ADVERTISEMENT

ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ; ಆತಂಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:43 IST
Last Updated 25 ಜೂನ್ 2013, 10:43 IST

ಶಿವಮೊಗ್ಗ:  ದೇಶೀಯ ವಿದ್ಯಾ ಶಾಲಾ ಸಮಿತಿ (ಡಿವಿಎಸ್) ಆವರಣದಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ಮಾಡುತ್ತಿರುವುದನ್ನು ತಡೆ ಹಿಡಿಯುವಂತೆ ಆಗ್ರಹಿಸಿ ಡಿವಿಎಸ್ ಸಂಸ್ಥೆ ಪದಾಧಿಕಾರಿಗಳು, ಬೋಧಕ ಸಿಬ್ಬಂದಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ರಾಜ್ಯದಲ್ಲಿಯೇ ಡಿವಿಎಸ್ ಸಂಸ್ಥೆ ವಿಶಿಷ್ಟ ಸ್ಥಾನ ಗಳಿಸಿದೆ. ಪ್ರಥಮ ಪಿಯುಸಿ ಪ್ರವೇಶಾತಿಯನ್ನು ಇಲಾಖಾ ನಿಯಮಾನುಸಾರ ಕಳೆದ 6 ವರ್ಷಗಳಿಂದ ಅತ್ಯಂತ ಪಾರದರ್ಶಕ ವ್ಯವಸ್ಥೆಯಡಿ ನಡೆಸಲಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ತಂದ ಮೇಲೆ ಸೀಟು ಕೊಡಿಸುವ ದಂಧೆ ಮಾಡುವ ಕೆಲವರಿಗೆ ತೊಂದರೆಯಾಗುತ್ತಿದೆ. ಅಂತಹವರಿಂದ ಶೈಕ್ಷಣಿಕ ವಾತಾವರಣಕ್ಕೆ ತೊಂದರೆ ಯಾಗುತ್ತಿದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಜೂನ್ 22ರಂದು ಕೆಲ ವ್ಯಕ್ತಿಗಳು ಸಂಸ್ಥೆಗೆ ಆಗಮಿಸಿ, ಸಂಸ್ಥೆಯ ಪದಾಧಿಕಾರಿಗಳನ್ನು ಏಕವಚನ ಬಳಸಿ ಬೈದಿರುವುದು ಖಂಡನಾರ್ಹ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ದೂರಿನ್ವಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಕಾರ್ಯದರ್ಶಿ ವಿ.ಕೆ. ಸುಬ್ರಹ್ಮಣ್ಯ, ಸಂಸ್ಥೆ ಹಿರಿಯ ಪದಾಧಿಕಾರಿ ಶ್ರೀರಂಗರಾಜು ಮತ್ತಿತರರು ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.