ಕಾರ್ಗಲ್: ನಾಲ್ಕೈದು ದಿನಗಳಿಂದ ಶರಾವತಿ ಕಣಿವೆಗೆ ಪ್ರವೇಶ ಪಡೆದ ಮುಂಗಾರು ಮಳೆ ಸತತವಾಗಿ ಸುರಿಯುತ್ತಾ ತಂಪೆರೆದಿದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ರೈತರು ಮುಂಗಾರು ಮಳೆಯನ್ನು ಸಂತಸದಿಂದ ಸ್ವಾಗತಿಸಿ ತಮ್ಮ ಕೃಷಿ ಚಟುವಟಿಕೆಗೆ ಚುರುಕು ಮುಟ್ಟಿಸುತ್ತಿದ್ದಾರೆ.
ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಾದ ಹೆನ್ನಿ, ತಳಕಳಲೆ, ಸುಂಕದಮನೆ, ವಟ್ಟಕ್ಕಿ, ಹೆರಕಣಿ ಇನ್ನಿತರ ಗ್ರಾಮಗಳ ರೈತಾಪಿಗಳು ಜಾನಪದ ಗೀತೆಗಳನ್ನು ಹಾಡುತ್ತಾ ಭಕ್ತಿಯಿಂದ ವರುಣ ದೇವನನ್ನು ಸ್ವಾಗತಿಸಿ, ಕೃಷಿ ಚಟುವಟಿಕೆ ಆರಂಭಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿತ್ತು.
ವಿಶ್ವವಿಖ್ಯಾತ ಜೋಗ ಜಲಪಾತ ನೀರಿನ ಕೊರತೆಯಿಂದ ಸೊರಗಿದೆ. ತನ್ನ ವೈಭವವನ್ನು ಕಳೆದುಕೊಂಡಿದೆ. ಇಲ್ಲಿನ ಪ್ರವಾಸಿಗರನ್ನು ಆಶ್ರಯಿಸಿ ಜೀವನ ನಡೆಸುತ್ತಿರುವ ನೂರಾರು ಫೋಟೋಗ್ರಾಫರ್‌ಗಳು ಮತ್ತು ಸಣ್ಣಪುಟ್ಟ ವ್ಯಾಪಾರಿಗಳ ಮುಖದಲ್ಲಿ ಮುಂಗಾರು ಮಂದಹಾಸ ಮೂಡಿಸಿದೆ.
ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವ ಲಿಂಗನಮಕ್ಕಿ ಅಣೆಕಟ್ಟೆಯ ನೀರು ಅಂತಿಮ ಗಡಿರೇಖೆಯ ಸಮೀಪದಲ್ಲಿದೆ. ವಿದ್ಯುತ್ ಉತ್ಪಾದನೆಗೆ ಇನ್ನೇನು ಆತಂಕ ಸೃಷ್ಟಿಸಬಹುದೇನೊ ಎಂಬ ಚಿಂತೆಯನ್ನು ಮುಂಗಾರು ಮಳೆ ದೂರ ಮಾಡುವ ಲಕ್ಷಣ ಕಂಡು ಬರುತ್ತಿದೆ ಎಂಬುದು ಕೆಪಿಸಿ ಅಧಿಕಾರಿಗಳ ಅಭಿಪ್ರಾಯ.
ಶಾಲೆಗಳು ಆರಂಭವಾಗಿ ಶೈಕ್ಷಣಿಕ ಸಾಮಗ್ರಿಗಳ ಮಾರಾಟದಲ್ಲಿ ನಿರತರಾಗಿರುವ ಈ ಭಾಗದ ವ್ಯಾಪಾರಸ್ಥರಿಗೆ ಮುಂಗಾರು ಮಳೆಯ ಆಗಮನ ವ್ಯಾಪಾರ ಭರದಿಂದ ಸಾಗುವಂತೆ ಮಾಡಿದೆ. ವಿಳಂಬವಾಗಿ ಆದರೂ ಶರಾವತಿ ಕಣಿವೆಗೆ ಪ್ರವೇಶಿಸಿರುವ ಮುಂಗಾರು ಮಳೆ ಎಲ್ಲರಲ್ಲೂ ಆಶಾಭಾವನೆ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.