ADVERTISEMENT

ಸ್ವಸಹಾಯ ಸಂಘಗಳಿಗೆ ತರಬೇತಿ ಅಗತ್ಯ: ಕಾಗೋಡು

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 7:30 IST
Last Updated 12 ಜನವರಿ 2012, 7:30 IST

ಶಿವಮೊಗ್ಗ: ಸ್ವಸಹಾಯ ಸಂಘಗಳಿಗೆ ಕೇವಲ ಸಾಲ ಮಾತ್ರ ನೀಡದೇ ಕರಕುಶಲ ವಸ್ತುಗಳನ್ನು ತಯಾರಿಸಲು ಅನುಕೂಲವಾಗುವಂತೆ ಸೂಕ್ತ ತರಬೇತಿ ನೀಡುವ ಕೆಲಸವನ್ನೂ ಸಹಕಾರಿ ಸಂಘಗಳು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಸಲಹೆ ಮಾಡಿದರು.

ನಗರದ ಕುವೆಂಪು ರಂಗಮಂದಿರ ಸಮೀಪದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿರುವ `ಕೊಡಚಾದ್ರಿ ವೈಭವ~ದ ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸಹಾಯ ಸಂಘಗಳ ಸದಸ್ಯರು ಇದೀಗ ವಿಚಾರವಂತರಾಗಿದ್ದಾರೆ. ಅವರಲ್ಲಿ ಪ್ರಜ್ಞೆ ಮೂಡಿದೆ ಹಾಗೂ ಸಹಕಾರಿ ಸಂಘಗಳಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ಇದನ್ನು ಬೆಳೆಸಿಕೊಂಡು ಅವರನ್ನು ಉತ್ಪಾದನಾ ಕ್ಷೇತ್ರಕ್ಕೆ ಕರೆ ತರುವ ಕೆಲಸ ಮಾಡಬೇಕು. ಜತೆಗೆ ಅವರು ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದರು.

ಮಲೆನಾಡಿನಲ್ಲಿ ಕೃಷಿ ಕ್ಷೇತ್ರ ಸಣ್ಣದಾಗುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಪರ್ಯಾಯ ಕ್ಷೇತ್ರದ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿ, ಕೊಡಚಾದ್ರಿ ವೈಭವ ಕಾರ್ಯಕ್ರಮದ ಯಶಸ್ಸಿನಿಂದಾಗಿ ಸಹಕಾರಿ ತತ್ವ ಹಾಗೂ ಸಂಘಟನೆಯಲ್ಲಿ ಎಂತಹ ಬಲ ಇದೆ ಎನ್ನುವುದು ತಿಳಿಯುತ್ತದೆ ಎಂದರು.

ಶಾಸಕ ಬಿ.ಕೆ. ಸಂಗಮೇಶ್ ಮಾತನಾಡಿ, ಭದ್ರಾವತಿಯಲ್ಲಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಕೊಡಚಾದ್ರಿ ಉತ್ಸವನ್ನು ನಡೆಸಬೇಕು. ಅದಕ್ಕೆ ತಗಲುವ ವೆಚ್ಚ ಸೇರಿದಂತೆ ಎಲ್ಲಾ ರೀತಿಯ ಸಹಕಾರವನ್ನು ತಾವು ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಟ್ರಸ್ಟ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸ್ವಾಗತಿಸಿದರು. ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್, ನಬಾರ್ಡ್ ಅಧಿಕಾರಿ ರಾಘವೇಂದ್ರ, ಜಿಲ್ಲಾ ಪಂಚಾಯ್ತಿ ವಿರೋಧ ಪಕ್ಷದ ನಾಯಕ ಕಲಗೋಡು ರತ್ನಾಕರ್, ಎನ್‌ಇಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಪಿ. ಮೈಲಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಪ್ರವೀಣ್ ಡಿ. ರಾವ್ ತಂಡದ ಸಂಗೀತ ರಸಮಂಜರಿ ಕೇಳುಗರನ್ನು ರಂಜಿಸಿತು.
ದೇಹದಾರ್ಢ್ಯ ಸ್ಪರ್ಧೆ ಫಲಿತಾಂಶ: ಕೊಡಚಾದ್ರಿ ಕ್ರೀಡೋತ್ಸವದಲ್ಲಿ ಜಿಲ್ಲಾಮಟ್ಟದ ದೇಹದಾರ್ಡ್ಯ ಸ್ಪರ್ಧೆಯ ವಿಜೇತರಿಗೆ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಪಾರಿತೋಷಕ ನೀಡಲಾಯಿತು.

50ಕೆ.ಜಿ.: ಬಿ.ಕೆ. ಶರತ್‌ಕುಮಾರ್, ಭದ್ರಾವತಿ (ಪ್ರಥಮ), ಆರ್. ಸಂತೋಷ್, ತೀರ್ಥಹಳ್ಳಿ (ದ್ವಿತೀಯ) ನಿಂಗರಾಜ್, ಸಾಗರ (ತೃತೀಯ). 55 ಕೆ.ಜಿ.: ಸನಾವುಲ್ಲಾ, ಶಿವಮೊಗ್ಗ (ಪ್ರ.), ಅಭಿಲಾಷ್, ಭದ್ರಾವತಿ (ದ್ವಿ.), ಸಚಿನ್, ಶಿವಮೊಗ್ಗ (ತೃತೀಯ).

60 ಕೆ.ಜಿ.: ಷಣ್ಮುಗಂ, ಶಿವಮೊಗ್ಗ  (ಪ್ರ.), ಜೆ. ಶಿವಪ್ರಸಾದ್, ಭದ್ರಾವತಿ (ದ್ವಿ.), ಡ್ಯಾನಿ, ಶಿವಮೊಗ್ಗ (ತೃ.). 65 ಕೆ.ಜಿ.: ಜೀಶನ್, ಶಿವಮೊಗ್ಗ (ಪ್ರ.), ಪವನ್‌ಕುಮಾರ್, ಸಾಗರ (ದ್ವಿ.), ಎಸ್. ಕಾರ್ತಿಕ್, ಭದ್ರಾವತಿ (ತೃ.).70ಕೆ.ಜಿ.: ಡಿ. ನಾಗೇಶ್, ಸಾಗರ (ಪ್ರ.), ಕೆ.ಎಲ್. ನಾಗರಾಜ್, ಶಿವಮೊಗ್ಗ (ದ್ವಿ.), ಮಂಜುನಾಥ್, ಭದ್ರಾವತಿ  (ತೃ.). 75 ಕೆ.ಜಿ.: ನವೀನ್ (ಪ್ರ.), ಕಿರಣ್‌ಕುಮಾರ್ ಭದ್ರಾವತಿ (ದ್ವಿ.) ವಿ. ರವಿಕುಮಾರ್, ಶಿವಮೊಗ್ಗ (ತೃ.)75 ಕೆ.ಜಿ. ಮೇಲ್ಪಟ್ಟ ವಿಭಾಗ: ಸಂದೀಪ್‌ಕುಮಾರ್, ಭದ್ರಾವತಿ  (ಪ್ರಥಮ), ಕೆ.ಎನ್. ಚೇತನ್, ಶಿವಮೊಗ್ಗ  (ದ್ವಿತೀಯ), ನಾಗರಾಜ್, ತೀರ್ಥಹಳ್ಳಿ  (ತೃತೀಯ)
ಹಿರಿಯರ ವಿಭಾಗ (70 ಕೆ.ಜಿ. ಒಳಪಟ್ಟು): ಸಂತೋಷ್ ನಾಯ್ಕ, ತೀರ್ಥಹಳ್ಳಿ  (ಪ್ರಥಮ), ಶ್ರೀನಾಥ್, ಭದ್ರಾವತಿ (ದ್ವಿತೀಯ).
ಹಿರಿಯರ ವಿಭಾಗ (70 ಕೆ.ಜಿ. ಮೇಲ್ಪಟ್ಟು): ಗಿಲ್ಬರ್ಟ್ ಡಯಾಸ್, ಶಿವಮೊಗ್ಗ (ಪ್ರಥಮ), ಮಹೇಂದ್ರ, ಭದ್ರಾವತಿ (ದ್ವಿತೀಯ).
ವಿಕಲಚೇತನ  ವಿಭಾಗ: ಅನಿಶ್ ಭದ್ರಾವತಿ (ಪ್ರಥಮ), ವೆಂಕಟೇಶ್ ಭದ್ರಾವತಿ (ದ್ವಿತೀಯ), ಆರೀಫ್, ಭದ್ರಾವತಿ (ತೃತೀಯ).  ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.