ADVERTISEMENT

ಸರ್ಕಾರ ಉರುಳಿಸುವ ಷಡ್ಯಂತ್ರ

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಗರಂ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2013, 8:38 IST
Last Updated 1 ಫೆಬ್ರುವರಿ 2013, 8:38 IST
ಸಾಗರದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಉದ್ಘಾಟಿಸಿದರು.
ಸಾಗರದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಉದ್ಘಾಟಿಸಿದರು.   

ಸಾಗರ: ಬಿಜೆಪಿಯಿಂದ ಆಯ್ಕೆಯಾಗಿ ಈಗ ರಾಜ್ಯದ ಬಿಜೆಪಿ ಸರ್ಕಾರವನ್ನೇ ಉರುಳಿಸಲು ಷಡ್ಯಂತ್ರ ನಡೆಸುತ್ತಿರುವ ವ್ಯಕ್ತಿಗಳನ್ನು ರಾಜ್ಯದ ಜನರು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯವು ಬರಗಾಲ ಸೇರಿದಂತೆ ಅನೇಕ ಗಂಭೀರ ಸಮಸ್ಯೆ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಬಜೆಟ್ ಮಂಡಿಸದಂತೆ ಹುನ್ನಾರ ನಡೆಸುತ್ತಿರುವುದು ಮುಖ್ಯಮಂತ್ರಿ ಆಗಿದ್ದಂತಹ ವ್ಯಕ್ತಿಗೆ ಶೋಭೆ ತರುವ ನಡವಳಿಕೆ ಅಲ್ಲ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾವು ಮುಖ್ಯಮಂತ್ರಿ ಆಗಿರುವವರೆಗೂ ಬಿಜೆಪಿಯಲ್ಲಿ ಯಾವುದೇ ಲೋಪವನ್ನು ಕಂಡಿರಲಿಲ್ಲ. ಆ ಸ್ಥಾನದಿಂದ ಇಳಿಯುತ್ತಿದ್ದಂತೆ ಪಕ್ಷದಲ್ಲಿ ಹುಳುಕು ಹುಡುಕಲು ಆರಂಭಿಸಿದ್ದಾರೆ. ತಮ್ಮ ಬ್ಯಾಟಿಂಗ್ ಮುಗಿದ ನಂತರ ಚೆಂಡು ಮತ್ತು ಬ್ಯಾಟನ್ನು ಬೇರೆಯವರಿಗೆ ಕೊಡದೇ ಮನೆಗೆ ಕೊಂಡೊಯ್ಯುತ್ತೇನೆ ಎನ್ನಲು ರಾಜಕಾರಣ ಮಕ್ಕಳ ಆಟವೇ ಎಂದು ಪ್ರಶ್ನಿಸಿದರು.

ಕೆಜೆಪಿ ಮುಖಂಡರು ಬಿಜೆಪಿಯವರಿಗೆ ಹಲವು ರೀತಿಯ ಆಮಿಷ ಒಡ್ಡುವ ಮೂಲಕ ತಮ್ಮ ಪಕ್ಷಕ್ಕೆ ಸೆಳೆಯುವ ಕುತಂತ್ರ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಮುಖಂಡರು ಮನೆಯ ಮಕ್ಕಳೇ ಹೊರತು ಅಳಿಯ ಸಂತಾನವಲ್ಲ ಎಂದು ಹೇಳಿದರು.

ಈ ಹಿಂದೆ ಬಿಜೆಪಿಯಲ್ಲಿದ್ದು, ಅಧಿಕಾರ ಅನುಭವಿಸಿದ ಸ್ಥಳೀಯ ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಮೇಲೆ ಕಣ್ಣಿಟ್ಟು ಕೆಜೆಪಿ ಸೇರಿದ್ದಾರೆ. ಆದರೆ, ಯಡಿಯೂರಪ್ಪ ಅವರು ಇಲ್ಲಿ ಹೊರಗಡೆಯಿಂದ ಬರುವ ವ್ಯಕ್ತಿಯೊಬ್ಬರಿಗೆ ಟಿಕೆಟ್ ಕಾಯ್ದಿರಿಸಿದ್ದು, ಸ್ಥಳೀಯರಿಗೆ ನಿರಾಸೆ ಕಾದಿದೆ ಎಂದರು.

ವಿಧಾನಸಭಾ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೆ ಆಸ್ತಿ ಆಗಿದ್ದಾರೆ. ಹಲವು ಅಗ್ನಿಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿದ ಬಿಜೆಪಿಗೆ ಈಗಿನ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇನಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಶರಾವತಿ ಸಿ. ರಾವ್, ಎಸ್.ವಿ. ಕೃಷ್ಣಮೂರ್ತಿ, ಸಂತೋಷ್ ಶೇಟ್, ಡಿ.ಎಸ್. ಸುಧೀಂದ್ರ, ಕಸ್ತೂರಿ ನಾಗರಾಜ್, ಸತೀಶ್ ಬಾಬು, ಸುಮನಾ ಗೋಮ್ಸ, ಬೆಳ್ಳೂರು ತಿಮ್ಮಪ್ಪ, ವಾಲೆಮನೆ ಶಿವಕುಮಾರ, ಚಂದ್ರಶೇಖರ್ ಅದರಂತೆ, ಜಗದೀಶ್ ಒಡೆಯರ್, ಯು.ಎಚ್. ರಾಮಪ್ಪ,ಬಿ. ತ್ಯಾಗಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.