ADVERTISEMENT

ಶಿಕಾರಿಪುರದಲ್ಲಿ ಹರ್ಷ; ಸಿಹಿ ಹಂಚಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 9:30 IST
Last Updated 15 ಮಾರ್ಚ್ 2012, 9:30 IST

ಶಿಕಾರಿಪುರ: ತಾಲ್ಲೂಕಿನ ಜನರ ಬಹುದಿನದ ಬೇಡಿಕೆಯಾದ ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ಮಾರ್ಗದ ರೈಲ್ವೆ ಮಾರ್ಗಕ್ಕಾಗಿ ಸಮೀಕ್ಷೆ ನಡೆಸಲು ಬುಧವಾರ ಮಂಡಿಸಿದ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಒಪ್ಪಿಗೆ ನೀಡಿದ್ದು ಸಾರ್ವಜನಿಕರು ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಹಲವು
ವರ್ಷದ ಬೇಡಿಕೆ:  ಮಲೆನಾಡು ಜಿಲ್ಲೆಗಳನ್ನು ಶಿವಮೊಗ್ಗ ಮೂಲಕ ಬಯಲುಸೀಮೆ ರಾಣೇಬೆನ್ನೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದಕ್ಕಾಗಿ ಈ ಭಾಗದ ಜನರು ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೈಸೂರು ಮಹಾರಾಜರ ಕಾಲದಲ್ಲಿದ್ದ ಮೈಸೂರು ರೈಲ್ವೆ  ಕಾರ್ಯ ನಿರ್ವಹಿಸುವ ಕಾಲದಲ್ಲೆೀ ಈ ಮಾರ್ಗದ ಸಮೀಕ್ಷೆ ಮಾಡಲಾಗಿತ್ತು ಎಂದು ಇಲ್ಲಿನ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ.

ಪರ್ಯಾಯ ಮಾರ್ಗ: ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಕೊಂಕಣ ರೈಲ್ವೆಗೆ ಸಂಪರ್ಕ ಕಲ್ಪಿಸುವ ಯೋಜನೆ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ಹೇಳಿದ್ದು, ಇದೀಗ ಈ ಮಾರ್ಗದ ಮೂಲಕ ರೈಲು ಸಂಪರ್ಕ ಕಲ್ಪಿಸಿದ್ದಲ್ಲಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳನ್ನು ರಾಣೇಬೆನ್ನೂರು ಮಾರ್ಗವಾಗಿ ಮುಂಬೈಗೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಅವಕಾಶ ಆದಂತಾಗುತ್ತದೆ.

 ಕಳೆದ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಶಿವಮೊಗ್ಗ ಹೊನ್ನಾಳಿ ಹರಿಹರ ಮಾರ್ಗದ ಸಮೀಕ್ಷೆಗಾಗಿ ಅನುಮತಿ ಸಿಕ್ಕಿದ್ದರೂ ಆ ಮಾರ್ಗದಲ್ಲಿ ಹೆಚ್ಚು ಫಲವತ್ತಾದ ನೀರಾವರಿ ಜಮೀನು ವಶಕ್ಕೆ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಈ ಮಾರ್ಗ ಪರ್ಯಾಯವಾಗುತ್ತದೆ ಎನ್ನಲಾಗಿದ್ದು, ಈ ಭಾಗದಲ್ಲಿ ನೀರಾವರಿ ಜಮೀನುಗಳು ಹೆಚ್ಚು ಇಲ್ಲದ ಕಾರಣಕ್ಕೆ ಯೋಜನೆಗೆ ಅಗತ್ಯವಾದ ಜಮೀನು ಸಿಗುತ್ತದೆ ಎನ್ನುವ ವಿಶ್ವಾಸವನ್ನು ರೈಲ್ವೆ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಸಂಸದರ ಶ್ರಮ:  ಸಂಸದ ಬಿ.ವೈ. ರಾಘವೇಂದ್ರ ಯೋಜನೆ ಜಾರಿಗೆ ತರುವುದಕ್ಕಾಗಿ ಸೊರಬ ತಾಲ್ಲೂಕು ಕ್ಯಾಸನೂರು ಮಠದ ಕಾರ್ಯಕ್ರಮದಲ್ಲಿ ಬಹಿರಂಗ ಹೇಳಿಕೆ ನೀಡಿದ್ದರಲ್ಲದೇ, ನಂತರದಲ್ಲಿ ಯೋಜನೆಗೆ ಕಡತವನ್ನು ತಯಾರಿಸಿದ್ದಲ್ಲದೇ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರ ಬೇಡಿಕೆ ಪತ್ರದೊಂದಿಗೆ ರೈಲ್ವೆ ರಾಜ್ಯ ಸಚಿವರಿಗೆ ಮನವಿ ಅರ್ಪಿಸಿದ್ದರು. ರೈಲ್ವೆ ಬಜೆಟ್‌ನ ಪೂರ್ವಭಾವಿ ಸಭೆಗಳಲ್ಲಿ ಬೇಡಿಕೆಯನ್ನೂ ಸಲ್ಲಿಸುವ ಮೂಲಕ ಯೋಜನೆ ಸಮೀಕ್ಷೆ ಅನುಮತಿಗಾಗಿ ಶ್ರಮವಹಿಸಿದ್ದರು.

ಸಾರ್ವಜನಿಕರ ಹರ್ಷ:  ರೈಲ್ವೆ ಬಜೆಟ್‌ನಲ್ಲಿ ಶಿಕಾರಿಪುರ ಮಾರ್ಗವಾಗಿ ರೈಲು ಮಾರ್ಗದ ಸಮೀಕ್ಷೆಗೆ ಅನುಮತಿ ಸಿಕ್ಕಿರುವ ಕಾರಣಕ್ಕಾಗಿ ಬಸ್‌ನಿಲ್ದಾಣ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಸದರ ಬೆಂಬಲಿಗರು, ಸಾರ್ವಜನಿಕರು ಮೆರವಣಿಗೆ ನಡೆಸುವ ಮೂಲಕ ಹರ್ಷ ವ್ಯಕ್ತಪಡಿಸಿದರು.

  ಬಿಜೆಪಿ ಹರ್ಷ
ಸಾಗರ: ತಾಲ್ಲೂಕಿನ ತಾಳಗುಪ್ಪದಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಲು ಕೇಂದ್ರದ ರೈಲ್ವೆ ಬಜೆಟ್‌ನಲ್ಲಿ ಅನುಮೋದನೆ ದೊರಕಿರುವುದಕ್ಕೆ ತಾಲ್ಲೂಕು ಬಿಜೆಪಿ ಘಟಕ ಹರ್ಷ ವ್ಯಕ್ತಪಡಿಸಿದೆ.

ಈ ಭಾಗದ ಜನತೆಯ ಬಹು ಕಾಲದ ಬೇಡಿಕೆ ಈಗ ಈಡೇರಿದಂತಾಗಿದೆ. ಈ ಕೆಲಸಕ್ಕಾಗಿ ಶ್ರಮಿಸಿದ ಬಿ.ವೈ. ರಾಘವೇಂದ್ರ ಬೇಡಿಕೆಗೆ ಸ್ಪಂದಿಸಿದ  ರೈಲ್ವೆ ಖಾತೆ ರಾಜ್ಯ  ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು,ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್. ಜಯಂತ್, ನಗರ ಘಟಕದ ಅಧ್ಯಕ್ಷ ವಿ. ಮಹೇಶ್ ಕೃತಜ್ಞತೆ ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.