ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ಥಾನ ಕಾಯ್ದುಕೊಂಡು, ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ದೇಶ-ವಿದೇಶಗಳಲ್ಲಿ ಹರಡಿದ ಮಹನೀಯರ ನೆಲೆಬೀಡಾಗಿ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮ ನಿಲ್ಲುತ್ತದೆ.
ಗ್ರಾಮ ಪಂಚಾಯ್ತಿ ಕ್ಷೇತ್ರವಾಗಿದ್ದು, ಸುಮಾರು 300 ಮನೆ, ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.
ಸೊರಬದಿಂದ ಕೆಳದಿ-ಸಾಗರ ರಸ್ತೆಯಲ್ಲಿ 10 ಕಿ.ಮೀ. ದೂರವಿದೆ. ಅನೇಕ ಕುಟುಂಬಗಳು ಉತ್ತರ ಕರ್ನಾಟಕದಿಂದ ವಲಸೆ ಬಂದಿದ್ದು, ಗ್ರಾಮಕ್ಕೆ ಹೆಗಡೆ ಮನೆತನದವರು ಹೊಸದಾಗಿ ಬಾಳೆಸಸಿಯನ್ನು ಪರಿಚಯಿಸಿದ್ದಾರೆ ಎನ್ನಲಾಗಿದೆ.
ಬತ್ತ, ಅಡಿಕೆ, ತೆಂಗು, ಕಬ್ಬು ಪ್ರಮುಖ ಬೆಳೆಯಾಗಿದ್ದು, ಕಾಫಿ , ಮೆಣಸು ಉಪ ಬೆಳೆಗಳು. ಒಂದು ಮಾದರಿ ಗ್ರಾಮಕ್ಕೆ ಇರಬೇಕಾದ ಶಾಲೆ, ಕಚೇರಿ, ಸಂಪರ್ಕ ವ್ಯವಸ್ಥೆ, ಬ್ಯಾಂಕ್ ಎಲ್ಲಾ ಇವೆ.
ಐತಿಹಾಸಿಕ ಕುರುಹು: ಸುಮಾರು 200 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡಿರುವ ಗೋಪಾಲಕೃಷ್ಣ, ಗ್ರಾಮದ ಎರಡು ತುದಿಗಳಲ್ಲಿರುವ ಭೂತಪ್ಪನ ವಿಗ್ರಹಗಳು, ಮಾಸ್ತೆಮ್ಮನ ಪ್ರಾಚೀನ ಶಿಲ್ಪ ಇಲ್ಲಿವೆ.
ಧಾರ್ಮಿಕ ಸೌಹಾರ್ದ: ಗ್ರಾಮದಲ್ಲಿ ಹಿಂದೆ ವಾಸವಾಗಿದ್ದ ಮಂತ್ರವಾದಿ ಪಕೀರ್‌ಸಾಬ್ ಜನತೆಯ ಪ್ರೀತಿ ಸಂಪಾದಿಸಿದ್ದು, ಅಲಾವಿ ಹಬ್ಬದಂದು ಸಕ್ಕರೆ/ಬೆಲ್ಲ ಸಮರ್ಪಿಸುವ ವಿಧಿಯಲ್ಲಿ ಎಲ್ಲಾ ಧರ್ಮೀಯರೂ ಪಾಲ್ಗೊಳ್ಳುತ್ತಾರೆ.
ಮಾದರಿ ಆಗಿರುವ ಪರಿಶಿಷ್ಟರ ಕೇರಿ: ಸುಮಾರು 50-60 ಮನೆಗಳು, 200ಕ್ಕೂ ಹೆಚ್ಚು ವಾಸಿಗಳು ಇರುವ ದಲಿತ ಕೇರಿ ತನ್ನ ಅಚ್ಚುಕಟ್ಟುತನ, ಶಿಸ್ತುಬದ್ಧ ಜೀವನದಿಂದ ಮಾದರಿ ಎನಿಸಿದೆ. ನಿವಾಸಿಗಳೇ ಸ್ವತಃ ಎರಡು ಶನೇಶ್ವರ ದೇಗುಲ ನಿರ್ಮಿಸಿದ್ದು, ನಿರಂತರ ಕಥಾಪಠಣ, ಭಜನೆ, ವಿಶೇಷ ಪೂಜೆ ನಡೆಯುತ್ತದೆ.
`ಮದ್ಯಪಾನ ಹಾಗೂ ಮಾರಾಟ ಇಲ್ಲಿ ನಿಷಿದ್ಧ~ ಎನ್ನುತ್ತಾರೆ ಕೂಲಿ ಕಾರ್ಮಿಕ ಬಂಗಾರಪ್ಪ.
`ಆಧುನಿಕ ಜೀವನಕ್ಕೆ ಬೇಕಾದ ಟಿವಿ, ದಿನಪತ್ರಿಕೆ, ಮೊಬೈಲ್ ಎಲ್ಲವೂ ಇವೆ. ಹಿರಿಯರು ಶ್ರಮಜೀವಿಗಳಾದರೆ, ಕಿರಿಯರು ವಿದ್ಯಾವಂತರಾಗುತ್ತಿದ್ದಾರೆ~ ಎನ್ನುವುದು ಅಡಿಕೆ ಗೊನೆ ಕೀಳುವ ಕಾಯಕದ ನಾಗರಾಜ ಅಭಿಪ್ರಾಯ.
ಒಂದು ಕೇರಿಯಿಂದ ಮತ್ತೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಬೇಕು ಎನ್ನುವುದು ನಿವಾಸಿಗಳ ಬೇಡಿಕೆ.
ಸಾಧಕರ ಸಾಲು-ಸಾಲು: ಸಮೀಪದ ಮೂಡುಗೋಡಿನ ಹಿರಣ್ಯಪ್ಪ ಗುಡಿಗಾರ್ ರಾಮಚಂದ್ರಾಪುರ ಮಠದಲ್ಲಿರುವ ಪ್ರಸಿದ್ಧ ದಂತ ಸಿಂಹಾಸನದ ಕರ್ತೃ. ಹೆಗಡೆ ಪುಟ್ಟಪ್ಪ ಹಾಗೂ ಸಹೋದರರು ನಿರ್ಮಾಣದ ಉಸ್ತುವಾರಿ ಹೊತ್ತಿದ್ದರು.
ಗಮಕ ಸಾಹಿತಿ, ವಾಚಕ, ರಾಜ್ಯ ಪ್ರಶಸ್ತಿ ಪುರಸ್ಕೃತ, ಆಕಾಶವಾಣಿ ಕಲಾವಿದ ಎಚ್. ಸೀತಾರಾಮರಾವ್ ಅವರು ನೇಪಾಳ, ಅಮೆರಿಕಾವರೆಗೆ ಕಾರ್ಯಕ್ರಮ ನಡೆಸಿಕೊಟ್ಟಿದ್ದು, `ರಾಮಾಯಣ ದರ್ಶನಂ~, `ಕುಮಾರವ್ಯಾಸ ಭಾರತ~ದಿಂದ ಮೊದಲ್ಗೊಂಡು `ಮಂಕುತಿಮ್ಮನ ಕಗ್ಗ~ದ ವಾಚನದ ಮೂಲಕ ಮನೆ ಮಾತಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಸಾಂಸ್ಕೃತಿಕ ವಾತಾವರಣ ಉಂಟಾಗಲು ಕಾರಣರಾಗಿದ್ದಾರೆ.
ಆಯಾ ಕವಿಗಳ ವಾಸಸ್ಥಳಗಳಿಗೆ ತೆರಳಿ ಅವರ ಕಾವ್ಯ ವಾಚನ ಮಾಡಿದ್ದಾರೆ. `ಸ್ವಾಗತ ಪ್ರಾರ್ಥನಾ ಮಾಲೆ~ ಪುಸ್ತಕ ಪ್ರಕಟಿಸಿದ್ದಾರೆ. ಗಮಕ, ಕನ್ನಡ ಸಾಹಿತ್ಯ ಪರಿಷತ್‌ನ ವಿವಿಧ ಹುದ್ದೆಗಳ ಅಲಂಕಾರ, ಪ್ರಶಸ್ತಿ, ದತ್ತಿದಾನ- ಹೀಗೆ ಇವರ ಸೇವಾ ಕ್ಷೇತ್ರ ವಿಸ್ತೃತವಾಗಿದೆ. ಇಂದಿನ ಪೀಳಿಗೆಯ ಡಾ.ವಿ. ಅಶೋಕ್-ವಿದ್ಯಾ ದಂಪತಿ, ನಂದಿನಿ ಸತೀಶ್ ವಿವಿಧೆಡೆ ಗಮಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಜಿಲ್ಲೆಯಲ್ಲಿಯೇ ಉತ್ತಮ ಎಂಬ ಹೆಗ್ಗಳಿಕೆಯ ವ್ಯವಸಾಯ ಸೇವಾ ಸಹಕಾರ ಸಂಘವನ್ನು ಗೋಪಾಲಕೃಷ್ಣ ಕೋ-ಆಪರೇಟಿವ್ ಸೊಸೈಟಿ ಹೆಸರಿನಲ್ಲಿ 1948- 49ರಲ್ಲಿ ಗ್ರಾಮದ ಮಹಾದಾನಿ ನಾಡಿಗ್ ಪುಟ್ಟಪ್ಪ ಸ್ವಂತ ಜಾಗ ನೀಡಿ ಸಂಸ್ಥಾಪಿಸಿ, 18 ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸಹಕಾರ ಮಂಡಳಿ ನಿರ್ದೇಶಕ, ಉತ್ತಮ ಗುತ್ತಿಗೆದಾರ ಎಂಬ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪುಟ್ಟಪ್ಪ ಹೆಗಡೆ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಆರ್‌ಎಸ್‌ಎಸ್ ಪ್ರಮುಖ ದತ್ತಾತ್ರೇಯ ಹೊಸಬಾಳೆ ಇದೇ ಊರಿನವರು.
ಸಮೀಪದ ನಿಸರಾಣಿಯಲ್ಲಿರುವ ವಿದ್ಯಾಭಿವೃದ್ಧಿ ಸಂಘದ ಸಂಸ್ಥಾಪಕ ಮುಖ್ಯ ಶಿಕ್ಷಕ, ಕಾರ್ಯದರ್ಶಿ ಎಚ್.ಎ. ರಾಘವೇಂದ್ರರಾವ್, ಸಹಕಾರ ಸಂಘಗಳ ಗೌರವ ಪಂಚಾಯ್ತಿದಾರರಾಗಿ, ರಾಮಣ್ಣ ನಾಡಿಗ್ ದಸ್ತಾವೇಜು ಬರಹಗಾರರಾಗಿ ಹೆಸರು ಗಳಿಸಿದ್ದಾರೆ. ಬಂದೂಕು ತಯಾರಿಕೆಯ ಬಡಗಿ ಮನ್ನಪ್ಪ, ನಾಟಕ ನಿರ್ದೇಶಕ ಸೂರನ ಮನ್ನಪ್ಪ, ಲಾವಣಿಕಾರ ಡೊಳ್ಳಿನ ಮಣ್ಣೆಪ್ಪ, ಜನ, ಜಾನುವಾರುಗಳ ನಾಟಿ ವೈದ್ಯರಾದ ಕನ್ನೇರ ಹೊಸಮನೆ ಕನ್ನಪ್ಪ, ಪ್ರದ್ಯುಮ್ನಸ್ವಾಮಿ ಇವರ ಸೇವೆ ನಾಡಿನ ಗಡಿ ದಾಟಿದೆ.
ಅಂದಿನ ರಾಮಪ್ಪ ಹೆಗಡೆ, ಸುಬ್ಬರಾಯ (ಅನ್ನಾವರ ಅಡಿಕೆ ಕಂ. ಸ್ಥಾಪಕ), ನಾಡಿಗ್ ಸೀತಾರಾಮಪ್ಪ ಸ್ವಾತಂತ್ರ್ಯಪೂರ್ವ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ದಿ. ನಾಡಿಗ್ ಗಿರಿಜಾಬಾಯಿ ಕುಸುರಿ, ಹತ್ತಿ ಹಾರ, ಹೂಬತ್ತಿಗಳ ತಯಾರಿಕೆ, ಸಂಪ್ರದಾಯದ ಹಾಡುಗಳ ಗಣಿಯಾಗಿದ್ದರು.
ಇಂದಿನ ಮಂಜುನಾಥ್ ಹೆಗಡೆ ಪ್ರಕೃತಿ ವಿಜ್ಞಾನಿ, ವನ್ಯಜೀವಿ ಛಾಯಾಗ್ರಾಹಕ, ಲೇಖಕರಾಗಿ ರಾಷ್ಟ್ರಮಟ್ಟದವರೆಗೆ ಕೀರ್ತಿ ಪಸರಿಸಿದ್ದು, ನಾಡಿಗ್ ರಮೇಶ್ ಕಚಗುಳಿಯ ಹಾಸ್ಯ ಕಲಾವಿದರಾಗಿ, ಪಟ್ಟಣದ ಮಾಜಿ ಪುರಸಭಾಧ್ಯಕ್ಷ ಎಚ್.ಎಸ್. ಮಂಜಪ್ಪ ಉತ್ತಮ ಸಂಘಟಕರೆನಿಸಿದ್ದಾರೆ.
1945ರಿಂದ ಇಲ್ಲಿನವರೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪಾತ್ರ ವಹಿಸಿರುವ ಎಚ್. ಶ್ರೀನಿವಾಸರಾವ್ ಯುವಕ ಸಂಘದ ಸ್ಥಾಪಕ, ಡಿಸಿಸಿ ಬ್ಯಾಂಕ್ ಇನ್ನಿತರ ಸಂಸ್ಥೆಗಳ ನಿರ್ದೇಶಕರಾಗಿ ಹಿರಿಮೆ ಸಾಧಿಸಿದ್ದಾರೆ. ಯುವಕ ಮಹೇಶ್ ಆಚಾರ್ ಮರ ಹಾಗೂ ಕಲ್ಲಿನ ವಿಗ್ರಹಗಳ ಕೆತ್ತನೆಗೆ ಹೆಸರಾಗಿದ್ದಾರೆ.
ಪ್ರಾತಃಸ್ಮರಣೀಯರು: 1953ರಲ್ಲಿ ಸರ್ಕಾರದ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಗ್ರಾಮ ಸೇವಕರಾಗಿ ಗ್ರಾಮಕ್ಕೆ ಬಂದು ಅಂದಿನ ಯುವಕರಲ್ಲಿ ಸಂಚಲನ ಮೂಡಿಸಿದ್ದ ಎ. ಶೇಷಾದ್ರಿ ಅಯ್ಯರ್, ಯಾವುದೇ ಸೌಕರ್ಯ ಕಂಡಿರದಿದ್ದ ಗ್ರಾಮಕ್ಕೆ ಶುಕ್ರದೆಸೆ ತಂದಿತ್ತಿದ್ದಾರೆ. ಯುವಕ ಸಂಘ ಸ್ಥಾಪಿಸಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸಿ ಗ್ರಾಮದ ಯುವಕರನ್ನು ದೆಹಲಿವರೆಗೆ ಪರಿಚಯಿಸಿದ್ದರು. ಮೈಸೂರು ವಿವಿ ಎನ್‌ಸಿಸಿ ಸ್ವಯಂ ಸೇವಕರನ್ನು ಕರೆತಂದು ಶ್ರಮದಾನ ಮಾಡಿಸಿದ್ದರು ಎಂಬ ಉಪಕಾರ ಸ್ಮರಣೆ ಗ್ರಾಮಸ್ಥರದ್ದಾಗಿದ್ದರೆ, ತನಗೆ ಹೊಸ ಬಾಳು ನೀಡಿದ್ದ `ಹೊಸಬಾಳೆಯನ್ನು~ ನೆನಪಿನ ಅಂಗಳದಲ್ಲಿ ಜೀವಂತವಾಗಿರಿಸಿಕೊಂಡು, ಅರ್ಧ ಶತಮಾನದ ನಂತರ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಸಮಕಾಲೀನರನ್ನು ಸನ್ಮಾನಿಸಿ ಕೃತಜ್ಞತೆ ಮೆರೆದಿದ್ದಾರೆ. `ಮಾಗಡಿ ಮೇಷ್ಟ್ರು~ ದಿ. ಜಿ.ಎನ್. ಶ್ರೀಕಂಠಯ್ಯ, ನಾಟಿ ವೈದ್ಯ ದಿ. ಡಿ. ನಂಜುಂಡರಾವ್ ಇವರೆಲ್ಲಾ ದಿನಕ್ಕೊಮ್ಮೆಯಾದರೂ ಸ್ಮರಿಸಲ್ಪಡುತ್ತಾರೆ. ಶಕುಂತಲಾ ಪ್ರೌಢಶಾಲೆ 18 ವರ್ಷಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ವರದಾನವಾಗಿದೆ.
ಗ್ರಾಮಸ್ಥರ ಅಭಿಮತ: `ನಮ್ಮ ಊರಿನಲ್ಲಿ ಎಲ್ಲಾ ಹುದ್ದೆ ಅಲಂಕರಿಸಿದವರೂ ಇದ್ದಾರೆ. ಐತಿಹಾಸಿಕ ಮಹತ್ವ ಇಲ್ಲದ ಊರಿನಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ~ ಎನ್ನುತ್ತಾರೆ ಗ್ರಾಮದ ಡಾ.ವಿ. ಅಶೋಕ್ ಹಾಗೂ ರಮೇಶ್
ನಾಡಿಗ್.
`ನಮ್ಮಲ್ಲಿ ಪರಿಶಿಷ್ಟರು, ಬ್ರಾಹ್ಮಣರು, ಈಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇರೆಲ್ಲೂ ಕಾಣ ಸಿಗದ ಸೌಹಾರ್ದ ಇಲ್ಲಿದೆ~ ಎನ್ನುವುದು ತಾಲ್ಲೂಕು ಪಂಚಾಯ್ತಿ ಸದಸ್ಯ, ಪ್ರೌಢಶಾಲೆ ಅಧ್ಯಕ್ಷ ಕೆ. ಅಜ್ಜಪ್ಪ ಹಾಗೂ ಎಚ್.ಎ. ರಾಘವೇಂದ್ರರಾವ್ ಮನದಾಳದ ಮಾತು.
`ಪಟ್ಟಣ ವಾಸಕ್ಕೂ ನಮ್ಮೂರಿನ ಸುಸಜ್ಜಿತ ಜೀವನಶೈಲಿಗೂ ಹೆಚ್ಚು ವ್ಯತ್ಯಾಸವಿಲ್ಲ~ ಎನ್ನುತ್ತಾರೆ ತಮ್ಮ ಮನೆತನದ 9 ತಲೆಮಾರುಗಳ ಇತಿಹಾಸ ಕಲೆ ಹಾಕಿರುವ, `ಮರೆಯಲಾರದ ಮಹಾನುಭಾವರು~ ಕೃತಿ ರಚಿಸಿರುವ ಎಚ್.ಎ. ಪ್ರಭಾಕರರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.