ADVERTISEMENT

ಸಫಾಯಿ ಕರ್ಮಚಾರಿಗಳು ಮನುಷ್ಯರಲ್ಲವೇ?

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರೆಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 11:40 IST
Last Updated 12 ಅಕ್ಟೋಬರ್ 2017, 11:40 IST
ಸಫಾಯಿ ಕರ್ಮಚಾರಿಗಳು ಮನುಷ್ಯರಲ್ಲವೇ?
ಸಫಾಯಿ ಕರ್ಮಚಾರಿಗಳು ಮನುಷ್ಯರಲ್ಲವೇ?   

ಶಿವಮೊಗ್ಗ: ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಕಲ್ಪಿಸಲು ಉದಾಸೀನತೆ ಮಾಡುತ್ತಿರುವ ಅಧಿಕಾರಿ ವರ್ಗದವರು ಅವರನ್ನು ಮನುಷ್ಯ ರೂಪದ ಪ್ರಾಣಿಗಳೆಂದಾದರೂ ಭಾವಿಸಬೇಕು ಎಂದು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರೆಪ್ಪ ಚಾಟಿ ಬೀಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರ ನೈಜ ಸಮೀಕ್ಷೆ ನಡೆಸಿ, ಖಚಿತಪಟ್ಟಿ ತಯಾರಿಸುವುದಕ್ಕೆ ಅಧಿಕಾರಿಗಳ ಮನಸ್ಸು ಒಪ್ಪುತ್ತಿಲ್ಲ. ಇಂತಹ ಮನಸ್ಥಿತಿ ಬೆಳೆದಿರುವುದು ಬೇಸರದ ಸಂಗತಿ. ಶಿವಮೊಗ್ಗ ನಗರದಲ್ಲಿ ಯಾರೊಬ್ಬರೂ ಶೌಚಾಲಯ ಗುಂಡಿಗಳಿಗೆ ಇಳಿದು ಸ್ವಚ್ಛಗೊಳಿಸುತ್ತಿಲ್ಲ ಎಂಬ ವರದಿ ನೀಡುತ್ತಿದ್ದಾರೆ. ಹಾಗಾದರೆ, ಶೌಚಾಲಯ ಗುಂಡಿ ತುಂಬಿದಾಗ ಯಾವ ರೀತಿ ಸ್ವಚ್ಛಗೊಳಿಸಲಾಗುತ್ತಿದೆ ಎನ್ನುವ ಮಾಹಿತಿ ನೀಡಬೇಕು. ಕೇವಲ ಅಂಕಿ ಅಂಶ ನೀಡುವ ಮೂಲಕ ಸತ್ಯ ಮರೆಮಾಚಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಅಧಿಕಾರಿಗಳು ಅರಿಯಬೇಕು ಎಂದು ತಾಕೀತು ಮಾಡಿದರು.

ADVERTISEMENT

ಸಫಾಯಿ ಕರ್ಮಚಾರಿಗಳು ಇಂದಿಗೂ ಅನೈರ್ಮಲ್ಯ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಲಸು ಪ್ರದೇಶಗಳಲ್ಲಿ ಪ್ರಾಣಿಗಳು ಸಹ ವಾಸಿಸಲು ಸಾಧ್ಯವಾಗದ ಪ್ರದೇಶಗಳಲ್ಲಿ ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಇಂದಿಗೂ ಹಲವು ಕಡೆ ಶೌಚಾಲಯದ ಗುಂಡಿಗಳಿಗೆ ಅವರನ್ನು ಇಳಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಆದರೆ, ಅಧಿಕಾರಿಗಳು ಯಂತ್ರಗಳ ಮೂಲಕ ಶೌಚಾಲಯ ಗುಂಡಿ ಸ್ಬಚ್ಛಗೊಳಿಸಲಾಗುತ್ತಿದೆ ಎಂದು ವರದಿ ನೀಡುತ್ತಿದ್ದಾರೆ. ಇದರಿಂದ ಅಂತಹ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯ ಒದಗಿಸುವುದು ಕಷ್ಟವಾಗುತ್ತಿದೆ ಎಂದರು.

ಶಿವಮೊಗ್ಗದಂತಹ ಮಹಾ ನಗರದಲ್ಲಿ ಎಷ್ಟು ಸಕ್ಕಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರೆ ಸತ್ಯಾಂಶ ಹೊರಬರುತ್ತದೆ. ಖಾಸಗಿಯವರ ಬಳಿ ಸಕ್ಕಿಂಗ್ ಯಂತ್ರಗಳೇ ಲಭ್ಯವಿರುವುದಿಲ್ಲ. ಈ ಸತ್ಯ ಅರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.

₹ 85 ಕೋಟಿ ವೆಚ್ಚದ ಕ್ರಿಯಾ ಯೋಜನೆ: ಅಭಿವೃದ್ಧಿ ನಿಗಮ ಸಫಾಯಿ ಕರ್ಮಚಾರಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ₹ 85 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿದೆ. ಸಫಾಯಿ ಕರ್ಮಚಾರಿಗಳು ವಾಸಿಸುವ ಸ್ಥಳಗಳಲ್ಲಿ ಚರಂಡಿ, ಕಾಂಕ್ರೀಟ್ ರಸ್ತೆ, ಸಾಮೂಹಿಕ ಶೌಚಾಲಯ, ಸಮುದಾಯ ಭವನ, ವಸತಿ ಯೋಜನೆ, ಕೌಶಲ ತರಬೇತಿ, ಜಾಗೃತಿ, ಉದ್ಯಮಶೀಲತೆ, ಶಿಕ್ಷಣ ಹತ್ತು ಹಲವು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗುರುತಿಸಲು ಸೂಚನೆ: ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ಮಾತ್ರ ಸಫಾಯಿ ಕರ್ಮಚಾರಿಗಳಲ್ಲ. ಸರ್ಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆ, ಶಾಲೆಗಳ ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿರುವವರು ಸಹ ಸಫಾಯಿ ಕರ್ಮಚಾರಿಗಳು. ನಿಗಮದ ಸೌಲಭ್ಯಗಳು ಅರ್ಹ ಎಲ್ಲರಿಗೂ ದೊರಕುವಂತಾಗಲು ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ನೈರ್ಮಲ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕುರಿತು ಸ್ಥಳೀಯ ಸಂಸ್ಥೆಗಳು ಪರಿಶೀಲನೆ ನಡೆಸಿ ಅವರಿಗೆ ಗುರುತಿನ ಚೀಟಿ ಒದಗಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯವಾಹಿನಿಗೆ ಕರೆತರಲು ಯತ್ನ: ರಾಜ್ಯದಲ್ಲಿ 1.45 ಲಕ್ಷ ಸಫಾಯಿ ಕರ್ಮಚಾರಿಗಳನ್ನು ಗುರುತಿಸಲಾಗಿದೆ. ಇವರ ಸಂಖ್ಯೆ ಸುಮಾರು ಒಟ್ಟು 2.5 ಲಕ್ಷ ಇರಬಹುದು. ಹಾಗಾಗಿ, ಇಂತಹವರನ್ನು ಗುರುತಿಸಿ ಅವರಿಗೆ ನಿಗಮದಿಂದ ಸಿಗುವ ಸೌಲಭ್ಯ ತಲುಪಿಸಬೇಕು ಎಂದು ಸೂಚಿಸಿದರು.

ಅಧಿಕಾರಿಗಳಿಗೆ ಸೂಚನೆ: ನಗರದ ಮಾರ್ನಮಿ ಬೈಲ್ ಪ್ರದೇಶದಲ್ಲಿರುವ ಸಫಾಯಿ ಕರ್ಮಚಾರಿಗಳ ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ  ಅಲ್ಲಿನ ನಿವಾಸಿಗಳು ನಿಕೃಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಕಂಡು ಬಂದಿದೆ. ಒಳಚರಂಡಿ ಸಮಸ್ಯೆಯಿಂದ ಶೌಚಾಲಯದ ನೀರು ಮತ್ತೆ ಮನೆಗಳ ಒಳಗೆ ನುಗ್ಗುತ್ತಿದೆ. ಅದನ್ನು ತಕ್ಷಣ ಸರಿಪಡಿಸಬೇಕು. ಒಳಚರಂಡಿ ಸಮಸ್ಯೆ ನಿವಾರಣೆಗೆ ನಿಗಮ ನೆರವು ನೀಡಲಾಗುವುದು. ಇಲ್ಲಿರುವ ಶಾಲೆಯ ಬಳಿಯ ಚರಂಡಿಗೆ ರಸ್ತೆ ಸಾರಿಗೆ ಸಂಸ್ಥೆ ಕೊಳಚೆ ನೀರು ಬಿಡುತ್ತಿರುವ ಕಾರಣ, ಮಕ್ಕಳು ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಕಲಿಯುವಂತಾಗಿದೆ. ಎರಡು ತಿಂಗಳ ಒಳಗಾಗಿ ಅದನ್ನು ಸರಿಪಡಿಸಿ ಒಳಚರಂಡಿಗೆ ನೇರವಾಗಿ ಕೊಳಚೆ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ವಿವಿಧ ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.