ADVERTISEMENT

ಸೊರಬ: ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 4:55 IST
Last Updated 20 ಜೂನ್ 2012, 4:55 IST

ಸೊರಬ: ಕೃಷಿ ಚಟುವಟಿಕೆಗಳಲ್ಲಿ ತಮ್ಮಂದಿಗೆ ಪಾಲ್ಗೊಂಡ ಬಸವಣ್ಣಗಳಿಗೆ ರೈತರು ವಿಶೇಷ ಪೂಜೆ ಸಲ್ಲಿಸಿ ಮಣ್ಣೆತ್ತಿನ ಅಮಾವಾಸ್ಯೆ ಅನ್ನು ತಾಲ್ಲೂಕಿನಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಿದರು.

ರೈತರ ಕೋರಿಕೆ ಮೇರೆಗೆ ವ್ಯವಸಾಯದಲ್ಲಿ ಪಾಲ್ಗೊಳ್ಳಲು ಬಸವ ಜಯಂತಿಯಂದು ಭೂಮಿಗೆ ಆಗಮಿಸಿದ ಬಸವಣ್ಣನನ್ನು ರೈತರು ಮೆರವಣಿಗೆ ಮೂಲಕ ಮನೆಗೆ ಕರೆ ತರುತ್ತಾರೆ. ಭರಣಿ ಮಳೆಯಲ್ಲಿ ಬಿತ್ತನೆ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಾರಂಭ ಮಾಡುವ ಬಸವಣ್ಣ ಬರ, ಕುಂಟೆ, ಹರತೆ, ನೀರು ಹರತೆ ಮುಂತಾದ ಕಾರ್ಯಗಳಲ್ಲಿ ಬಿಸಿಲು, ಮಳೆ ಎನ್ನದೇ ರೈತನಿಗೆ ಹೆಗಲು ಕೊಟ್ಟು ದುಡಿಮೆಯಲ್ಲಿ ಪಾಲ್ಗೊಳ್ಳುತ್ತವೆ.

ನೀರು ಹರತೆ ನಂತರ ತಮ್ಮ ಲೋಕಗಳಿಗೆ ವಾಪಸಾಗುವ ಬಸವಣ್ಣಗಳಿಗೆ ಮಣ್ಣಿನ ಅಮಾವಾಸ್ಯೆಯಂದು ಮಣ್ಣಿನಿಂದ ಬಸವಣ್ಣಗಳನ್ನು ತಯಾರಿಸಿ, ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸಿರುತ್ತಾರೆ. ಮೂರು ದಿನಗಳ ನಂತರ ಬುತ್ತಿ, ಚಕ್ಕಲಿ ಹಾಗೂ ಕೋಡುಬಳೆಗಳೊಂದಿಗೆ ಬಾವಿಯಲ್ಲಿ ವಿಸರ್ಜಿಸುತ್ತಾರೆ.
ಇಂತಹ ವಿಶೇಷಪೂಜೆ ಮಲೆನಾಡು ಹಾಗೂ ಬಯಲುಸೀಮೆಗಳಲ್ಲಿ ಆಚರಿಸಲಾಗುತ್ತಿದೆ.

ಅರ್ಥ ಕಳೆದುಕೊಂಡ ಹಬ್ಬ
ಭರಣಿ ಮಳೆಯಲ್ಲಿ ಬಿತ್ತನೆ ಮಾಡಿ ಆರಿದ್ರಾ ಮಳೆಯಲ್ಲಿ ನೀರು ಹರತೆ ಮಾಡುವ ಮೂಲಕ ಕೃಷಿ ಚಟುವಟಿಕೆ ಕೊನೆಗೊಳಿಸಬೇಕಿತ್ತು. ಮುಂಗಾರು ತಡವಾಗಿ ಆರಂಭಗೊಂಡಿದ್ದರಿಂದ ಬಸವಣ್ಣಗಳು ತಮ್ಮ ಕಾರ್ಯ ಚಟುವಟಿಕೆ ಮುಗಿಸಿ ವಾಪಸಾಗುವ ಮಣ್ಣೆತ್ತಿನ ಅಮಾವಾಸ್ಯೆ ಬಂದರೂ ಬಿತ್ತನೆ ಸಂಪೂರ್ಣವಾಗಿ ಆರಂಭಗೊಂಡಿಲ್ಲ.  ತಡವಾಗಿ ಬಿತ್ತನೆ ಆರಂಭಗೊಂಡಿದ್ದು, ಇಳುವರಿ ಕಡಿಮೆಗೊಳ್ಳಲು ಕಾರಣ ಆಗುತ್ತದೆ ಎಂದು ಕೃಷಿಕರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ರಕ್ತದಾನ ಮಾಡಲು ಸಲಹೆ
ರಕ್ತದಾನ ಅತ್ಯಂತ ಮಹತ್ವದ್ದಾಗಿದ್ದು ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಯುವ ವರ್ತಕರ ಸಂಘದ ಅಧ್ಯಕ್ಷ ನಾಗರಾಜ ಜೈನ್ ತಿಳಿಸಿದರು.

ತಾಲ್ಲೂಕಿನ ಶಿಗ್ಗಾ-ಇಂಡುವಳ್ಳಿ ಮಲೆನಾಡು ಪ್ರೌಢಶಾಲೆಯಲ್ಲಿ ಈಚೆಗೆ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಸಾಂತ್ವನ ಮಹಿಳಾ ಸಹಾಯವಾಣಿ, ಯುವಜನ ಅಭಿವೃದ್ಧಿ ಕೇಂದ್ರ ಇಂಡುವಳ್ಳಿ ಆಶ್ರಯದಲ್ಲಿ ನಡೆದ ರಕ್ತದಾನವೇ ಜೀವದಾನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡುವವರು ಆರೋಗ್ಯವಂತರಾಗಿರಬೇಕು. 18 ವರ್ಷ ವಯಸ್ಸಾಗಿರಬೇಕು. 45 ಕೆಜಿ ತೂಕವಿರಬೇಕು ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಆಸ್ಪತ್ರೆಯ ವಿಸಿಟಿಸಿ ಆಪ್ತ ಸಮಾಲೋಚಕ ಬಸವರಾಜ್ ರಕ್ತದಾನದ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜತೆಗೆ, ಏಡ್ಸ್ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ ಏಡ್ಸ್ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ಮುಖ್ಯಶಿಕ್ಷಕ ಎಸ್.ಕೆ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಕೆ. ಮೋಹನ್ ದಾಸ್, ಎಚ್.ಎಂ. ಪ್ರಶಾಂತ್ ಹಾಗೂ ಶಾಲೆಯ ಎಲ್ಲಾ ಬೋಧಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.     
       
10ನೇ ತರಗತಿ ವಿದ್ಯಾರ್ಥಿಗಳಿಗೆ  ರಕ್ತದಾನದ ಮಹತ್ವ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಎಂ.ಆರ್. ಸೌಂದರ್ಯಾ ಪ್ರಥಮ, ಎಚ್.ಬಿ. ಚೇತನಾ ದ್ವಿತೀಯ, ಇಬ್ರಾಹಿಂ ತೃತೀಯ ಸ್ಥಾನ ಗಳಿಸಿದರು.
ಬಿ.ಡಿ. ದಿವ್ಯಾ ಪ್ರಾರ್ಥಿಸಿದರು,ಬಿ.ಸಿ. ಜಯಶೀಲಾ ಸ್ವಾಗತಿಸಿದರು, ಕನ್ನಡ ಶಿಕ್ಷಕ ರಾಮಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.