ADVERTISEMENT

ಶಿವಮೊಗ್ಗ: ವಿವಿಧ ಕ್ಷೇತ್ರದ ಗಣ್ಯರ ಅನಿಸಿಕೆ.ರಾಜ್ಯ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 10:10 IST
Last Updated 25 ಫೆಬ್ರುವರಿ 2011, 10:10 IST

ಶಿವಮೊಗ್ಗ:  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಿದ ಬಜೆಟ್ ಬಗ್ಗೆ ಜಿಲ್ಲಾದ್ಯಂತ ವಿವಿಧ ಕ್ಷೇತ್ರದ ಗಣ್ಯರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.‘ಕೃಷಿಯಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಅಳವಡಿಸಿದ್ದು ಕ್ರಾಂತಿಕಾರಕ ಹೆಜ್ಜೆ. ಕೃಷಿಯಲ್ಲಿ ವೃತ್ತಿಪರತೆ ತರುವ ದೃಷ್ಟಿಯಿಂದ ಇದು ಉತ್ತಮ ಪ್ರಯತ್ನ. ಸಾವಯವ ಕೃಷಿ, ಕೆರೆ ಅಭಿವೃದ್ಧಿ, ಜೇನು ಕೃಷಿಗೆ ಆದ್ಯತೆ ನೀಡಿರುವುದು ಉತ್ತಮ ಅಂಶಗಳು. ಜೈವಿಕ ಇಂಧನ ಕಾರ್ಯಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಸ್ವಾಗತಾರ್ಹ. ಆದರೆ, ಕೃಷಿ ಬಜೆಟ್ ಇನ್ನಷ್ಟು ವಿಸ್ತರಿಸಬೇಕಿತ್ತು.

 ದೃಢತೆ ಇಲ್ಲ

ಸಾಮಾನ್ಯ ಬಜೆಟ್‌ನಲ್ಲಿ ಕೃಷಿಗೆ ಒಂದು ಪ್ಯಾಕೇಜ್ ನೀಡಿದಂತಾಗಿದೆ. ಹಾಗಾಗಿ, ಇದು ಕೃಷಿ ಬಜೆಟ್ ಎನ್ನಲು ಬರುವುದಿಲ್ಲ. ಕೃಷಿ ಬಜೆಟ್‌ಗೆ ಇರುವ ದೃಢತೆ ಇಲ್ಲಿಲ್ಲ. ಪ್ರೊ.ನಂಜುಂಡಸ್ವಾಮಿ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಮಲೆನಾಡಿನಲ್ಲಿ 26 ಸಾವಿರಕ್ಕೂ ಹೆಚ್ಚಿನ ಕೆರೆಗಳಿದ್ದು, ಮುಖ್ಯಮಂತ್ರಿಗಳು ಘೋಷಿಸಿದ 1 ಸಾವಿರ ಕೋಟಿ ರೂ ಏನಕ್ಕೂ ಸಾಲಲ್ಲ. ಬಜೆಟ್‌ನಲ್ಲಿ ಕರ್ನಾಟಕ ಕೃಷಿ-ವಾಣಿಜ್ಯ ನೀತಿ ಹಾಗೂ ಕೃಷಿ ಮೂಲಸೌಕರ್ಯ ಎಂಬ ಎರಡು ಹೊಸ ಆಲೋಚನೆಗಳನ್ನು ನೀಡಿದ್ದಾರೆ. ನೀರಾವರಿಗೆ ಒತ್ತು ನೀಡಿದ್ದು ಉತ್ತಮ ಅಂಶ. ಬೆಳೆಯ ಕೊಯ್ಲೋತ್ತರ ನಿರ್ವಹಣೆ ಬಗ್ಗೆ ಪ್ರಸ್ತಾಪ ಮಾಡಬೇಕಿತ್ತು.

ಕೈಗಾರಿಕಾ ಕ್ಷೇತ್ರ ಕಡೆಗಣನೆ
ಕೃಷಿಗೆ ಒತ್ತು ಕೊಟ್ಟಷ್ಟು ಕೈಗಾರಿಕೆಗೆ ಕೊಟ್ಟಿಲ್ಲ. ಕೃಷಿ ಅಲ್ಲದೇ, ಕೈಗಾರಿಕೆಗಳೂ ಮುಖ್ಯ; ತೆರಿಗೆ ದರ ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದ್ದು, ಕಾಳಸಂತೆಗೆ ಅನುವುಮಾಡಿಕೊಟ್ಟಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ಚಿಂತನೆ ಮಾಡಬೇಕಿದೆ. ಇನ್ನು ಪ್ರತ್ಯೇಕ ಬಜೆಟ್ ಮೂಲಕ ಕೃಷಿ ಕ್ಷೇತ್ರವನ್ನು ಸಮಗ್ರವಾಗಿ ತಲುಪಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಅನುಕೂಲವಾಗಬಹುದು. 

 ಕೃಷಿಗೆ ಪೂರಕ ಬಜೆಟ್

ರೈತರಿಗೆ ಶೇ.1ರ ಬಡ್ಡಿದರದಲ್ಲಿ ಸಾಲ ನೀಡಿರುವುದು ಸಹಕಾರಿ ಕ್ಷೇತ್ರಕ್ಕೆ ಉತ್ತೇಜನ ನೀಡಲಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ, ಕೃಷಿ ಕ್ಷೇತ್ರಕ್ಕೆ 1ಸಾವಿರ ಕೋಟಿ ರೂ ಆವರ್ತ ನಿಧಿ, ರೈತರ ಬೆಳೆ ಸಂಗ್ರಹಕ್ಕೆ ಗೋದಾಮು ನಿರ್ಮಾಣಕ್ಕೆ 100ಕೋಟಿ ರೂ ಮೀಸಲಿಡಲಾಗಿದೆ. ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ನೀಡಿರುವುದು ಉತ್ತಮ ಅಂಶ. ಮೊಟ್ಟಮೊದಲ ಬಾರಿಗೆ ನೀರಾವರಿಗೆ ಆದ್ಯತೆ ನೀಡಲಾಗಿದೆ. ಒಟ್ಟಾರೆ ಕೃಷಿಗೆ ಪೂರಕವಾದ ಉತ್ತಮ ಬಜೆಟ್.

 ಹಳೆ ಮದ್ಯ
ಕೃಷಿ ಬಜೆಟ್‌ನಲ್ಲಿ ಹೊಸದೇನು ಇಲ್ಲ. ಶೇ. 70ರಷ್ಟು ಮತದಾರರಿರುವ ಕೃಷಿಕರನ್ನು ಓಲೈಸುವ ತಂತ್ರ. ಹೊಸ ಬಾಟಲಿನಲ್ಲಿ ಹಳೆ ಮದ್ಯ. ಎಲ್ಲಾ ಸರ್ಕಾರಗಳೂ ಇದನ್ನೇ ಮಾಡಿವೆ. ಜನರ ಜೀವನಶೈಲಿ, ಮಾರುಕಟ್ಟೆ ಪದ್ಧತಿ ಬದಲಾಗದೆ ಎಷ್ಟೇ ಕೃಷಿ ಬಜೆಟ್ ಮಂಡಿಸಿದರೂ ಪ್ರಯೋಜನವಿಲ್ಲ ಎನ್ನುತ್ತಾರೆ ಕೃಷಿಕ ಕುರುವರಿ ಸೀತಾರಾಂ.
 
ಸ್ವಾಗತಾರ್ಹ
ಗ್ರಾಮೀಣ ಗುಡಿ ಕೈಗಾರಿಕೆಗಳು, ಎಪಿಎಂಸಿ ಅಭಿವೃದ್ಧಿ, ಸಿದ್ಧಉಡುಪು ತರಬೇತಿ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಸಣ್ಣ ಪುಟ್ಟ ಯೋಜನೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ, ಕೈಗಾರಿಕೆಗೆ ಹೇಳಿಕೊಳ್ಳುವಂತಹ ವಿಶೇಷ ಕೊಡುಗೆಗಳೇನೂ ಇಲ್ಲ. ಈ ಮಧ್ಯೆ ವ್ಯಾಟ್ ಹೆಚ್ಚಿಸಿದ್ದು, ವ್ಯಾಪಾರಿಗಳಿಗೆ ಸಮಸ್ಯೆಯಾಗಲಿದೆ. ವ್ಯಾಪಾರ ಪಕ್ಕದ ರಾಜ್ಯಗಳಿಗೆ ಹರಿದುಹೋಗುವ ಸಾಧ್ಯತೆ ಇದೆ. ಪ್ರವಾಸೋದ್ಯಮಕ್ಕೆ ಹೆಚ್ಚು ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ. 

 ಬೆಲೆ ಏರಿಕೆಗೆ ಅವಕಾಶ
ಪ್ರತ್ಯೇಕ ಬಜೆಟ್‌ನಲ್ಲಿ ಕೃಷಿ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಕೃಷಿ ಬಜೆಟ್ ಮಂಡಿಸುವ ಮುನ್ನ ರೈತರ ಭೂಸಮಸ್ಯೆ ಬಗೆಹರಿಸಬೇಕಿತ್ತು. ಕೃಷಿ ಬಜೆಟ್, ಚುನಾವಣೆಗಾಗಿ, ತಮ್ಮ ಮೇಲಿನ ಆಪಾದನೆಗಳನ್ನು ಮರೆಮಾಚಲು ಮಾಡಿದ ಒಂದು ಗಿಮಿಕ್ ಅಷ್ಟೇ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಸಾಮಾನ್ಯ ಬಜೆಟ್‌ನಲ್ಲಿ ವ್ಯಾಟ್ ದರ ದುಪ್ಪಟ್ಟಿದೆ. ಇದು ಬೆಲೆ ಏರಿಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.
 
ಆತ್ಮವಿಶ್ವಾಸ ಮೂಡಿಸುವ ಬಜೆಟ್
ಐತಿಹಾಸಿಕ ಬಜೆಟ್ ಇದು. ಮೊಟ್ಟಮೊದಲ ಬಾರಿಗೆ ಕೃಷಿಗೆ ಒತ್ತು ನೀಡಿ 18 ಸಾವಿರ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ರೈತರಲ್ಲಿ ಇದು ಹೊಸ ಆತ್ಮವಿಶ್ವಾಸ ಮೂಡಿಸಲಿದೆ. ಶಿವಮೊಗ್ಗ ನಗರದಲ್ಲಿ ವರ್ತುಲ ರಸ್ತೆಗೆ 100 ಕೋಟಿ ರೂ. ನೀಡಿರುವುದು, ಹಲವು ನೀರಾವರಿ ಯೋಜನೆಗಳಿಗೆ ಹಣ ಮೀಸಲಿಟ್ಟಿರುವುದು ಒಳ್ಳೆಯ ಅಂಶ. 

ಓಲೈಕೆ ಪ್ರಯತ್ನ

ಜನರನ್ನು ರೈತರನ್ನು ಓಲೈಸುವ ಒಂದು ಪ್ರಯತ್ನವೇ ವಿನಾ ಕಾಳಜಿ ಎಲ್ಲೂ ಇಲ್ಲ. ಆಳವಾದ ಅಧ್ಯಯನವಿಲ್ಲ. ಮುಖ್ಯಮಂತ್ರಿಗಳಿಗೆ ರೈತರ ವಾಸ್ತವ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲ ಎಂಬುದು ಬಜೆಟ್‌ನಿಂದ ಸ್ಪಷ್ಟವಾಗುತ್ತದೆ. ಬಜೆಟ್ ಎಂದರೆ ಜೀವನದ ಮೇಲೆ ಪರಿಣಾಮ ಬೀರುವಂತಿರಬೇಕು. ಅಂತಹ ಯಾವುದೇ ಪ್ರಯತ್ನಗಳೂ ಇಲ್ಲಿ ಆಗಿಲ್ಲ ಎಂದು ಹೇಳುತ್ತಾರೆ  ಸಹಜ ಕೃಷಿಕ ದಿವಾಕರ ಹೆಗ್ಡೆ. 
 
ಕೇವಲ ಅಂಕಿ-ಅಂಶಗಳಷ್ಟೇ’
ಬಜೆಟ್‌ನಲ್ಲಿ ಜಿಲ್ಲೆಗೆ ಹಲವು ಯೋಜನೆಗಳನ್ನು ನೀಡಿರುವುದಾಗಿ ಹೇಳುತ್ತಾರೆ. ಆದರೆ, ಅದು ಕೇವಲ ಅಂಕಿ-ಅಂಶಗಳಷ್ಟೇ. ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ ಯಾವುದೇ ಯೋಜನೆ ಅನುಷ್ಠಾನವಾಗಿಲ್ಲ. ಈಗ ನೀಡಿದ್ದು ಅನುಷ್ಠಾನಗೊಳ್ಳಲು ಇನ್ನೆಷ್ಟು ವರ್ಷ ಬೇಕೋ? ಹಾಗಾಗಿ, ಬಜೆಟ್ ಬಗ್ಗೆ ಜನರೂ ಆಸಕ್ತಿ ಕಳೆದುಕೊಂಡಿದ್ದಾರೆ.

ವೈಜ್ಞಾನಿಕ ಬೆಲೆ ಬೇಕು

ಕೃಷಿ ಬಜೆಟ್ ಸ್ವಾಗತಾರ್ಹ. ಆದರೆ, ಇದರಲ್ಲಿ ಮುಖ್ಯವಾಗಿ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಘೋಷಿಸುವುದನ್ನೇ ಮುಖ್ಯಮಂತ್ರಿಗಳು ಮರೆತಿದ್ದಾರೆ. ಕೃಷಿ ಬಜೆಟ್ ಅಂತಾರೆ ಇದರಲ್ಲಿ ಅನೇಕ ಬೇರೆ ಬೇರೆ ಅಂಶಗಳು ಸೇರ್ಪಡೆಗೊಂಡಿವೆ ಎಂದು ಹೇಳುತ್ತಾರೆ ರೈತ ಸಂಘದ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ವೈ.ಜಿ. ಮಲ್ಲಿಕಾರ್ಜುನ್.
 
ಚಳವಳಿ ಗ್ಯಾರಂಟಿ
ನಾವು ಹೇಳಿದ್ದು ಈ ರೀತಿಯ ಕೃಷಿ ಬಜೆಟ್ ಅಲ್ಲ. ಸರ್ಕಾರವೇ ರೈತರ ಬೆಳೆಗಳನ್ನು ಕೊಂಡು ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿತ್ತು. ಗೋದಾಮು, ಶೀತಲೀಕರಣ ವ್ಯವಸ್ಥೆಯನ್ನು ಹೆಚ್ಚು ಮಾಡಬೇಕಿತ್ತು. ಕೃಷಿಗೆ ಪೂರಕವಾದ ಕೈಗಾರಿಕೆಗಳನ್ನು ಬೆಳೆಸಬೇಕಿತ್ತು. ಸಾವಯವ ಕೃಷಿಗೆ ಸುಖಾಸುಮ್ಮನೆ ಇನ್ನಷ್ಟು ಹಣ ನೀಡಿದ್ದಾರೆ. ಬಾರಿಕೋಲು ಚಳವಳಿ ಮಾಡುವುದು ಗ್ಯಾರಂಟಿ.

ಕ್ರಾಂತಿಕಾರಕ ಬಜೆಟ್

ರಾಷ್ಟ್ರದ ಇತಿಹಾಸದಲ್ಲಿಯೇ ರಾಜ್ಯ ಬಜೆಟ್ ಕ್ರಾಂತಿಯನ್ನು ಉಂಟು ಮಾಡಲಿದೆ.ಶೇ. 1ರ ಬಡ್ಡಿದರದಲ್ಲಿ ನೀಡಿರುವ ಕೃಷಿ ಸಾಲ ಸೌಲಭ್ಯ, ಪಂಪ್‌ಸೆಟ್ ಸಕ್ರಮ ಶ್ಲಾಘನೀಯ.
ವ್ಯಾಟ್‌ದರ ಶೇ. 14ರಷ್ಟು ಹೆಚ್ಚಿಸುವ ಬದಲು ತೆರಿಗೆ ವ್ಯಾಪ್ತಿಯನ್ನು ಹೆಚ್ಚು ಮಾಡುವ ಕಡೆ ಗಮನ ನೀಡಿದ್ದರೆ ಬಜೆಟ್ ಮತ್ತಷ್ಟು ಜನಮನ್ನಣೆ ಪಡೆಯುತ್ತಿತ್ತು.

 ಹುರುಪು ತುಂಬಿರುವ ಬಜೆಟ್
ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಹುರುಪು ತುಂಬುವ ಕೆಲಸವನ್ನು ರಾಜ್ಯ ಬಜೆಟ್ ಮಾಡಿದೆ.ದೇಶದ ಇತಿಹಾಸದಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ನೀಡುವ ಮೂಲಕ ಬೃಹತ್ ಉದ್ದಿಮೆ ಸಾಲಿಗೆ ಅದನ್ನು ಸೇರಿಸುವ ಜತೆಗೆ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡಿದೆ.ಎಲ್ಲಾ ಆರ್ಥಿಕ ಚಟುವಟಿಕೆಯ ಮೂಲ ಇಂಧನ. ಇದಕ್ಕಾಗಿ ಒಟ್ಟು ಬಜೆಟ್‌ನಲ್ಲಿ ಶೇ. 10ರಷ್ಟು ಮೀಸಲಿಟ್ಟಿರುವುದು ಸ್ವಾಗತಾರ್ಹ ಕ್ರಮ.
 
ಹೊಸತನದ ಬಜೆಟ್
‘ಪ್ರತ್ಯೇಕ ಕೃಷಿ ಬಜೆಟ್ ಹೊಸತನದ ಉದಾಹರಣೆ. ಎಲ್ಲಾ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಮೊದಲ ಪ್ರಯತ್ನದಲ್ಲಿಯೇ ರೈತರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ವಹಿಸಲಾಗಿದೆ’

ದೊಡ್ಡ ರೈತರಿಗೆ ಉಪಯೋಗ ಆಗದು’
‘ರೈತರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ದತ್ತು ಕಾರ್ಯಕ್ರಮ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿದೆ. ದೊಡ್ಡ ರೈತರಿಗೆ ಉಪಯೋಗ ಆಗದು. ಶೇ. 1 ಸಾಲ ರಾಷ್ಟ್ರೀಕೃತ ಬ್ಯಾಂಕುಗಳಿಂದಲೂ ಸಿಗುವಂತಾಗಬೇಕು’.

ಮಂಜೂರಾತಿ: ಅಭಿನಂದನೆ
ಸೊರಬ:
ಬಜೆಟ್‌ನಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಕಚವಿಯ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಪ್ರಸ್ತಾವ ಆಗಿರುವುದಕ್ಕೆ ತಾಲ್ಲೂಕಿನಲ್ಲಿ ಹರ್ಷ ವ್ಯಕ್ತವಾಗಿದೆ.ದಂಡಾವತಿ ಯೋಜನೆಯ ಎಲ್ಲಾ ಕಾಮಗಾರಿಗಳಿಗೆ ಮಂಜೂರಾತಿ ದೊರೆತು, ಕಾರ್ಯಾರಂಭ ಅಗಲಿರುವ ಕುರಿತು ಜನತೆಯ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಎಚ್. ಹಾಲಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.