ADVERTISEMENT

ಸರ್ಕಾರದ ಸಾಧನೆ ಶೂನ್ಯ: ಬಿಎಸ್ ವೈ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ರಿಪ್ಪನ್‌ಪೇಟೆ: ಆಡಳಿತ ನಡೆಸಿದ ಕೇವಲ ಒಂದು ವರ್ಷದ ಅವಧಿಯಲ್ಲಿ ಸರ್ಕಾರಿ ಖಜಾನೆ ಖಾಲಿ ಮಾಡಿರುವುದು ಕಾಂಗ್ರೆಸ್‌ನ ಸಾಧನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದರು.

ಅಮೃತ ಗ್ರಾಮದಲ್ಲಿ ಶುಕ್ರವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ. ರೈತರ ಬೆಳೆಗೆ ಬೆಂಬಲ ಬೆಲೆ ನೀಡುವ ವಾಗ್ದಾನ ಮಾಡಿ, ಹಣ ಇಲ್ಲದೆ ಖರೀದಿ ಕೇಂದ್ರದಲ್ಲಿ ಸ್ಥಗಿತಗೊಳಿಸಿ ರೈತರಿಂದ ಸರ್ಕಾರ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದೆ ಸರ್ಕಾರ ಮುಂದುವರಿದರೆ ರೈತ ಕೃಷಿ ಚಟುವಟಿಕೆ ನಿಲ್ಲಿಸಬೇಕಾಗುತ್ತದೆ ಎಂದರು.

‘ನನ್ನ ಅವಧಿಯಲ್ಲಿ ಹೆಚ್ಚುವರಿ ತೆರಿಗೆ ಹಾಕದೆ ₨36 ಸಾವಿರ ಕೋಟಿ ಇದ್ದ ಬಜೆಟ್‌ ₨88 ಸಾವಿರ ಕೋಟಿಗೆ ಕೊಂಡೊಯ್ದಿದ್ದು, ಸೋರಿಕೆ ಹಣ ತಡೆಗಟ್ಟಿ ಬಜೆಟ್‌ ಹಣ ಸರಿದೂಗಿಸಿ, ರೈತರಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದ್ದೆ’ ಎಂದು ತಿಳಿಸಿದರು.

ಮಾಜಿ ಸಚಿವ ಎಚ್‌. ಹಾಲಪ್ಪ ಮಾತನಾಡಿ, ಬಿಜೆಪಿಯ ಆಡಳಿತ ಅವಧಿಯಲ್ಲಿ ರಾಜ್ಯದ ಜನತೆ ಸಮಾನತೆಯನ್ನು ಕಂಡಿದ್ದರು. ಎಲ್ಲಾ ವರ್ಗದ ಜನರು ತಮ್ಮ ಏಳಿಗೆ ಕಂಡರು. ದೇಶದ ಜನತೆ ಬದಲಾವಣೆ ಬಯಸುತ್ತಿದ್ದಾರೆ.  ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಸಹಕಾರ ಪಡೆಯಲು ಸಮರ್ಥ ನಾಯಕನ ಅವಶ್ಯವಿರುವುದರಿಂದ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಗರ್‌ಹುಕುಂ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿ ರಾಜಕಾರಣ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಗೆಲುವು ಅಗತ್ಯವಾಗಿದೆ ಎಂದರು.

ಮುಖಂಡರಾದ ಆರ್‌.ಕೆ.ಸಿದ್ಧರಾಮಣ್ಣ,  ಶುಭಾ ಕೃಷ್ಣಮೂರ್ತಿ, ನಾಗರತ್ನಾ ದೇವರಾಜ, ಎನ್‌.ಆರ್.ದೇವಾನಂದ, ಉಮೇಶ ಕಂಚುಗಾರ್, ವೆಂಕಟೇಶ, ಆರ್‌.ಟಿ.ಗೋಪಾಲ, ಬೆಳ್ಳೂರು ತಿಮ್ಮಪ್ಪ, ತ.ಮ. ನರಸಿಂಹ, ಆರ್‌. ರಾಘವೇಂದ್ರ, ಎಂ.ಬಿ. ಮಂಜುನಾಥ, ಸುರೇಶ ಸಿಂಗ್‌, ಬಂಡಿ ದಿನೇಶ, ಟಿ.ಡಿ.ಸೋಮಶೇಖರ, ಡಿ. ಮಂಜಪ್ಪ ಮತ್ತು ವಾಸಪ್ಪಗೌಡ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.