ADVERTISEMENT

ಶಿವಮೊಗ್ಗ ಗ್ರಾಮಾಂತರ: ಹೊಸಬರಿಗೆ ಟಿಕೆಟ್ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 5:55 IST
Last Updated 9 ಏಪ್ರಿಲ್ 2013, 5:55 IST

ಶಿವಮೊಗ್ಗ: ಮಾಜಿ ಶಾಸಕ ಕರಿಯಣ್ಣ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಸೋಮವಾರ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ  ಎರಡು ಚುನಾವಣೆಗಳಿಂದ ಕಾಂಗ್ರೆಸ್ ಸತತವಾಗಿ ಸೋಲು ಕಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಾರು 25 ಸಾವಿರ ಮತಗಳ ಅಂತರದಲ್ಲಿ ಪರಾಭವ ಗೊಂಡಿದ್ದು, ಇದರಿಂದ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ ಎಂದು ಪ್ರತಿಭಟನಾಕಾರರು  ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಕಂಡುಬರುತ್ತಿದೆ. ಆದರೆ, ಈ ಹಿಂದೆ ಸೋತವರಿಗೆಟಿಕೆಟ್ ನೀಡಿರುವುದರಿಂದ ಕಾರ್ಯಕರ್ತರು ಅಸಮಾಧಾನ ಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡಬೇಕು. ಕೇಂದ್ರ, ರಾಜ್ಯ ಕಾಂಗ್ರೆಸ್ ಮುಖಂಡರು ಗಮನಹರಿಸಿ, ಹೊಸಬರಿಗೆ ಟಿಕೆಟ್ ನೀಡಿದರೆ ಶತಾಯಗತಾಯ ಪಕ್ಷವನ್ನು ಗೆಲ್ಲಿಸಲಾಗುವುದು ಎಂದು ಹೇಳಿದರು.

ಪ್ರತಿಭಟನಾಕಾರರು ರಸ್ತೆತಡೆ ನಡೆಸಲು ಮುಂದಾದಾಗ ಪೊಲೀಸರು ತಡೆ ಹಾಕಿದರು. ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಪಿ. ದಿನೇಶ್, ಮನವಿ ಸ್ವೀಕರಿಸಿ, ಇದನ್ನು ಪಕ್ಷದ ಮುಖಂಡರ ಗಮನಕ್ಕೆ ತರಲಾಗು ವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಹ ಕಾರ್ಯದರ್ಶಿ ಯು.ಕೆ. ವೆಂಕಟೇಶ್, ಅಗಸವಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮುನೇಶ್ವರ, ತಾ.ಪಂ. ಮಾಜಿ ಸದಸ್ಯ ರುದ್ರಪ್ಪ, ಮಂಡಲ ಪಂಚಾಯ್ತಿ ಮಾಜಿ ಅಧ್ಯಕ್ಷ ನಿದಿಗೆ ಮುರುಗೇಶ್, ಮುಖಂಡರಾದ ಕೆ.ಜಿ. ಮಲ್ಲಿಕಾರ್ಜುನ, ತ್ಯಾಜವಳ್ಳಿ ವೀರೇಶಪ್ಪ, ವೆಂಕಟೇಶ್, ಅಣ್ಣಪ್ಪ, ರಂಗಪ್ಪ  ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.