ ಹೊಸ ಮೌಲ್ಯಗಳಿಗಾಗಿ ಅವರ ತುಡಿತವನ್ನು ಪ್ರತಿಯೊಬ್ಬ ಬರಹಗಾರ ಮತ್ತು ಸಾಹಿತ್ಯ ತುಂಬಾ ಸಹನೆಯಿಂದ ದಾಖಲಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಐಎಸ್‌ಸಿಎಸ್‌ ಅಧ್ಯಕ್ಷ ಡಾ.ಆರ್.ಕೆ.ಧವನ್ ಮಾತನಾಡಿ, ‘ಸಲ್ಮಾನ್ ರಶ್ದಿ ಎಂಬ ಲೇಖಕ ಮಿಡ್‌ನೈಟ್ ಚಿಲ್ಡ್ರನ್ ಕೃತಿ ಪ್ರಕಟಿಸಿದ ನಂತರ ಅನೇಕ ಬರಹಗಾರರು ಈ ಕೃತಿಯಿಂದ ಪ್ರೇರಣೆಗೊಂಡು ಸಮಕಾಲೀನ ಸಮಸ್ಯೆಗಳ ಬಗ್ಗೆ ಅದರಲ್ಲೂ ಮಹಿಳೆಯರು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬರೆದಿದ್ದಾರೆ. ಭಾರತೀಯ ಇಂಗ್ಲಿಷ್ ಸಾಹಿತ್ಯ ಈ ತರಹದ ಕಾರಣಗಳಿಗಾಗಿ ವಿಸ್ತರಿಸುತ್ತಾ ಹೋಗುತ್ತದೆ. ಮತ್ತು ಆರ್ಥಿಕತೆ, ಔದ್ಯೋಗಿಕರಣ ಇಂತಹ ಹಲವು ವಿಚಾರಗಳಿಂದ ಪ್ರಭಾವಿತಗೊಂಡು ಮುಂದುವರೆಯುತ್ತಿದೆ’ ಎಂದು ಹೇಳಿದರು.

ದಲಿತ ಸಾಹಿತ್ಯದಲ್ಲಿ ಎಲ್ಲಾ ದೇಶಗಳಲ್ಲೂ ಪುರುಷರೇ ಪ್ರಾಬಲ್ಯ ಸಾಧಿಸಿದ್ದಾರೆ. ಇದೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ಮಹಿಳೆಯರು ಕೂಡ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಬಿಂಬಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಧೈರ್ಯವಾಗಿ ಮಾತನಾಡಲು ಶುರು ಮಾಡಿದ್ದಾರೆ. ತಮ್ಮ ಕೃತಿಗಳ ಮೂಲಕವೇ ಮಹಿಳೆಯರು ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು ಎನ್ನುವ ಕರೆಯನ್ನು ಕೊಡುತ್ತಿದ್ದಾರೆ ಎಂದರು.

ಕುವೆಂಪು ವಿಶ್ವವಿದ್ಯಾಲಯ ಕಾಲೇಜು ಇಂಗ್ಲಿಷ್ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಪ್ರೊ.ಆರ್‌.ಎಲ್.ಪ್ರಕಾಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ.ಸಿ.ಚನ್ನಪ್ಪ, ಐಎಸ್‌ಸಿಎಸ್‌ ಕಾರ್ಯದರ್ಶಿ ಪ್ರೊ.ಸುಮನ್ ಬಾಲ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.