ADVERTISEMENT

ಸಾರ್ಥಕವಾದ ಕೆಲಸ ಮಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:35 IST
Last Updated 28 ಅಕ್ಟೋಬರ್ 2011, 9:35 IST

ಶಿವಮೊಗ್ಗ: ಜೀವನದಲ್ಲಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ಆದರೆ, ಮಾಡಿದ ತಪ್ಪನ್ನು ತಿದ್ದಿಕೊಂಡು ಬಾಳುವವನು ಮಾತ್ರ ಸಂಸ್ಕಾರವಂತನಾಗುತ್ತಾನೆ ಎಂದು ಶರಾವತಿ ನಗರ ಚರ್ಚ್‌ನ ವಂದನೀಯ ಗುರು ಫಾದರ್ ಮಾರ್ಕ್ ಪ್ಯಾಟ್ರಿಕ್ ಡಿಸಿಲ್ವ ಹೇಳಿದರು.

ನಗರದ ಜಿಲ್ಲಾ ಕಾರಾಗೃಹ ಆವರಣದಲ್ಲಿ ಗುರುವಾರ ಕ್ಯಾಥೋಲಿಕ್ ಅಸೋಸಿಯೇಷನ್ ಶಿವಮೊಗ್ಗ ಧರ್ಮಕ್ಷೇತ್ರ ವತಿಯಿಂದ ಜಿಲ್ಲಾ ಕಾರಾಗೃಹ ವಾಸಿಗಳಿಗೆ ಹಮ್ಮಿಕೊಂಡಿದ್ದ ಸೌಹಾರ್ದ ದೀಪಾವಳಿ ಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೈದಿಗಳೆಂದ ಮಾತ್ರಕ್ಕೆ ಸಮಾಜ ಅವರನ್ನು ನಿಕೃಷ್ಟ ಭಾವನೆಯಿಂದ ಕಾಣುವುದು ಸಲ್ಲ. ಜೀವನದಲ್ಲಿ ಪ್ರತಿಯೊಬ್ಬರು ತಪ್ಪನ್ನು ಎಸಗುತ್ತಾರೆ. ಆದರೆ, ಆದಂತಹ ತಪ್ಪನ್ನು ತಿದ್ದಿ ಬಾಳುವ ಅವಕಾಶವನ್ನು ಪ್ರತಿಯೊಬ್ಬ ಕೈದಿಗೂ ನೀಡಿದಾಗ ಅವರು ಸಹ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.

ಜೀವನದಲ್ಲಿ ಕೇವಲ ಇನ್ನೊಬ್ಬರನ್ನು ದೂಷಿಸುತ್ತಾ, ನಿಂದಿಸುತ್ತಾ ಕಾಲ ಕಳೆಯುವ ಬದಲು  ಪ್ರತಿಯೊಬ್ಬರು  ಏನಾದರೂ ಸಾರ್ಥಕವಾಗುವಂತಹ ಕಾರ್ಯ ಮಾಡಬೇಕು ಆಗ ಮಾತ್ರ ಮನುಷ್ಯನ ಹುಟ್ಟು ಸಾರ್ಥಕವಾಗುತ್ತದೆ ಎಂದ ಅವರು, ಆದಷ್ಟು ಬೇಗ ನೀವು ಪರಿವರ್ತಿತರಾಗಿ ಸ್ವಚ್ಚಂದ ಜೀವನ ನಡೆಸುವಂತಾಗಲಿ ಈ  ಬೆಳಕಿನ ಹಬ್ಬ ನಿಮ್ಮ ಜೀವನದಲ್ಲಿ ಉಜ್ವಲ ಬೆಳಕು ಮೂಡಿಸಲಿ ಎಂದು ಖೈದಿಗಳಿಗೆ ಹಾರೈಸಿದರು.

ಜಿಲ್ಲಾ ಕಾರಾಗೃಹ ಆಧೀಕ್ಷಕ ಶೇಷುಮೂರ್ತಿ, ಮಲ್ಲಿಕಾರ್ಜುನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವೈ.ಎಚ್. ನಾಗರಾಜ್, ಪತ್ರಕರ್ತ ಕೆ.ವಿ. ಸತೀಶ್‌ಗೌಡ, ಭಾರತೀಯ ವೈಧ್ಯಕೀಯ ಸಂಘ ಅಧ್ಯಕ್ಷ ಹರೀಶ್ ದೇಲೆಂತ ಬೆಟ್ಟು, ಸಿದ್ಧಾರ್ಥ ಅಂದರ ಕೇಂದ್ರ ಅಧ್ಯಕ್ಷ ಶಿವಬಸಪ್ಪ, ಅಂಜುಮನ್ ಸಂಸ್ಥೆ ಅಧ್ಯಕ್ಷ ಫೀರ್ ಷರೀಫ್, ಕ್ಯಾಥೋಲಿಕ್ ಅಸೋಷಿಯೇಷನ್ ಅಧ್ಯಕ್ಷ ಅಂತೋಣೀ ವಿಲ್ಸನ್ ಮತ್ತಿತರರು ಉಪಸ್ಥಿತರಿದ್ದರು. ಜೆ. ಮೈಕಲ್ ಸ್ವಾಗತಿಸಿದರು. ಅಲೆಕ್ಸಾಂಡರ್ ಅಲ್ವಾರಿಸ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.