ADVERTISEMENT

ರಾಜಕೀಯ ಸಭೆ- ಸಮಾರಂಭಗಳಿಗೆ ಅನುಮತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 6:09 IST
Last Updated 6 ಮಾರ್ಚ್ 2014, 6:09 IST

ಶಿವಮೊಗ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತತ್ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಅದರಂತೆ ಯಾವುದೇ ರೀತಿಯ ಹೊಸ ಯೋಜನೆ, ಹೊಸ ಕಾಮಗಾರಿಗಳ ಉದ್ಘಾಟನೆ ಮಾಡುವುದರ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್‌ ತಿಳಿಸಿದರು.

  ಆದರೆ ಚುನಾವಣಾ ನೀತಿ –ಸಂಹಿತೆ ಘೋಷಣೆಗೂ ಮುನ್ನ ಜಾರಿಗೊಳಿಸಿದ ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕೆ ಯಾವುದೇ ಅಭ್ಯಂತರವಿಲ್ಲವಾಗಿದೆ. ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಜಾಗೃತರಾಗಬೇಕು ಎಂದು ಅವರು ಬುಧವಾರ ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.

  ಜಿಲ್ಲೆಯಾದ್ಯಂತ ಅತ್ಯಂತ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿ ಗೊಳಿಸಲಾಗುವುದು. ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿ ರುವ ಅಧಿಕಾರಿಗಳಿಗೆ ಈ ಕುರಿತಂತೆ ಸೂಚನೆ ನೀಡಲಾಗಿದೆ. ಜೊತೆಗೆ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗುವ ಅಧಿಕಾರಿಗಳ ಸಭೆ ಕರೆದು ಮಾಹಿತಿ ನೀಡಲಾಗುವುದು ಎಂದರು.

ಇನ್ನೂ ಮುಂದೆ ರಾಜಕೀಯ ಪಕ್ಷಗಳು ಆಯೋಜಿಸುವ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದೆ ಆಯೋಜಿಸುವ ಕಾರ್ಯಕ್ರಮಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ನೀತಿ–ಸಂಹಿತೆ ಉಲ್ಲಂಘನೆಗೆ ಆಸ್ಪದವಾಗದಂತೆ ಸರ್ಕಾರಿ ಕಾರ್ಯಕ್ರಮಗಳ ಆಯೋಜನೆ ವೇಳೆಯೂ ಎಚ್ಚರ ವಹಿಸಲಾಗುವುದು. ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸದಂತೆ ಎಚ್ಚರವಹಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಹಾಕಿರುವ ರಾಜಕೀಯ ಪಕ್ಷಗಳ ಮುಖಂಡರ ಚಿತ್ರವಿರುವ ಎಲ್ಲ ರೀತಿಯ ಫ್ಲೆಕ್ಸ್, ಬಂಟಿಂಗ್ಸ್‌ಗಳನ್ನು ಈ ಕ್ಷಣದಿಂದಲೇ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿ ಫ್ಲೆಕ್ಸ್, ಬಂಟಿಂಗ್ಸ್ ಹಾಕುವ ರಾಜಕೀಯ ಪಕ್ಷಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬುಧವಾರದಿಂದಲೇ ಅಭ್ಯರ್ಥಿಗಳ ಖರ್ಚು–ವೆಚ್ಚದ ವಿವರ ಸಂಗ್ರಹಿಸುವ ಕಾರ್ಯವನ್ನು ಚುನಾವಣಾ ಆಯೋಗ ಆರಂಭಿಸಲಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ನೀಡುವ ಜಾಹಿರಾತು ಹಾಗೂ ಆಯೋಜಿಸುವ ಕಾರ್ಯಕ್ರಮಗಳ ಖರ್ಚು–ವೆಚ್ಚದ ಸಮಗ್ರ ವಿವರ ಸಂಗ್ರಹಿಸಲಾಗುವುದು ಎಂದರು.

ರಾಜಕೀಯ ಪಕ್ಷಗಳು ಹಾಗೂ ನಾಗರಿಕರು ಕಟ್ಟುನಿಟ್ಟಾಗಿ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸಬಾರದು ಎಂದರು.

ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಿ ವಾಹನಗಳ ಬಳಕೆಯ ಮೇಲೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಮನೆ ಹಾಗೂ ಕಚೇರಿಗೆ ಓಡಾಡಲು ಮಾತ್ರ ಸರ್ಕಾರಿ ವಾಹನ ಬಳಸಬಹುದಾಗಿದೆ. ಉಳಿದಂತೆ ಅನ್ಯ ಕಾರ್ಯಗಳಿಗೆ ಸರ್ಕಾರಿ ವಾಹನ ಬಳಕೆ ಮಾಡುವಂತಿಲ್ಲ ಎಂದರು. ಗೃಹ ಇಲಾಖೆಯ ಸೂಚನೆಯಂತೆ ಜನಪ್ರತಿನಿಧಿಗಳಿಗೆ ನೀಡಲಾಗುವ ಪೊಲೀಸ್ ಭದ್ರತೆ, ಗಸ್ತು ವಾಹನದ ವ್ಯವಸ್ಥೆಯನ್ನು ಹಿಂಪಡೆಯುವುದು ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳಲಾಗು ವುದು ಎಂದು ತಿಳಿಸಿದರು.

ಜನಪ್ರತಿನಿಧಿಗಳು ಭಾಗವಹಿಸುವ ಕಾರ್ಯಕ್ರಮಗಳ ಮೇಲೆ ಗಮನಹರಿಸಲಾಗುವುದು. ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಹೊಸ ಘೋಷಣೆ ಮಾಡುವಂತಿಲ್ಲ. ಜಿಲ್ಲೆಯ ಸರ್ಕಾರಿ ವಸತಿ ಗೃಹಗಳನ್ನು ಚುನಾವಣಾ ಆಯೋಗ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಐ.ಬಿ.ಗಳಲ್ಲಿ ಜನಪ್ರತಿನಿಧಿಗಳು ತಂಗುವುದಕ್ಕೆ ಅವಕಾಶ ಇಲ್ಲವಾಗಿದೆ ಎಂದು ವಿಪುಲ್ ಬನ್ಸಲ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.