ADVERTISEMENT

ಸ್ವಚ್ಛತೆ ಮಾಯ; ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:25 IST
Last Updated 10 ಫೆಬ್ರುವರಿ 2012, 10:25 IST

ತುಮರಿ: ಪಟ್ಟಣದ ಒಳಚರಂಡಿ ಸ್ವಚ್ಛತೆ ಮತ್ತು ಕಸ ವಿಲೇವಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳದ ತುಮರಿ ಗ್ರಾಮ ಪಂಚಾಯ್ತಿ ಕಾರ್ಯ ನಿರ್ವಹಣೆ ಕಾರಣ ಪ್ರಮುಖ ಬೀದಿಗಳಲ್ಲಿ ಕೆಟ್ಟ ವಾಸನೆಯಿಂದ ಮೂಗು ಮುಚ್ಚಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕರೂರು ಬಾರಂಗಿ ದ್ವೀಪ ಪ್ರದೇಶದ ವ್ಯಾಪಾರಿ ಕೇಂದ್ರವಾದ ತುಮರಿ ಪಟ್ಟಣದ ಈ ಸ್ಥಿತಿಗೆ ಕಾರಣವಾದ ಗ್ರಾಮ ಪಂಚಾಯ್ತಿ ವಿರುದ್ಧ ಸ್ಥಳೀಯ ನಾಗರಿಕರಲ್ಲದೆ ಹೋಬಳಿಯ ಜನರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರಮುಖ ಬೀದಿಯಲ್ಲಿ ಕಸ ವಿಲೇವಾರಿಗಾಗಿ ನಿರ್ಮಿಸಿರುವ ತೊಟ್ಟಿಗಳು ಕೆಲವೆಡೆ ತುಂಬಿದ್ದರೆ ಉಳಿದ ಸ್ಥಳಗಳಲ್ಲಿ ಜನ ವಸತಿ ಪ್ರದೇಶದಿಂದ ದೂರವಿರುವ ಕಾರಣಕ್ಕೆ ಉಪಯೋಗಕ್ಕೆ ಬಾರದಾಗಿದೆ.

ಇನ್ನು ಚರಂಡಿಗಳ ಸ್ವಚ್ಚತೆಯ ಬಗ್ಗೆ ಗಮನ ಕೊಡದ ಹಿನ್ನೆಲೆಯಲ್ಲಿ ಕೆಟ್ಟ ವಾಸನೆ ಆರಂಭವಾಗಿದೆ. ಕೆಲವು ಸ್ಥಳಗಳಲ್ಲಿ ಕೊಳಚೆ ನೀರು ನಿಂತು ಹುಳುಗಳು ಉತ್ಪತ್ತಿಯಾದ ಹಿನ್ನೆಲೆಯಲ್ಲಿ ಸೊಳ್ಳೆಗಳ ಕಾಟ ತೀವ್ರವಾದ ಬಗ್ಗೆ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಹುತೇಕ ಅಂಗಡಿ, ಹೋಟೆಲ್, ಮತ್ತು ಬಸ್ ನಿಲ್ದಾಣದಲ್ಲಿ ಕೆಟ್ಟ ವಾಸನೆಯ ಕಾರಣದಿಂದ ಪ್ರಯಾಣಿಕರು ಮತ್ತು ಗಿರಾಕಿಗಳು ಹೆಚ್ಚು ಕಾಲ ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗಿದ್ದು ಮಲೇರಿಯಾ ಅಥವಾ ಡೆಂಗೆ ಜ್ವರದ ಬೀತಿ ಮೂಡಿಸಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ತುಮರಿಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ವರ್ತಕ ಸಂಘದ ಸದಸ್ಯರು ಕಳೆದ ವಾರ ಶ್ರಮದಾನದ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡಿದ್ದರು.  ಚರಂಡಿಗಳಿಗೆ ಕೊಡದಲ್ಲಿ ನೀರು ಹಾಕುವ ಮೂಲಕ ಸ್ವಚ್ಚತೆಗಾಗಿ ಆಗ್ರಹಿಸಿದ್ದರು.

ಆದರೆ ಗ್ರಾಮ ನೈರ್ಮಲ್ಯದ ಪ್ರಾಥಮಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ತುಮರಿ ಗ್ರಾಮ ಪಂಚಾಯ್ತಿ ಬೇಜವಾಬ್ದಾರಿತನವನ್ನು ಮುಖಂಡರಾದ ಭರತ್‌ಕುಮಾರ್, ಗಣಪತಿ ಹಿಣಸೋಡಿ, ಮಂಜಯ್ಯಜೈನ್, ಕೃಷ್ಣಭಂಡಾರಿ, ಅಣ್ಣಪ್ಪ ಆಚಾರ್ಯ, ಸಂತೋಷ್‌ಶೆಟ್ಟಿ, ಜೋಸೆಪ್ ಮತ್ತಿತರರು ಖಂಡಿಸಿದ್ದು ವಾರದೊಳಗೆ ಸ್ವಚ್ಚತೆಯ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಜನಾಂಗ ಪ್ರಮಾಣಪತ್ರ ಸಂವಿಧಾನ ಬದ್ಧ ಹಕ್ಕು
ಭದ್ರಾವತಿ:
  ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕಾದ ಸೌಲಭ್ಯ ಒದಗಿಸುವುದು ಸಂವಿಧಾನದ ಮೂಲಕ ದೊರತಿರುವ ಹಕ್ಕು ಎಂದು ಆರ್‌ವೈಎಫ್‌ಐ ರಾಷ್ಟ್ರಾಧ್ಯಕ್ಷ ಬಿ. ಬಸವಲಿಂಗಪ್ಪ ಹೇಳಿದರು.

ಇಲ್ಲಿನ ಲೇಡಿಸ್‌ಕ್ಲಬ್ ಸಭಾಂಗಣದಲ್ಲಿ ಈಚೆಗೆ ಆರ್‌ವೈಎಫ್‌ಐ ಆಯೋಜಿಸಿದ್ದ ಆದಿ ದ್ರಾವಿಡ, ಅರುಂದತಿಯಾರ್ `ಜನತಾಂತ್ರಿಕ ಹಕ್ಕುಗಳ ಹರಣ ನಿಲ್ಲಿಸಿ~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲೇ ಹುಟ್ಟಿ ಬೆಳೆದ ಮಂದಿಗೆ ವಲಸಿಗ ಎಂಬ ಒಂದೇ ಕಾರಣಕ್ಕೆ ಜಾತಿ ಪ್ರಮಾಣಪತ್ರ ನೀಡದೆ ವಂಚಿಸಿರುವುದು ಸಂವಿಧಾನ ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ಅವರು ಕಿಡಿಕಾರಿದರು.

40ವರ್ಷದಿಂದ ಇಲ್ಲಿಯೇ ವಾಸವಿರುವ ಈ ಜನಾಂಗದ ಬಂಧುಗಳಿಗೆ ಪ್ರಮಾಣಪತ್ರ ನೀಡುವಲ್ಲಿ ತಾಳಿರುವ ಧೋರಣೆ ಖಂಡನೀಯ. ಇದಕ್ಕಾಗಿ ಯಾವುದೇ ರೀತಿಯ ಹೋರಾಟ ಮಾಡಿ ಅದನ್ನು ಪಡೆಯಲು ಸಿದ್ಧರಾಗಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಪಿ.ಆರ್. ಶಾಂತ, ಜಿಲ್ಲಾಧ್ಯಕ್ಷ ಪಿ. ಮೂರ್ತಿ, ರಾಜ್ಯಾಧ್ಯಕ್ಷ ಎಂ. ಗಂಗಾಧರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಕಾಣಿಕ್ಯರಾಜ್ ಉಪಸ್ಥಿತರಿದ್ದರು.  ಪಿ. ಮೂರ್ತಿ ಸ್ವಾಗತಿಸಿದರು, ಶಾಂತ ನಿರೂಪಿಸಿದರು, ಎನ್. ರಾಜು ವಂದಿಸಿದರು.

ಇದೇ ಸಂದರ್ಭದಲ್ಲಿ ಜಾತಿ ಪ್ರಮಾಣಪತ್ರ ಪಡೆಯುವ ಸಲುವಾಗಿ ನಡೆಸಬೇಕಾದ ಹೋರಾಟದ ನಿರ್ಣಯವನ್ನು ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.