ADVERTISEMENT

ಸ್ವತಂತ್ರವಾಗಿ ಪ್ರಥಮ ಬಾರಿ ಅರಳಿದ ಕಮಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 6:50 IST
Last Updated 11 ಫೆಬ್ರುವರಿ 2011, 6:50 IST

ಶಿವಮೊಗ್ಗ: ಗುರುವಾರ ನಡೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಹೊಸನಗರ ತಾಲ್ಲೂಕಿನ ನಗರ ಕ್ಷೇತ್ರದ ಶುಭಾ ಕೃಷ್ಣಮೂರ್ತಿ ಮತ್ತು ಉಪಾಧ್ಯಕ್ಷರಾಗಿ ಸೊರಬದ ಉಳವಿ ಕ್ಷೇತ್ರದ ಎಚ್.ಬಿ. ಗಂಗಾಧರಪ್ಪ ಆಯ್ಕೆಯಾದರು. ಈ ಮೂಲಕ ಪ್ರಪ್ರಥಮ ಬಾರಿಗೆ ಸ್ವತಂತ್ರವಾಗಿ ಬಿಜೆಪಿ ಜಿಲ್ಲಾ ಪಂಚಾಯ್ತಿ ಚುಕ್ಕಾಣಿ ಹಿಡಿಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಎರಡೂ ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಶುಭಾ ಕೃಷ್ಣಮೂರ್ತಿ ಹಾಗೂ ಎಚ್.ಬಿ. ಗಂಗಾಧರಪ್ಪ ತಲಾ 16 ಮತ ಗಳಿಸುವ ಮೂಲಕ ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗದ್ದುಗೆ ಏರಿದರು.

ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ತೀರ್ಥಹಳ್ಳಿಯ ಲಿಂಗಾ ಪುರ ಕ್ಷೇತ್ರದ ಕಾಂಗ್ರೆಸ್‌ನ ಶ್ರುತಿ ವೆಂಕಟೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಈಸೂರು ಬಸವರಾಜ್ ಕಣದಲ್ಲಿದ್ದರು. ಆದರೆ, ತಲಾ 14 ಮತ ಗಳಿಸಿ, ಪರಾಭವಗೊಂಡರು. ಚುನಾವಣಾ ಪ್ರಕ್ರಿಯೆ ನಡೆಸಿದ ಪ್ರಾದೇಶಿಕ ಆಯುಕ್ತ ಕೆ.ಎಸ್. ಪ್ರಭಾಕರ್, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಓದಿದರು. ಕಣದಿಂದ ನಾಮಪತ್ರ ಹಿಂಪಡೆಯಲು 5 ನಿಮಿಷ ಅವಕಾಶ ಕಲ್ಪಿಸಲಾಯಿತು.

ಈ ಮಧ್ಯೆ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಎಚ್.ಬಿ. ಗಂಗಾಧರಪ್ಪ ಮಾತನಾಡಿ, ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಯಾಗಿ ಈಸೂರು ಬಸವರಾಜ್, ‘ಎಲ್ಲರೂ ಸೇರಿ 5 ವರ್ಷ ಬಾಳ್ವೆ ಮಾಡಬೇಕಾಗಿರುವುದರಿಂದ ಉಪಾಧ್ಯಕ್ಷ ಸ್ಥಾನ ನಮಗೆ ಬಿಟ್ಟುಕೊಡಿ. ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಡಬೇಕು’ ಎಂದರು.

ಮಧ್ಯ ಪ್ರವೇಶಿಸಿದ ಪ್ರಾದೇಶಿಕ ಆಯುಕ್ತ ಕೆ.ಎಸ್. ಪ್ರಭಾಕರ್, ಈ ಅವಧಿ ಕೇವಲ ನಾಮಪತ್ರ ಹಿಂಪಡೆಯಲು ಮಾತ್ರ ಎಂದು ಸ್ಪಷ್ಟಪಡಿಸಿದರು. ನಂತರ, ಅಭ್ಯರ್ಥಿಗಳ ಪರ ಮತ್ತು ವಿರೋಧ ಇರುವ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸುವಂತೆ ತಿಳಿಸಿದರು. ಕೈ ಎಣಿಕೆ ಮೂಲಕ ತಲಾ 16 ಮತಗಳನ್ನು ಗಳಿಸಿದ ಶುಭಾ ಕೃಷ್ಣಮೂರ್ತಿ ಅಧ್ಯಕ್ಷ ಮತ್ತು ಗಂಗಾಧರಪ್ಪ ಉಪಾಧ್ಯಕ್ಷರನ್ನಾಗಿ ಘೋಷಿಸಿದರು.

ಎಸ್. ಕುಮಾರ್ ಗೈರು: ಭದ್ರಾವತಿಯ ಹಿರಿಯೂರು ಕ್ಷೇತ್ರದ ಸದಸ್ಯ ಜೆಡಿಎಸ್‌ನ ಎಸ್. ಕುಮಾರ್ ಗೈರು ಹಾಜರಾಗಿದ್ದರು. ಚುನಾವಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಆಗಮಿಸಿದ್ದ ಎಸ್. ಕುಮಾರ್, ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಕಣ್ಮರೆಯಾಗಿ ಅಚ್ಚರಿ ಹುಟ್ಟಿಸಿದರು. ಬಿಜೆಪಿಗೆ ಅನುಕೂಲ ಮಾಡಿಕೊಡಲು ಕುಮಾರ್ ಗೈರಾದರು ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.

ಕಾಂಗ್ರೆಸ್, ಆಪರೇಷನ್ ಹಸ್ತ ನಡೆಸುತ್ತದೆಂಬ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಎರಡನ್ನೂ ಬಿಜೆಪಿ ಗೆಲ್ಲುವ ಮೂಲಕ ಇದು ಹುಸಿಯಾಯಿತು.  ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಆಯುಕ್ತ ಕೆ.ಆರ್. ರಾಮಕೃಷ್ಣ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಉಪಸ್ಥಿತರಿದ್ದರು. 

ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ, ಶಾಸಕರಾದ ಎಚ್. ಹಾಲಪ್ಪ, ಕೆ.ಜಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಭಾರತೀ ಶೆಟ್ಟಿ, ಆರ್.ಕೆ. ಸಿದ್ದರಾಮಣ್ಣ, ಕೆಎಸ್‌ಐಐಡಿಸಿ ಅಧ್ಯಕ್ಷ ಕೆ. ದಿವಾಕರ್, ನಗರಸಭೆ ಸದಸ್ಯ ಎಸ್.ಎನ್. ಚನ್ನಬಸಪ್ಪ, ಜಿ.ಪಂ.ಗೆ ಆಗಮಿಸಿ, ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. 

ಸಂಭ್ರಮ
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರು ಘೋಷಣೆಯಾಗುತ್ತಿದ್ದಂತೆ ಜಿ.ಪಂ. ಕಚೇರಿ ಆವರಣದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಚುನಾವಣಾ ಪ್ರಕ್ರಿಯೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.