ADVERTISEMENT

ವಿಜ್ಞಾನ, ತಂತ್ರಜ್ಞಾನದಿಂದ ಜೀವನಮಟ್ಟ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 6:50 IST
Last Updated 24 ಸೆಪ್ಟೆಂಬರ್ 2011, 6:50 IST

ಶಿವಮೊಗ್ಗ: ವಿಜ್ಞಾನ, ತಂತ್ರಜ್ಞಾನದ ಸಮರ್ಥ ಅಳವಡಿಕೆಯಿಂದ ಮಾತ್ರ ದೇಶದ ಬಹುಸಂಖ್ಯಾತ ಗ್ರಾಮೀಣ ಪ್ರದೇಶ ಜನರಿಗೆ ಗುಣಮಟ್ಟದ ಜೀವನ ಕಲ್ಪಿಸಲು ಸಾಧ್ಯ ಎಂದು ಬಾಹ್ಯಾಕಾಶ ವಿಜ್ಞಾನಿ ಡಾ.ಜಿ. ಮಾಧವನ್ ನಾಯರ್ ಪ್ರತಿಪಾದಿಸಿದರು.

ಸಮೀಪದ ಜಾವಳ್ಳಿಯ ಜ್ಞಾನದೀಪ ವಿದ್ಯಾಸಂಸ್ಥೆ ಅರಬಿಂದೋ ಪಿಯು ಕಾಲೇಜಿನ ದಶಮಾನೋತ್ಸವ ವರ್ಷಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಶೇ. 70ರಷ್ಟು ಜನ ಹಳ್ಳಿಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ಗುಣಮಟ್ಟದ ಜೀವನ ಕಲ್ಪಿಸುವುದು ಇಂದಿನ ಬಹುದೊಡ್ಡ ಸವಾಲು. ಆರೋಗ್ಯ, ಶಿಕ್ಷಣ, ಮತ್ತಿತರ ಮೂಲಸೌಕರ್ಯ ಒದಗಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದ್ದು, ಪಟ್ಟಣ ಪ್ರದೇಶಗಳಲ್ಲಿ ಸೃಷ್ಟಿಯಾಗುವ ಸಂಪತ್ತನ್ನು ಗ್ರಾಮೀಣ ಪ್ರದೇಶಕ್ಕೆ ಹಂಚಿಕೆ ಮಾಡಬೇಕು ಎಂದರು.

ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ದ್ವಿಗುಣಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ನಾಯರ್ ಪ್ರತಿಪಾದಿಸಿದರು.

ಸಾಂಪ್ರದಾಯಿಕ ಇಂಧನ ಮೂಲಗಳು ಕೆಲವೇ ವರ್ಷಗಳಲ್ಲಿ ಬರಿದಾಗಲಿವೆ. ಇದಕ್ಕೆ ಪರ‌್ಯಾಯವಾದ ಅಣುಶಕ್ತಿ ಈಗ ದುಬಾರಿಯಾಗಿದೆ. ಇದನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ಕೌಶಲ ಆವಿಷ್ಕಾರಗೊಳ್ಳಬೇಕು. ಅಲ್ಲದೇ, ಈ ನಿಟ್ಟಿನಲ್ಲಿ ಅಸಾಂಪ್ರದಾಯಿಕ ಇಂಧನ ಮೂಲಗಳಾದ ಸೌರಶಕ್ತಿ, ಗಾಳಿಯಂತ್ರ, ಜೈವಿಕ ಇಂಧನ ಬಳಕೆಗೆ ಜನ ಮುಂದಾಗಬೇಕು. ಇದರಲ್ಲೂ ಹೊಸ ಆವಿಷ್ಕಾರ, ಸಂಶೋಧನೆಗಳು ನಡೆದು ಜನರಿಗೆ ಈ ತಂತ್ರಜ್ಞಾನ ಸುಲಭವಾಗಿ ದೊರೆಯುವಂತಾಗಬೇಕು ಎಂದು ಸಲಹೆ ನೀಡಿದರು.

ವಿಶ್ವದಲ್ಲಿ, ಭಾರತ ಆರ್ಥಿಕವಾಗಿ ಮೂರನೇ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ. ಈ ಹಂತದಲ್ಲಿ ದೇಶ ಕಟ್ಟುವ ದೊಡ್ಡ ಸವಾಲಿದೆ. ದೇಶವನ್ನು ನಡೆಸಿಕೊಂಡು ಹೋಗಲು, ದೇಶಕ್ಕೆ ನಾಯಕತ್ವ ನೀಡಲು ಉತ್ತಮ ಕೌಶಲವಿರುವ ಪ್ರತಿಭಾವಂತ ರಾಜಕಾರಣಿಗಳು ಇಂದು ದೇಶಕ್ಕೆ ಬೇಕಾಗಿದೆ ಎಂದು ಹೇಳಿದರು.

 `ಇಂದು ನಾನೇನು ಆಗಿದ್ದೇನೆ ಅದಕ್ಕೆ ನನ್ನ ಗುರು ಡಾ.ಕಲಾಂ ಕಾರಣ. ಅವರ ಜತೆ 20 ವರ್ಷ ಕೆಲಸ ಮಾಡಿದ್ದೇನೆ. ಅವರಿಂದ ಬಹಳಷ್ಟು ಕಲಿತಿದ್ದೇನೆ. ಅವರ ದೂರದೃಷ್ಟಿ, ಬದ್ಧತೆ, ಕಠಿಣ ಶ್ರಮ ಪ್ರಶ್ನಾತೀತ. ಯಾರಿಗಾದರೂ ಈ ಮೂರು ಗುಣಗಳಿದ್ದರೆ ಅವರು ಖಂಡಿತಾ ತಮ್ಮ ಗುರಿಗಳನ್ನು ಸಾಧಿಸುತ್ತಾರೆ~ ಎಂದರು.

ಸಮಾರಂಭದಲ್ಲಿ ಡಾ.ಜಿ.ಮಾಧವನ್ ನಾಯರ್ ಹಾಗೂ ಅರಬಿಂದೋ ಪಿಯು ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲ ಕೆ.ವಿ. ರಘುನಾಥ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಂಸ್ಥೆ ಖಜಾಂಚಿ ಡಾ.ಕೆ.ಆರ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ವಿ. ದೇವೇಂದ್ರ ಸ್ವಾಗತಿಸಿದರು. ಪ್ರಾಂಶುಪಾಲ ಕೆ. ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಟಿ. ಪ್ರಕಾಶ್ ಉಪಸ್ಥಿತರಿದ್ದರು. ಎಸ್. ಎಂ. ಜೋಸೆಫ್ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.