ADVERTISEMENT

ಸರಳ ವಿವಾಹ ಸಮಾಜಕ್ಕೆ ಆದರ್ಶ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2013, 6:29 IST
Last Updated 4 ಫೆಬ್ರುವರಿ 2013, 6:29 IST
ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಭಾನುವಾರ ಪ್ರೊ.ಎಂ. ನಂಜುಂಡಸ್ವಾಮಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ಮಂತ್ರಮಾಂಗಲ್ಯದ ಮೂಲಕ ದಾಂಪತ್ಯ ಪ್ರವೇಶಿಸಿದರು. ಶಿವಣ್ಣ, ಕಡಿದಾಳ್ ಶಾಮಣ್ಣ, ಎಚ್.ಆರ್. ಬಸವರಾಜಪ್ಪ, ಕೋಡಿಹಳ್ಳಿ ಚಂದ್ರಶೇಖರ್, ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಚಿತ್ರದಲ್ಲಿದ್ದಾರೆ.
ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಭಾನುವಾರ ಪ್ರೊ.ಎಂ. ನಂಜುಂಡಸ್ವಾಮಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ಮಂತ್ರಮಾಂಗಲ್ಯದ ಮೂಲಕ ದಾಂಪತ್ಯ ಪ್ರವೇಶಿಸಿದರು. ಶಿವಣ್ಣ, ಕಡಿದಾಳ್ ಶಾಮಣ್ಣ, ಎಚ್.ಆರ್. ಬಸವರಾಜಪ್ಪ, ಕೋಡಿಹಳ್ಳಿ ಚಂದ್ರಶೇಖರ್, ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಚಿತ್ರದಲ್ಲಿದ್ದಾರೆ.   

ಶಿವಮೊಗ್ಗ: ಸರಳ ವಿವಾಹ ಸಮಾಜಕ್ಕೆ ಆದರ್ಶವಾಗಿದೆ. ವಿವಾಹ ಜೀವನದ ಒಂದು ಮುಖ್ಯ ಘಟ್ಟ. ವಿವಾಹವನ್ನು ಸರಳವಾಗಿ ಆಚರಿಸಿ, ಮಾದರಿ ಜೀವನ ನಡೆಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದ ಬೆಕ್ಕಿನ ಕಲ್ಮಠದಲ್ಲಿ ಭಾನುವಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಮಂತ್ರ ಮಾಂಗಲ್ಯದ ಮೂಲಕ ಸರಳ ವಿವಾಹ ಆಗುವುದರ ಜತೆಗೆ, ಆದರ್ಶಯುತ ಜೀವನ ನಡೆಸುವುದು ಸಹ ಮುಖ್ಯ. ಆದ್ದರಿಂದ, ಆದರ್ಶ ಜೀವನ ನಡೆಸಿ, ಎಂದು ನೂತನ ದಂಪತಿಗಳಿಗೆ ಸಲಹೆ ನೀಡಿದರು.

ಮಂತ್ರಮಾಂಗಲ್ಯ ಧಾರಣೆ ಮಾಡಿಸಿದ ರೈತಮುಖಂಡ ಕಡಿದಾಳ್ ಶಾಮಣ್ಣ ಮಾತನಾಡಿ, ಮಂತ್ರ ಮಾಂಗಲ್ಯ ಸರಳವಾಗಿ ಆಗಬೇಕು. ಸರಳ ವಿವಾಹದ ಬಗ್ಗೆ ಅನೇಕ ದಾರ್ಶನಿಕರು ಚಿಂತನೆ ನಡೆಸಿದ್ದರು. ಇದನ್ನೆ ಕುವೆಂಪು ಅವರು ಅಧ್ಯಯನ ನಡೆಸಿ, ಮಂತ್ರ ಮಾಂಗಲ್ಯದ ರೂಪದಲ್ಲಿ ಹೇಳಿದರು ಎಂದು ವಿವರಿಸಿದರು.

ಮಂತ್ರ ಮಾಂಗಲ್ಯ ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಮಂಡ್ಯದ ಹಳ್ಳಿ ಒಂದರಲ್ಲಿ ಒಂದೇ ಮಂಟಪದಲ್ಲಿ, ಒಂದೇ ದಿನ ಹಳ್ಳಿಯ ಹಲವು ಕುಟುಂಬಗಳ ವಿವಾಹಗಳು  ಮಂತ್ರ ಮಾಂಗಲ್ಯ ರೀತಿಯಲ್ಲಿ ನಡೆದಿವೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮದುವೆ ಸರಳವಾಗಿ ಆಡಂಭರ ಇಲ್ಲದೆ ನಡೆಯಬೇಕು. ಸರಳ ಜೀವನ ಎಲ್ಲರಿಗೂ ಆದರ್ಶಪ್ರಾಯ. ಸರಳ ಮಂತ್ರ ಮಾಂಗಲ್ಯದ ಮೂಲಕ ಸರಳವಾದ ಜೀವನಕ್ಕೆ ಪ್ರವೇಶಿಸುವುದು ಉತ್ತಮ. ಈಚೆಗೆ ಮಂತ್ರಮಾಂಗಲ್ಯದ ಬಗ್ಗೆ ಜಾಗೃತಿ ಮೂಡುತ್ತಿದ್ದು, ವಚನ ಮಾಂಗಲ್ಯ ಎಂಬ ಸರಳ ವಿಧಾನ ಒಂದು ಬೆಳಕಿಗೆ ಬರುತ್ತಿದೆ ಎಂದರು.

ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಸಂಸಾರದ ಮೊದಲ ಹೆಜ್ಜೆ ಮದುವೆ. ಆದರೆ, ಮದುವೆಯೇ ಸಂಸಾರವನ್ನು ಹೊರೆ ಆಗಿಸಬಾರದು. ಆದ್ದರಿಂದ ಸರಳ ವಿವಾಹಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ನೂತನವಾಗಿ ಐದು ಜೋಡಿಗಳು ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಪ್ರವೇಶಿಸಿದರು.

ರೈತಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಪ್ಪ, ಎಸ್.ಬಿ. ವಸಂತಕುಮಾರ್, ಹಿಟ್ಟೂರು ರಾಜು, ಜಿ.ಎನ್. ರವಿಕುಮಾರ್, ಎನ್.ಎಸ್. ಮಲ್ಲಿಕಾರ್ಜುನ, ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.