ADVERTISEMENT

ಸಮಸ್ಯೆ ಅರಿವು ನಮಗಿದೆ; ಅಧಿಕಾರಿಗಳಿಗೆ ಗೊತ್ತೇ ಇಲ್ಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 6:10 IST
Last Updated 2 ಜೂನ್ 2011, 6:10 IST

ಭದ್ರಾವತಿ: `ಚುನಾಯಿತ ಪ್ರತಿನಿಧಿಗಳಿಗೆ ಜನರ ಸಮಸ್ಯೆಗಳ ಕುರಿತಂತೆ ಅರಿವು ಇರುತ್ತದೆ. ಆದರೆ, ಅಧಿಕಾರಿಗಳಿಗೆ ಇದರ ಸುದ್ದಿಯೇ ಇರುವುದಿಲ್ಲ ಎಂದರೆ ಹೇಗೆ~ ಎಂದು ಜಿ.ಪಂ ಅಧ್ಯಕ್ಷೆ ಶುಭಾಕೃಷ್ಣಮೂರ್ತಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಲ್ಲಿನ ತಾ.ಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಲೆಕ್ಕ ಶೀರ್ಷಿಕೆವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಳ್ಳವರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಇಲ್ಲದ ಮಂದಿ ಸರ್ಕಾರಿ ಆಸ್ಪತ್ರೆ ಬಯಸುತ್ತಾರೆ. ಅವರ ಸಮಸ್ಯೆ ಹೇಳಬೇಕಾದ್ದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ. ಇದರ ಅರಿವು ನಿಮಗಿಲ್ಲ ಎಂದರೆ ಹೇಗೆ? ಎಂದು ತಾಲ್ಲೂಕು ವೈದ್ಯಾಧಿಕಾರಿ ಕಡೆ ಗಮನಹರಿಸಿದರು.

ತಾಲ್ಲೂಕಿನ ಅರಬಿಳಚಿ ಮತ್ತು ಬಿಆರ್‌ಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ನಡೆದಿದೆ. ಮೈದೊಳಲು ಗ್ರಾಮದ ಕೇಂದ್ರದ ಕಟ್ಟಡವಾಗಿದೆ. ಮೇಲ್ಛಾವಣಿ ಇಲ್ಲದ ಕಾರಣ ಕಚೇರಿ ಉಪಯೋಗಕ್ಕೆ ಬರುತ್ತಿಲ್ಲ ಇದರ ಕುರಿತು ಕ್ರಮ ತೆಗೆದುಕೊಳ್ಳಿ ಎಂಬ ಮಾತು ಸಭೆಯಲ್ಲಿ ವ್ಯಕ್ತವಾಯಿತು.

105 ಶಾಲೆಗಳಿಗೆ ಕಾಂಪೌಂಡ್: ತಾಲ್ಲೂಕಿನ 105 ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣ ಆಗಬೇಕಿದೆ. ಅದರಲ್ಲಿ ಇಲ್ಲಿಯ ತನಕ 46 ಕಾಮಗಾರಿ ಪೂರ್ಣವಾಗಿದೆ. ಉಳಿದ 59ರಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ತಿಳಿಸಿದರು.

ಕೆಲವು ಶಾಲೆಗಳಲ್ಲಿ ಅಕ್ಷರದಾಸೋಹ ಅಡಿಗೆ ಕೆಲಸಗಾರರಿಗೆ ಶಿಕ್ಷಕರು ಕಿರುಕುಳ ನೀಡುತ್ತಾರೆ ಎಂಬ ಮಾತಿದೆ ಇದನ್ನು ಗಮನಿಸಿ ಕ್ರಮ ತೆಗೆದುಕೊಳ್ಳಿ ಎಂದು ಜಿ.ಪಂ ಉಪಾಧ್ಯಕ್ಷ ಗಂಗಾಧರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

11 ಕೆರೆ ಎಲ್ಲಿ: ತಾಲ್ಲೂಕಿನ 11 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರುತ್ತದೆ. ಇದರ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಆದರೆ, ಆ ಕೆರೆಗಳು ಯಾವುದು ಎಂದರೆ ಪಟ್ಟಿ ಮಾತ್ರ ಇಲ್ಲ. ಎಂಬ ವಿಚಾರ ಸಭೆಯಲ್ಲಿ ಬಹಳ ಹೊತ್ತು ಚರ್ಚೆಯಾಯಿತು. ಈ ಕುರಿತು ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಜಿ.ಪಂ. ಸದಸ್ಯರಾದ ಹೇಮ ಪಾವನಿ, ಉಷಾ, ಸುಜಾತಾ, ಎಚ್.ಎಲ್. ಷಡಾಕ್ಷರಿ, ತಾ.ಪಂ ಅಧ್ಯಕ್ಷ ಹಾಲಪ್ಪ, ಉಪಾಧ್ಯಕ್ಷ ಶಾಂತಕುಮಾರ್, ಅಧಿಕಾರಿಗಳಾದ ಡಾ.ಚಂದ್ರಶೇಖರ್, ಶ್ರೀಕಂಠ ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.