ADVERTISEMENT

ಹಾಮಾನಾ ಕನ್ನಡದ ದನಿ – ಧಣಿ: ಚಂಪಾ

ತೀರ್ಥಹಳ್ಳಿ: ಹಾಮಾನಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2014, 6:48 IST
Last Updated 6 ಫೆಬ್ರುವರಿ 2014, 6:48 IST
ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಬುಧವಾರ ನಡೆದ ಡಾ.ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊ. ಚಂದ್ರಶೇಖರ ಪಾಟೀಲ  ಪ್ರಶಸ್ತಿ ಸ್ವೀಕರಿಸಿದರು.
ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಬುಧವಾರ ನಡೆದ ಡಾ.ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊ. ಚಂದ್ರಶೇಖರ ಪಾಟೀಲ ಪ್ರಶಸ್ತಿ ಸ್ವೀಕರಿಸಿದರು.   

ತೀರ್ಥಹಳ್ಳಿ: ‘ಹಾ.ಮಾ. ನಾಯಕರು ಕನ್ನಡದ ದನಿ ಹಾಗೂ ಧಣಿ ಕೂಡಾ ಆಗಿದ್ದರು. ಅವರ ಕನ್ನಡದ ಬಗೆಗಿನ ಬದ್ಧತೆಯನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿನ ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಬುಧವಾರ ಮಂಡ್ಯದ ಕರ್ನಾಟಕ ಸಂಘ, ತುಂಗಾ ವಿದ್ಯಾವರ್ಧಕ ಸಂಘದ ಸಹಕಾರದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಡಾ.ಹಾಮಾನಾ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಮಾನಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಅಂಕಣ ಬರಹಕ್ಕೆ ಗೌರವ ತಂದು ಕೊಟ್ಟವರು ಹಾಮಾನಾ. ಪ್ರಜಾಪ್ರಭುತ್ವದ ಧರ್ಮಕ್ಕೆ ಒಳಗಾಗಿ ನಿರಂತರವಾಗಿ ಮೂಡಿಬಂದ ಅವರ  ಅಂಕಣ ಬರಹಗಳು ಗಮನಾರ್ಹವಾಗಿದ್ದು ದೊಡ್ಡ ಕೊಡುಗೆಯಾಗಿದೆ ಎಂದರು.

‘ನಾನೊಬ್ಬ ಕನ್ನಡಿಗ ಅದಕ್ಕಿಂತ ಹೆಚ್ಚಿನ ಪದವಿ ಬೇಕಿಲ್ಲ. ನನ್ನ ಉಪ ಜೀವನ ಇಂಗ್ಲಿಷ್‌. ಆದರೆ, ನನ್ನ ಜೀವನ ಕನ್ನಡ. ಭಾಷೆ ಉಳಿಸಲು ಕನ್ನಡ ಸರ್ಕಾರ ಕನ್ನಡಪರ ಹೋರಾಟಕ್ಕೆ ಮುಂದಾಗಬೇಕು. ನೆಲದ ಭಾಷೆ ಉಳಿಯಬೇಕು ಎಂಬುದು ನಮ್ಮ ಒತ್ತಾಸೆ. ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಜಾರಿ ಕುರಿತು ಸುಪ್ರೀಂ ಕೋರ್ಟ್‌ ಆದೇಶ ಎದುರು ನೋಡುವಂತಾಗಿದೆ. ಕನ್ನಡಕ್ಕೆ ಅನ್ಯಾಯವಾದಲ್ಲಿ ಹೋರಾಟ ಅನಿವಾರ್ಯ’ ಎಂದರು.

‘ಹಾಮಾನಾ ಕನ್ನಡಪರ ನಿಲುವುಗಳು’ ಪುಸ್ತಕ ಬಿಡುಗಡೆ ಮಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಮಾತನಾಡಿ, ಕನ್ನಡದ ಸಾಕ್ಷಿ ಪ್ರಜ್ಞೆಯಾಗಿದ್ದ ಹಾಮಾನಾ ತಮ್ಮ ಬರಹಗಳ ನಡುವೆ ಇನ್ನೂ ಜೀವಂತವಾಗಿದ್ದಾರೆ. ಕನ್ನಡ ಮತ್ತು ಕರ್ನಾಟಕ ಇಂದು ಎದುರಿಸುವ ಸೋಲು ಬಿಕ್ಕಟ್ಟಿನ ಸಂದರ್ಭದಲ್ಲಿ ಹಾಮಾನಾ ಹೆಚ್ಚು ಪ್ರಸ್ತುತವಾಗಿ ಕಾಣುತ್ತಾರೆ.

ಆಂಗ್ಲ ಭಾಷೆಯ ಪ್ರಭಾವ ಕನ್ನಡ ಭಾಷೆ ಬದಕಿನ ಮೇಲೆ ಪರಿಣಾಮ ಬೀರುವಾಗ ಹಾಮಾನಾ ನಡೆ ನಮ್ಮನ್ನು ಅವಲೋಕನಕ್ಕೆ ಎಡೆ ಮಾಡಿಕೊಡುತ್ತದೆ. ಕನ್ನಡದ ನಾಯಕರಾಗಿದ್ದ ಅವರು ಬರೆದಂತೆ ಬದುಕಿದ್ದರು ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಹಾಮಾನಾ ಬಹಳ ಸ್ಪಷ್ಟ ನಿಲುವು ಹೊಂದಿದ್ದರು. ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ, ಇತರರಿಗೆ ಬಗ್ಗುವ ಜಾಯಮಾನ ಅವರದ್ದಾಗಿರಲಿಲ್ಲ ಎಂದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ ಗೌಡ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ಡಾ.ಭೈರಮಂಗಲ ರಾಮೇಗೌಡ ಅಭಿನಂದನಾ ನುಡಿಗಳನ್ನಾಡಿದರು. ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ, ತುಂಗಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.ಎಸ್‌.ಸೋಮಶೇಖರ್‌, ಡಾ.ಹಾಮಾನಾ ಪುತ್ರ ಎಚ್‌.ಎಂ. ರವೀಂದ್ರ ಉಪಸ್ಥಿತರಿದ್ದರು. ಡಾ.ಪದ್ಮಾ ಶೇಖರ್‌ ಸ್ವಾಗತಿಸಿ, ಉಪನ್ಯಾಸಕ ಹರೀಶ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.