ADVERTISEMENT

ವಿವಿಧ ಪಕ್ಷಗಳ ಕಾರ್ಯಕರ್ತೆಯರಿಂದ ಪ್ರಚಾರ

ಮಹಿಳೆಯರ ಮನ ಸೆಳೆಯಲು ಮನೆ ಮನೆಗೂ ತೆರಳಿ ಪ್ರಚಾರ ಕಾರ್ಯ

ಅರ್ಚನಾ ಎಂ.
Published 8 ಮೇ 2018, 14:28 IST
Last Updated 8 ಮೇ 2018, 14:28 IST
ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಪರ ಪ್ರಚಾರ ಮಾಡಿದ ಮಹಿಳಾ ಕಾರ್ಯಕರ್ತೆಯರು.
ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಪರ ಪ್ರಚಾರ ಮಾಡಿದ ಮಹಿಳಾ ಕಾರ್ಯಕರ್ತೆಯರು.   

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಇನ್ನೂ 5 ದಿನಗಳು ಬಾಕಿ ಇದ್ದು, ರಾಜಕೀಯ ಪ್ರಚಾರ ರಂಗೇರುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತೆಯರು ತಮ್ಮ ಪಕ್ಷದ ಅಭ್ಯರ್ಥಿಯ ಪರ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ನಗರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಹಿಳೆಯರ ಮನ ಒಲಿಸಲು ಎಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತೆಯರು ಪ್ರಯತ್ನಿಸುತ್ತಿದ್ದಾರೆ.

ಆಯಾ ಪಕ್ಷದ ಎಲ್ಲಾ ಕಾರ್ಯಕರ್ತೆಯರು ಅಭ್ಯರ್ಥಿಯ ಜತೆಗೆ ಹಾಗೂ ಪ್ರತ್ಯೇಕವಾಗಿ ಹೋಗಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ, ಈವರೆಗೂ ಮಹಿಳೆಯರ ಸಬಲೀಕರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮತ್ತು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗಾಗಿ ಏನೆಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂಬುದರ ಬಗ್ಗೆ ಮಹಿಳೆಯರಿಗೆ ತಿಳಿಸುವ ಮೂಲಕ ಮತ ಕೇಳುತ್ತಿದ್ದಾರೆ.

ADVERTISEMENT

ಎಲ್ಲಾ ರಾಜಕೀಯ ಪಕ್ಷಗಳು ಬಹಿರಂಗ ಸಭೆಗಳನ್ನು ಆಯೋಜಿಸುವ ಮೂಲಕ ಮತಯಾಚನೆ ಮಾಡುತ್ತಿವೆ. ಅಂತಹ ಸಭೆಗಳಿಗೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತೆಯರು ಬೂತ್‌ಮಟ್ಟದಲ್ಲಿ ಮಹಿಳೆಯರನ್ನು ಭೇಟಿ ಮಾಡಿ ಮನೆಗಳಲ್ಲಿ ಸಭೆ ನಡೆಸುವ ಮೂಲಕ ಮಹಿಳೆಯರಿಗೆ ಮೋದಿ ಸರ್ಕಾರದ ಸಾಧನೆಗಳನ್ನುಮತ್ತು ಮುಂದೆ ಬಿಜೆಪಿ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮೂಲಕ ಮತಯಾಚಿಸಿದರೆ, ಜೆಡಿಎಸ್‌ ಸರ್ಕಾರ 20 ತಿಂಗಳಲ್ಲಿ ನಡೆಸಿದ ಆಡಳಿತದ ಸಾಧನೆಗಳನ್ನು ಮತ್ತು ಮುಂದಿನ ಯೋಜನೆಗಳ ಬಗ್ಗೆ ಹೇಳುವ ಮೂಲಕ ಜೆಡಿಎಸ್‌ ಕಾರ್ಯಕರ್ತೆಯರು ಮತ ಕೇಳುತ್ತಿದ್ದಾರೆ.

ಇನ್ನು ಕಾಂಗ್ರೆಸ್‌ ಕಾರ್ಯಕರ್ತೆಯರೇನೂ ಕಡಿಮೆಯಿಲ್ಲ ಎಂಬಂತೆ ಐದು ವರ್ಷಗಳಲ್ಲಿ ಜಾರಿಗೆ ಜನಪರ ಯೋಜನೆಗಳು, ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳನ್ನು ತಿಳಿಸುತ್ತಿದ್ದು, ಮತ ಪ್ರಚಾರದಲ್ಲಿಯೂ ಪೈಪೋಟಿ ನಡೆಯುತ್ತಿದೆ ಎಂದು ಇದರಿಂದ ಮತದಾರರಿಗೆ ಭಾಸವಾಗುತ್ತಿದೆ.

ಪ್ರಚಾರಕ್ಕಾಗಿ ತಂಡಗಳ ರಚನೆ: ಮಹಿಳೆಯರು ಬೆಳಿಗ್ಗೆ 9ರಿಂದ 12ರ ವರೆಗೆ ಮತ್ತು ಸಂಜೆ 4ರಿಂದ 8ರ ರವರೆಗೆ ಪ್ರಚಾರ ಮಾಡುತ್ತಾರೆ. ಉರಿ ಬಿಸಿಲಿನಲ್ಲಿ ಪ್ರಚಾರ ಮಾಡುವುದು ಕಷ್ಟವಾಗುವ ಕಾರಣಕ್ಕೆ ಈ ಸಮಯ ನಿಗದಿ ಮಾಡಿ
ಕೊಂಡಿದ್ದಾರೆ. ಮಹಿಳೆಯರನ್ನು 10ರಿಂದ 20 ಜನರಿಗೆ ಒಂದು ತಂಡವಾಗಿ ಮಾಡಿ ಬೂತ್‌ ಮಟ್ಟದಲ್ಲಿ, ಬಡಾವಣೆಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.

ಸ್ವಂತ ಖರ್ಚಿನಲ್ಲೇ ಪ್ರಚಾರ:  ಎಲ್ಲಾ ಪಕ್ಷದ ಕಾರ್ಯಕರ್ತೆಯರು ತಮ್ಮ ಸ್ವಂತ ಖರ್ಚಿನಲ್ಲೇ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ತಡವಾದರೆ ಮಾತ್ರ ತಿಂಡಿ ಅಥವಾ ಕಾಫಿ, ಟೀ ವ್ಯವಸ್ಥೆ ಮಾಡಿರುತ್ತಾರೆ. ‘ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಉದ್ದೇಶ ಹಾಗಾಗಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಮಹಿಳಾ ಕಾರ್ಯಕರ್ತೆಯರು.

**
ಮುಸ್ಲಿಂ ಮಹಿಳೆಯರು ನಮ್ಮ ಜತೆ ಪ್ರಚಾರಕ್ಕೆ ಬರುತ್ತಿರುವುದು ಸಂತಸದ ಸಂಗತಿ. ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳುವ ಮೂಲಕ ಅಭ್ಯರ್ಥಿ ಪರ ಮತ ಕೇಳುತ್ತಿದ್ದೇವೆ
– ಸುವರ್ಣಾ ಶಂಕರ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ

**
ನಗರದ ವಾರ್ಡ್‌ಗಳಲ್ಲಿ ಮನೆಮನೆಗೆ ಹೋಗಿ ಮಹಿಳೆಯರ ಬಳಿ ಮತ ಕೇಳುತ್ತಿದ್ದೇವೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
– ಶಾಂತಾ ಸುರೇಂದ್ರ, ಜೆಡಿಎಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ

**
ಮನೆಮನೆಗೆ ಹೋಗಿ ಕಾಂಗ್ರೆಸ್‌ ಸರ್ಕಾರವು ಮಹಿಳೆಯರಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಮಹಿಳೆಯರಿಗೆ ತಿಳಿಸುತ್ತಿದ್ದೇವೆ
– ವಿಜಯಲಕ್ಷ್ಮೀ ಸಿ.ಪಾಟೀಲ್, ಪಾಲಿಕೆ ಉಪಮೇಯರ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.