ADVERTISEMENT

ಸಿಇಒ ವಿರುದ್ಧ ಈಸೂರು ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 10:20 IST
Last Updated 7 ಫೆಬ್ರುವರಿ 2012, 10:20 IST

ಶಿವಮೊಗ್ಗ: ಗುತ್ತಿಗೆ ನೌಕರರ ಕಾಯಂ ವಿಚಾರ ಸೇರಿದಂತೆ ಜಿ.ಪಂ. ಆಡಳಿತದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರು ವಿರುದ್ಧ ಸದಸ್ಯ ಈಸೂರು ಬಸವರಾಜ್ ಆರೋಪಿಸಿದ ಪ್ರಸಂಗ ಸೋಮವಾರ ನಡೆದ ಜಿ.ಪಂ. ಸಾಮಾನ್ಯಸಭೆಯಲ್ಲಿ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಈಸೂರು ಬಸವರಾಜ್, ಸಮಾಜ ಕಲ್ಯಾಣ ಇಲಾಖೆಯಡಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರು ಸುಪ್ರೀಂಕೋರ್ಟಿನ ತೀರ್ಪಿನ ಅನ್ವಯ ಪೂರಕ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದರೂ ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅವರನ್ನು ಕಾಯಂಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಒಂದು ಹಂತದಲ್ಲಿ ಸಿಇಒ ಅವರನ್ನು ಉದ್ದೇಶಿಸಿ, `ನಿಮಗೆ ಕಾಯ್ದೆ- ಕಾನೂನು ಗೊತ್ತಿಲ್ಲ. ನಾನು ಮೊದಲಿಂದಲೂ ಇದನ್ನು ಹೇಳುತ್ತಾ ಬಂದಿದ್ದೇನೆ. ಇಡೀ ಜಿಲ್ಲೆಯನ್ನು ಹಾಳು ಮಾಡಲು ಹೊರಟಿದ್ದೀರಿ~ ಎಂದು ನೇರವಾಗಿ ಆರೋಪಿಸಿದರು. ಇದರಿಂದ ಕ್ಷಣಕಾಲ ವಿಚಲಿತರಾದ ಸಿಇಒ ಡಾ.ಸಂಜಯ್ ಬಿಜ್ಜೂರು, `ಪ್ರಾಮಾಣಿಕವಾಗಿ ಕೆಲಸ ಮಾಡುವ ನಾವು, ನಿಮ್ಮಿಂದ ಈ ಮಾತು ಕೇಳಿಸಿಕೊಳ್ಳಲು ಸಿದ್ಧರಿಲ್ಲ~ ಎಂದು ಅಧ್ಯಕ್ಷರತ್ತ ನೋಡಿ, ತಮ್ಮ ಸ್ಥಾನದಿಂದ ಎದ್ದೇಳಲು ನೋಡಿದರು.

ಅಧ್ಯಕ್ಷರಾದ ಶುಭಾ ಕೃಷ್ಣಮೂರ್ತಿ ಅವರನ್ನು ಸಮಾಧಾನ ಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, `ಸಿ~ ಗ್ರೂಪ್ ಸಿಬ್ಬಂದಿಗಳ ಕಾಯಂಗೊಳಿಸುವ ಅಧಿಕಾರ ಇಲಾಖೆ ಆಯುಕ್ತರಿಗೆ ಇದೆ. `ಡಿ~ ಗ್ರೂಪ್ ಸಿಬ್ಬಂದಿಯನ್ನು ಜಿ.ಪಂ. ಸಿಇಒ ಕಾಯಂಗೊಳಿಸಬಹುದು. ಸುಪ್ರೀಂಕೋರ್ಟ್ ಅನ್ವಯ ಇಲಾಖೆ `ಡಿ~ ಗ್ರೂಪ್ ಸಿಬ್ಬಂದಿಗೆ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ. ಅವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಕಾಯಂಗೊಳಿಸಲಾಗುವುದು ಎಂದರು.

ಈ ಉತ್ತರದಿಂದ ಸಮಾಧಾನವಾಗದ ಈಸೂರು ಬಸವರಾಜ, ಸಿಇಒ ಅವರನ್ನು ಉದ್ದೇಶಿಸಿ, ನೀವು ಈ ಎಲ್ಲಾ ಇಲಾಖೆಗಳ ಹೆಡ್, ನೌಕರರ ದಾಖಲೆ ತರಿಸಿಕೊಂಡು ಅವರನ್ನು ಕಾಯಂಗೊಳಿಸುವ ಕೆಲಸವನ್ನು ಈಗಾಗಲೇ ಮಾಡಬೇಕಿತ್ತು~ ಎಂದರು.

`ಇದು ರಾಜ್ಯವ್ಯಾಪಿ ಕಾರ್ಯ. ದಾಖಲೆ ಒದಗಿಸಿದರೆ ಅಂತಹವರನ್ನು ಕೂಡಲೇ ಕಾಯಂಗೊಳಿಸಲು ಸಿದ್ಧ~ ಎಂದು ಸಿಇಒ ಭರವಸೆ ನೀಡಿದರು.

ಇದಕ್ಕೂ ಮೊದಲು ಚರ್ಚೆಯಲ್ಲೂ ಈಸೂರು ಬಸವರಾಜ್, ಸಿಇಒ ಅವರನ್ನು ಉದ್ದೇಶಿಸಿ,  ಸ್ಥಾಯಿ ಸಮಿತಿ ತೀರ್ಮಾನಗಳು ಒಮ್ಮೆ ಸಾಮಾನ್ಯಸಭೆಗೆ ಬಂದು, ಚರ್ಚೆಯಾಗಿ ಅನುಮೋದನೆ ಪಡೆದ ಮೇಲೆ ಮತ್ತೊಮ್ಮೆ ಸ್ಥಾಯಿ ಸಮಿತಿಯಲ್ಲಿ ಚರ್ಚೆಯಾಗಿ, ನಿರ್ಣಯ ಬದಲಿಸಲು ಸಾಧ್ಯವೇ? ಆದರೆ, ಆಯನೂರು ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಇದು ಬದಲಾಗಲು ಹೇಗೆ ಸಾಧ್ಯ~ ಎಂದು ಪ್ರಶ್ನಿಸಿದರು.

ಅಲ್ಲದೇ, `ನೀವು ಅರಣ್ಯದಲ್ಲಿದ್ದೀರಿ, ಇನ್ನೂ ನಾಡಿಗೆ ಬಂದಿಲ್ಲ~ ಎಂದು ವ್ಯಂಗ್ಯವಾಗಿ ಸಿಇಒ ಅವರನ್ನು ಕುಟುಕಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಎಚ್. ಗಂಗಾಧರಪ್ಪ, ಈಸೂರು ಬಸವರಾಜ್ ಅವರನ್ನು ಉದ್ದೇಶಿಸಿ, `ನಿಮ್ಮ ಭಾಷೆ ಸರಿ ಇಲ್ಲ, ಆ ರೀತಿ ಮಾತು ಬೇಡ~ ಎಂದರು. ಹಾಗೆಯೇ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶ್ವರಪ್ಪ, `ನಿನ್ನದು ಅತಿಯಾಯಿತು...~ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.