ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಭೂಸುಧಾರಣಾ ಕಾಯ್ದೆ ಉಲ್ಲಂಘಿಸಿ ಗೋಕರ್ಣದಲ್ಲಿ ಕೃಷಿ ಜಮೀನು ಖರೀದಿ ಮಾಡಿದ್ದಾರೆ ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ನೋಟಿಸ್ ಜಾರಿಗೆ ಬುಧವಾರ ಆದೇಶಿಸಿದೆ.
`ಕೃಷಿಯೇತರ ಮೂಲಗಳಿಂದ ವಾರ್ಷಿಕ ್ಙ2 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿಸುವುದು ಭೂಸುಧಾರಣಾ ಕಾಯ್ದೆಯ 79(ಎ) ಮತ್ತು 79(ಬಿ) ಸೆಕ್ಷನ್‌ಗಳ ಉಲ್ಲಂಘನೆ. ಆದರೆ ವಾರ್ಷಿಕ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಕೃಷಿ ಭೂಮಿ ಖರೀದಿ ಮಾಡಿದ್ದಾರೆ' ಎಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಚಿಂತಾಮಣಿ ಉಪಾಧ್ಯ ಮತ್ತು ಇತರರು ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿದೆ.
ಸ್ವಾಮೀಜಿ ಅವರು ಗೋಕರ್ಣದ ಸರ್ವೆ ಸಂಖ್ಯೆ 886ರಲ್ಲಿ 2009ರಲ್ಲಿ 12.32 ಎಕರೆ ಜಮೀನನ್ನು ್ಙ 12.65 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ನಂತರ ಅದೇ ಊರಿನಲ್ಲಿ ್ಙ6.30 ಲಕ್ಷ ರೂಪಾಯಿ ಮೌಲ್ಯದ ಇನ್ನೊಂದು ಜಮೀನು ಖರೀದಿಸಿದ್ದಾರೆ. ಜಮೀನನ್ನು ಸ್ವಾಮೀಜಿ ಹೆಸರಿಗೆ ನೋಂದಾಯಿಸದಂತೆ ಕೋರಿ ಗೋಕರ್ಣದ ಉಪ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದು ವ್ಯರ್ಥವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಜಮೀನನ್ನು ಕಾನೂನು ಉಲ್ಲಂಘಿಸಿ ಸ್ವಾಮೀಜಿ ಅವರ ಹೆಸರಿಗೆ ನೋಂದಾಯಿಸಿರುವ ಉಪ ತಹಶೀಲ್ದಾರ್ ಮತ್ತು ಕುಮಟಾ ಉಪ ವಿಭಾಗದ ಉಪ ಆಯುಕ್ತರ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಚಿಂತಾಮಣಿ ಅವರು ಕೋರಿದ್ದಾರೆ. ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.