ADVERTISEMENT

ರೈತ ವಿರೋಧಿ ಕಾಯ್ದೆ ಜಾರಿ ಬೇಡ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 8:45 IST
Last Updated 19 ಜನವರಿ 2011, 8:45 IST

ತೀರ್ಥಹಳ್ಳಿ: ಮಲೆನಾಡು ಪ್ರದೇಶದಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಸೋಮವಾರ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಬಿ.ಎ. ರಮೇಶ್ ಹೆಗ್ಡೆ ಮುಖ್ಯಮಂತ್ರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.ಕರ್ನಾಟಕ ಭೂ ಕಂದಾಯ ಕಾಯ್ದೆ ರೈತ ವಿರೋಧಿಯಾಗಿದ್ದು, ತಾರತಮ್ಯ ನೀತಿಯಿಂದ ಕೂಡಿದೆ. ಕೃಷಿಯಿಂದ ಜೀವನ ಸಾಗಿಸುವ ರೈತರ ಬದುಕನ್ನು ನಾಶಮಾಡುವ ಕಾಯ್ದೆಯಾಗಿದೆ.
 
ಈ ಕಾನೂನು ಜಾರಿಯಾದಲ್ಲಿ ಮಲೆನಾಡು ಪ್ರದೇಶದ ಶೇ. 90ರಷ್ಟು ಕೃಷಿಕರು ಜೈಲುಶಿಕ್ಷೆಗೆ ಗುರಿ ಆಗಬೇಕಾಗುತ್ತದೆ. ಆದ್ದರಿಂದ, ಕೂಡಲೇ ಈ ರೈತ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.ಕಾಯ್ದೆ ಅಡಿಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 34,288 ಜನರ ಸುಮಾರು 75 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲು ಗುರುತಿಸಲಾಗಿದ್ದು, 58 ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ತೀರ್ಥಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 683 ಜನರ 3,500 ಎಕರೆ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಉದ್ದೇಶಿಸಲಾಗಿದೆ. ಆಗುಂಬೆ ಹೋಬಳಿ ನೆಂಟೂರು ಗ್ರಾಮದಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.ಅತಿಯಾಗಿ ಬೀಳುವ ಮಳೆಯಿಂದಾಗಿ ಮಲೆನಾಡಿನಲ್ಲಿ ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಡೆಗಟ್ಟಲು ಸೊಪ್ಪಿನ ಗೊಬ್ಬರ ಹಾಗೂ ಮಣ್ಣು ಆವಶ್ಯಕತೆ ಇರುವ ಕಾರಣ ಸರ್ಕಾರಿ ಭೂಮಿಯನ್ನು ಕಾಯ್ದೆಯ ವ್ಯಾಪ್ತಿಯಿಂದ ಕೈಬಿಡುವಂತೆ ಒತ್ತಾಯಿಸಿದ ಅವರು, ಸರ್ಕಾರಿ ಭೂಮಿಯಲ್ಲಿ ಮನೆ, ಕೊಟ್ಟಿಗೆ, ಬ್ಯಾಣ, ಕಣ, ಸೊಪ್ಪಿನ ಹಡ್ಡೆ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡು ಬರುತ್ತಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಸೂಕ್ತಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ವತಿಯಿಂದ ಮಲೆನಾಡಿಗರ ಪರವಾಗಿ ತೀವ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಎಲ್. ಸುಂದರೇಶ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಜರಿದ್ದರು. ತಹಶೀಲ್ದಾರ್‌ಪರವಾಗಿ ಶಿರಸ್ತೇದಾರ್ ರಾಜಪ್ಪ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.