ADVERTISEMENT

ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 13:35 IST
Last Updated 23 ಅಕ್ಟೋಬರ್ 2011, 13:35 IST

ಹೊಸನಗರ: ಭ್ರಷ್ಟಾಚಾರದ ಸುಳಿಯಲ್ಲಿ ಮುಳುಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಒತ್ತಾಯಿಸಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಗರುಡಪ್ಪ ಗೌಡ ನೇತೃತ್ವದಲ್ಲಿ ಶನಿವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಭ್ರಷ್ಟಾಚಾರ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು ಜೈಲ್‌ನಲ್ಲಿ ಇದ್ದಾರೆ. ಉಳಿದ ಸಚಿವರು ಅವರ ಹಾದಿ ಹಿಡಿದಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ವಜಾ ಮಾಡಲು ಸೂಕ್ತವಾಗಿದೆ ಎಂದು ಅವರು ಆರೋಪಿಸಿದರು.

ತಪ್ಪು ನೀತಿಯಿಂದಾಗಿ ರಾಜ್ಯ ಹಿಂದೇಂದು ಕಾಣದ ವಿದ್ಯುತ್ ಕ್ಷಾಮದಲ್ಲಿ ಸಿಲುಕಿದೆ. ಸಮರ್ಪಕ ಪಡಿತರ ಚೀಟಿ ವಿತರಣೆ ಆಗಿಲ್ಲದ ಕಾರಣ ಅರ್ಹ ಬಡವರಿಗೆ ಈ ವರ್ಷದ ದೀಪಾವಳಿಯಲ್ಲಿಯೂ ಸಹ ಪಡಿತರ ಇಲ್ಲದ ಪರಿತಪಿಸಬೇಕಾಗಿದೆ ಎಂದು ಆರೋಪಿಸಿದೆ.

ರೈತರ ಬಗರ್‌ಹುಕುಂ, ಅಕ್ರಮ ಸಕ್ರಮ ಸಾಗುವಳಿ ಚೀಟಿ ವಿತರಣೆ ಆಗಿಲ್ಲ. ಕೇಂದ್ರ ಸರ್ಕಾರದ ಮಹತ್ವದ ಅರಣ್ಯ ಹಕ್ಕು ಕಾಯ್ದಿ ಜಾರಿ ಮಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಧ್ಯಕ್ಷರು ದೂರಿದರು.

ರಾಜ್ಯದಲ್ಲಿ ಬರಪೀಡಿತ ತಾಲ್ಲೂಕು ಗುರುತಿಸುವಲ್ಲಿ ತಾರತಮ್ಯ ಎಸೆಗಲಾಗಿದೆ. ಬರಪೀಡಿತ ಪ್ರದೇಶಕ್ಕೆ ಸಚಿವರು, ಶಾಸಕರು ಭೇಟಿ ನೀಡಿಲ್ಲದ ಕಾರಣ ಜನರು ಹಿಡಿ ಶಾಪ ಹಾಕುವಂತಾಗಿದ ಎಂದು ಅವರು ಆಪಾದಿಸಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಆರ್. ಪ್ರಭಾಕರ್, ಏರಗಿ ಉಮೇಶ್, ತೀರ್ಥಹಳ್ಳಿ ವಿಧಾನಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ, ಮುಖಂಡರಾದ ಎಚ್. ಮಹಾಬಲರಾವ್, ಅತ್ತಿಕೊಡಿಗೆ ನಾಗಪ್ಪ ಗೌಡ, ಟೀಕಪ್ಪ ಇತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.